ಶಿವಮೊಗ್ಗ, ಜನವರಿ 04 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಆಂದೋಲನದ ಅಂಗವಾಗಿ ಜನವರಿ 19ರಿಂದ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಪಲ್ಸ್‍ಪೋಲಿಯೋ ಲಸಿಕಾ ಅಭಿಯಾನವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಲಸಿಕಾ ಆಂದೋಲನದ ಅವಧಿಯಲ್ಲಿ 0-5ವರ್ಷದೊಳಗಿನ ಗ್ರಾಮಾಂತರ ಪ್ರದೇಶದ 93740, ನಗರ ಪ್ರದೇಶದ 54,935 ಮಕ್ಕಳು ಸೇರಿದಂತೆ ಒಟ್ಟು 1,48,675ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅಷ್ಟೇ ಅಲ್ಲದೇ ಕೊಳಚೆ ಪ್ರದೇಶ, ಅಲೆಮಾರಿಗಳು, ಇಟ್ಟಿಗೆ ಸುಡುವ ಗೂಡುಗಳು, ಕಟ್ಟಡ ನಿರ್ಮಾಣದ ಸ್ಥಳಗಳು, ಇತರೆ ವಲಸೆಗಾರರ ಪ್ರದೇಶಗಳು, ಸೆಟಲ್ಡ್ ಮತ್ತು ಅಪಾಯಕಾರಿ ಪ್ರದೇಶದಲ್ಲಿ ನೆಲೆಸಿರುವ ಮಕ್ಕಳಿಗೆ ಲಸಿಕೆ ಹಾಕಲು ಗುರಿ ನಿಗಧಿಪಡಿಸಲಾಗಿದೆ ಎಂದ ಅವರು ಅದಕ್ಕಾಗಿ ಜಿಲ್ಲೆಯಾದ್ಯಂತ 867 ಲಸಿಕಾ ಕೇಂದ್ರಗಳು ಹಾಗೂ ಅದರ ವ್ಯವಸ್ಥಿತ ನಿರ್ವಹಣೆಗೆ 1,734 ತಂಡಗಳನ್ನು ರಚಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಇವರೊಂದಿಗೆ 4,328 ವ್ಯಾಕ್ಸಿನೇಟರ್ಸ್, 210ಮೇಲ್ವಿಚಾರಕರು, 30ಟ್ರಾನ್ಸಿಟ್ ತಂಡ ಹಾಗೂ 19ಸಂಚಾರಿ ತಂಡಗಳನ್ನು ರಚಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ 600 ಆರೋಗ್ಯ ಸಿಬ್ಬಂಧಿ ಮತ್ತು ಮೇಲ್ವಿಚಾರಕರು, 2,402 ಅಂಗನವಾಡಿ ಕಾರ್ಯಕರ್ತೆಯರು, 1279ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 4,281ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, 163ಮಂದಿ ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳು, ಉಸ್ತುವಾರಿ ಅಧಿಕಾರಿಗಳು, ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಈ ಅಭಿಯಾನಕ್ಕೆ 9429ವಯಲ್ಸ್ ಲಸಿಕೆ ಅಗತ್ಯವಾಗಿದ್ದು, ಲಸಿಕೆಗಳನ್ನು ಜಿಲ್ಲಾ ಆರೋಗ್ಯ ಕೇಂದ್ರ ಕಚೇರಿ, ತಾಲೂಕು ಆರೋಗ್ಯ ಕೇಂದ್ರ ಕಚೇರಿ, ಸಾರ್ವಜನಿಕ ಆಸ್ಪತ್ರೆಗಳು, ನಗರ ಕುಟುಂಬ ಕಲ್ಯಾಣ ಕೇಂದ್ರ, ಸಮುದಾಯ ಆರೋಗ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಈ ಲಸಿಕೆಯನ್ನು ಸುರಕ್ಷಿತವಾಗಿಡಲು ಕ್ರಮ ವಹಿಸಲಾಗಿದೆ. ಲಸಿಕೆಯನ್ನು ನಿಗಧಿಪಡಿಸಿದ ಸ್ಥಳಕ್ಕೆ ತಲುಪಿಸಲು ವಾಹನಗಳನ್ನು ಒದಗಿಸಲಾಗುವುದು ಎಂದವರು ತಿಳಿಸಿದ್ದಾರೆ.
ಅಲ್ಲದೇ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕಾ ಆಂದೋಲನದ ಕುರಿತು ಮಾಹಿತಿಯನ್ನು ತಲುಪಿಸಲು ಹಾಗೂ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆತರಲು ಕ್ರಮವಹಿಸಲಾಗಿದೆ ಎಂದು ತಿಳಿಸಿರುವ ಅವರು, ಮಕ್ಕಳ ಪೋಷಕರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಗತ್ಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಡಾ|| ಆರ್.ನಾರಾಯಣ್ ಅವರು ಮಾತನಾಡಿ, ಪಲ್ಸ್ ಪೋಲಿಯೋ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದು 25ಸಂವತ್ಸರಗಳು ಕಳೆಯುತ್ತಿರುವ ಈ ಸಂದರ್ಭದಲ್ಲಿ ಭಾರತ ದೇಶದಲ್ಲಿ ಕಳೆದ 9ವರ್ಷಗಳಿಂದ ಈ ರೋಗಾಣು ಪತ್ತೆಯಾಗಿಲ್ಲದಿರುವುದು ಸಂತಸದ ಸಂಗತಿಯಾಗಿದೆ. ಆದರೂ ನೆರೆಯ ಪಾಕಿಸ್ತಾನದಂತಹ ರಾಷ್ಟ್ರದಲ್ಲಿ ಇಂದಿಗೂ ಪೋಲಿಯೋ ಜೀವಂತವಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಆದರೆ ಈಗಾಗಲೇ ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಘೋಷಿಸಲಾಗಿದೆ ಎಂದ ಅವರು, ಈ ಲಸಿಕಾ ಆಂದೋಲನವು ಶಿವಮೊಗ್ಗ ಜಿಲ್ಲೆ ಮುಂಚೂಣಿಯಲ್ಲಿದ್ದು, ಮಾದರಿಯಾಗಿ ಅನುಷ್ಠಾನಕ್ಕೆ ತಂದ ತೃಪ್ತಿ ಇದೆ. ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳ ಸಂಘಟಿತ ಪ್ರಯತ್ನ ಈ ಯಶಸ್ಸಿಗೆ ಕಾರಣವಾಗಿದೆ ಎಂದವರು ನುಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಆರ್.ಸಿ.ಹೆಚ್.ಡಾ||ನಾಗರಾಜ್‍ನಾಯ್ಕ್, ಡಾ||ಶಂಕರಪ್ಪ, ಡಾ||ನಟರಾಜ್ ಸೇರಿದಂತೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.

error: Content is protected !!