ಶಿವಮೊಗ್ಗ, ಎ.12 ಶಿವಮೊಗ್ಗ ರಂಗಾಯಣದಲ್ಲಿ ಆಯೋಜಿಸಲಾಗಿರುವ ಮಕ್ಕಳ ಬೇಸಿಗೆ ಶಿಬಿರ `ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ’ಕ್ಕೆ ರಂಗ ನಿರ್ದೇಶಕ ಕೆ.ಜಿ.ಕೃಷ್ಣಮೂರ್ತಿ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಪೂರಕವಾಗಿದೆ. ಶಿಬಿರಗಳ ಮಕ್ಕಳಲ್ಲಿ ಹೊಸತನವನ್ನು ಉಂಟು ಮಾಡುವಂತಹ ಅವರಲ್ಲಿ ಸೃಜನಶೀಲತೆಯನ್ನು ಬೆಳೆಸುವಂತಹ ಹಾಗೂ ಯೋಚಿಸುವ ಮನೋಭಾವವನ್ನು ಬೆಳೆಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ವೈದ್ಯ ಡಾ.ಕೆ.ಎಸ್.ಗಂಗಾಧರ ಅವರು ಮಾತನಾಡಿ ರಂಗಭೂಮಿ ಸಂಸ್ಕಾರವನ್ನು ಕಲಿಸುತ್ತದೆ. ಕೇವಲ ಮನೋರಂಜನೆ ಮಾತ್ರವಲ್ಲದೆ ಬೋಧನೆ ಮತ್ತು ನಮ್ಮಲ್ಲಿ ಪ್ರಚೋದನೆಯನ್ನು ಸಹ ಉಂಟು ಮಾಡುತ್ತದೆ. ರಂಗಭೂಮಿ ಹೃದಯಕ್ಕೆ ಅತ್ಯಂತ ಆಪ್ತವಾಗಿದ್ದು, ನಮ್ಮಲ್ಲಿ ಸಾಂಸ್ಕøತಿಕವಾದ ಮನೋಭಾವನೆಯನ್ನು ಮೂಡಿಸುತ್ತದೆ. ಇಂತಹ ಬೇಸಿಗೆ ಶಿಬಿರಗಳು ಕೇವಲ ನಟನೆಯನ್ನು ಮಾತ್ರ ಕಲಿಸುವುದಲ್ಲದೆ ನಮ್ಮ ವ್ಯಕ್ತಿತ್ವವನ್ನು ರೂಪಿಸಲು ನೆರವಾಗುತ್ತದೆ ಎಂದು ಹೇಳಿದರು.
ಲೇಖಕಿ ಟಿ.ಎಲ್.ರೇಖಾಂಬ ಅವರು ಮಕ್ಕಳಿಗೆ ಕನಸಿನ ಬಗ್ಗೆ ವಿವರಿಸಿ ಚಿಣ್ಣರ ಕುರಿತಾದ ಹಾಡನ್ನು ಹಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗ ರಂಗಾಯಣ ನಿರ್ದೇಶಕ ಎಂ.ಗಣೇಶ್ ಅವರು ಮಾತನಾಡಿ ಚಿಣ್ಣರ ಬೇಸಿಗೆ ಶಿಬಿರ ಎಪ್ರಿಲ್ 30ರವರೆಗೆ ನಡೆಯಲಿದ್ದು, 250ಮಕ್ಕಳು ಭಾಗವಹಿಸುತ್ತಿದ್ದಾರೆ. ಮಕ್ಕಳ ಎಂಟು ತಂಡಗಳನ್ನು ಮಾಡಿ ಪ್ರತಿ ತಂಡ ಇಬ್ಬರು ನಿರ್ದೇಶಕರ ಮಾರ್ಗದರ್ಶನದಲ್ಲಿ ಒಂದು ನಾಟಕವನ್ನು ರಚಿಸಿ ಅಭಿನಯ ಕಲಿಸಲಾಗುವುದು. ರಂಗಭೂಮಿಗೆ ಸಂಬಂಧಿಸಿದಂತೆ ಅಭಿನಯ, ಹಾಡುಗಾರಿಕೆ, ಮಾತು, ನೃತ್ಯ ಸೇರಿದಂತೆ ಅಗತ್ಯ ಕಲೆಗಳನ್ನು ಕಲಿಸಲಾಗುವುದು. ಕೊನೆಯ ಎರಡು ದಿನಗಳ ಕಾಲ ಮಕ್ಕಳು ಶಿಬಿರದಲ್ಲಿ ಕಲಿತ ನಾಟಕಗಳ ಪ್ರದರ್ಶನ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ.ಹಿರೇಮಾಗಡಿ ಅವರು ಶಿಬಿರಕ್ಕೆ ಶುಭ ಹಾರೈಸಿದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಕಲಾವಿದೆ ಇಂದು ಭದ್ರಾವತಿ ಅವರು ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಶಿಬಿರದ ನಿರ್ದೇಶಕ ಚಂದ್ರು ತಿಪಟೂರು ಉಪಸ್ಥಿತರಿದ್ದರು.


error: Content is protected !!