ಶಿವಮೊಗ್ಗ, ಏಪ್ರಿಲ್ 11 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಎಲ್ಲಾ ಪಕ್ಷದ ರಾಜಕೀಯ ವ್ಯಕ್ತಿಗಳು ಜಾತಿ, ಧರ್ಮ, ವರ್ಣದ ಆಧಾರದ ಮೇಲೆ ಮತಯಾಚನೆ ಮಾಡುವುದು, ವೈಯಕ್ತಿಕವಾಗಿ ನಿಂದಿಸುವುದು, ಯಾರೇ ವ್ಯಕ್ತಿಗಳು ಅಥವಾ ನಿಯೋಜಿತ ತಂಡಗಳು ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಸೀದಿ, ಚರ್ಚ್ ಇವುಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗೆ ಒಳಪಡುವುದರಿಂದ ಚುನಾವಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳ ಗಮನಕ್ಕೆ ಬಂದರೆ ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ಈವರೆಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುವಿಧಾ ಅಡಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ 39ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ರಾಜಕೀಯೇತರವಾಗಿರುವ ಧಾರ್ಮಿಕ, ಮದುವೆ ಹಾಗೂ ಇತರೆ ರಾಜಕೀಯೇತರವಾದ 184ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಈವರೆಗೆ ಸಿ-ವಿಜಲ್ನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ 22ದೂರುಗಳು ದಾಖಲಾಗಿವೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ 10ಪ್ರಕರಣಗಳಿಗೆ ಮೊಕದ್ದಮೆ ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.