ಶಿವಮೊಗ್ಗ, ನವೆಂಬರ್ 18 : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇದರ 6 ನೇ ಘಟಿಕೋತ್ಸವ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ನವೆಂಬರ್ 25 ರ ಬೆಳಿಗ್ಗೆ 11 ಗಂಟೆಗೆ ಬಯಲು ರಂಗಮಂದಿರ, ಕೃಷಿ ಮಹಾವಿದ್ಯಾಲಯ ಆವರಣ, ನವುಲೆ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.
ಘಟಿಕೋತ್ಸವದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಇವರು ವಹಿಸುವರು. ಕೃಷಿ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಬಸವನಗೌಡ ಚನ್ನಬಸವನಗೌಡ ಪಾಟೀಲ್ ಇವರ ಗೌರವ ಉಪಸ್ಥಿತಿ ಇರಲಿದ್ದು, ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾನಿರ್ದೇಶಕ(ಕೃಷಿ ಶಿಕ್ಷಣ)ರಾದ ಡಾ.ಆರ್.ಸಿ.ಅಗ್ರವಾಲ್ ಘಟಿಕೋತ್ಸವ ಭಾಷಣ ಮಾಡುವರು. ಹೈದರಾಬಾದ್‍ನ ಭಾರತ್ ಬಯೋಟೆಕ್ ಸಂಸ್ಥೆಯ ಡಾ.ಕೃಷ್ಣಮೂರ್ತಿ ಎಲ್ಲಾ ಇವರು ಗೌರವ ಡಾಕ್ಟರೇಟ್ ಸ್ವೀಕರಿಸುವರು ಎಂದು ಪ್ರಕಟಣೆ ತಿಳಿಸಿದೆ.
