ಶಿವಮೊಗ್ಗ, ಜುಲೈ. 10 ಜನರಲ್ಲಿ ಸೈನಿಕರ ಬಗ್ಗೆ ವಿಶೇಷವಾದ ಅಭಿಮಾನ ಹಾಗೂ ಗೌರವವನ್ನು ಹೆಚ್ಚಿಸುವ ಸಲುವಾಗಿ ನಗರದ ಸೈನಿಕ ಕಲ್ಯಾಣ ಇಲಾಖೆ ಎದುರಿನ ಉದ್ಯಾನವನದಲ್ಲಿ ಸೈನಿಕರ ಸಿಮೆಂಟ್ ಶಿಲ್ಪಾಕೃತಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ತಿಳಿಸಿದರು.
ಇಂದಿನಿಂದ ಜುಲೈ 25ರ ವರೆಗೆ ನಡೆಯಲಿರುವ ಸಿಮೆಂಟ್ ಶಿಲ್ಪ ಶಿಬಿರ ಕಾರ್ಯಕ್ರಮಕ್ಕೆ ಅವರು ನಗರದ ಸರ್ಕಾರಿ ನೌಕರರ ಭವನದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಥೀಮ್ಗಳ ಕುರಿತಾದ ಸಿಮೆಂಟ್ ಹಾಗೂ ಕಲ್ಲುಗಳಿಂದ ಕಲಾತ್ಮಕ ರಚನೆಗಳನ್ನು ರಚಿಸಲಾಗಿದೆ. ಅದೇ ಮಾದರಿಯಲ್ಲಿ ವಿಭಿನ್ನವಾಗಿ ರಾಜ್ಯದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಒಂದು ಸ್ಮಾರಕವಾಗಿ ಈ ಉದ್ಯಾನವನದಲ್ಲಿ ಸೈನಿಕರ ಕಲಾಕೃತಿಯನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ 15ಮಂದಿ ಕಲಾವಿದರು ಶಿಬಿರದಲ್ಲಿ ಸೈನಿಕರ ವಿವಿಧ ಭಂಗಿಗಳ ಕಲಾಕೃತಿಗಳನ್ನು ರಚಿಸಲಿದ್ದಾರೆ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಿಲ್ಪ ಕಲಾವಿದರುಗಳಿಗೆ ಗೌರವ ಧನವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ್ಯ ಶಿಲ್ಪಿ ರು,ಕಾಳಾಚಾರ್ ಮಾತನಾಡಿ ಶಿಲ್ಪಿಗಳು ಸಾವಿರಾರು ವರ್ಷಗಳ ಕಾಲ ಉಳಿಯುವ ರಚನೆಗಳನ್ನು ನಿರ್ಮಿಸುವ ಸಾಮಥ್ರ್ಯ ಉಳ್ಳವರು. ಹಾಗೆಯೇ ಶಿಲ್ಪಿಗಳನ್ನು ಸಲಹುವವರು ಸಹ ನಮಗೆ ಮುಖ್ಯವಾಗುತ್ತಾರೆ. ಸರ್ಕಾರ ಶಿಲ್ಪಿಗಳ ಪ್ರೋತ್ಸಾಹಕ್ಕೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಕುರಿತು ಸರ್ಕಾರ ಗಮನಿಸ ಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ನಮ್ಮ ಕಲಾವಿದರು ಹಾಗೂ ಶಿಲ್ಪಿಗಳು ಚಾರಿತ್ರಿಕ ನಿರ್ಲಕ್ಷ್ಯವನ್ನು ಮಾಡಬಾರದು. ರಾಜರ ಆಳ್ವಿಕೆಯಲ್ಲಿ ಕಲಾವಿದರು ಹಾಗೂ ಶಿಲ್ಪಿಗಳ ಹೆಸರನ್ನು ಕೆತ್ತನೆಗಳ ಮೇಲೆ ಮೂಡಿಸುತ್ತಿರಲಿಲ್ಲ. ಆದರೆ ಈಗ ಪ್ರಜಾಪ್ರಭುತ್ವವಿದೆ. ಶಿಲ್ಪಿಗಳು ರಚನೆಯ ಮೇಲೆ ತಮ್ಮ ಹೆಸರು ಹಾಗೂ ಶಿಲ್ಪಕಲಾ ಅಕಾಡೆಮಿಯ ಹೆಸರನ್ನು ಮೂಡಿಸಿ ಚರಿತ್ರೆಯಾಗಿ ಉಳಿಸುವ ಪ್ರಯತ್ನವನ್ನು ಮಾಡಬೇಕು ಎಂದು ಅವರು ಹೇಳಿದರು.
15ದಿನಗಳ ಕಾಲ ನಡೆಯಲಿರುವ ಶಿಲ್ಪ ಶಿಬಿರದಲ್ಲಿ ಹಿರಿಯ ಶಿಲ್ಪ ಕಲಾವಿದರಾದ ಕೆ.ನಾರಾಯಣ ರಾವ್ ಶಿವಮೊಗ್ಗ, ನಾಗರಾಜ್ ರಾಯಚೂರು, ವಿಶಾಲ್ ಕೆ. ಬೆಂಗಳೂರು, ಪ್ರವೀಣ್ ದಾವಣಗೆರೆ, ಜೀವನ್ ಟಿ.ಡಿ, ವಿನಾಯಕ ಎಂ.ಕೆ ಶಿವಮೊಗ್ಗ, ದೇವಪ್ಪ ರಾಯಚೂರು, ಮುರುಗೇಶ್ ಉಡುಪಿ, ವೆಂಕಟೇಶ ಕೆ.ಟಿ ಚಿತ್ರದುರ್ಗ, ಮೋಹನ್ ಎಂ ಬೆಂಗಳೂರು, ಗಣೇಶ ಶಿವಮೊಗ್ಗ, ಮುದುಕಪ್ಪ ರಾಯಚೂರು, ಧನಶೇಖರ ಕೆ, ಮಂಜುನಾಥ ಟಿ ಮತ್ತು ಜಿ.ಎಸ್.ಧರ್ಮರಾಜ ಶಿವಮೊಗ್ಗ ಅವರು ಕಲಾಕೃತಿಗಳನ್ನು ರಚಿಸುವರು. ಸಹಾಯಕ ಶಿಲ್ಪ ಕಲಾವಿದರು ಸಹ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಎನ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಶಿಲ್ಪಿಗಳು ಹಾಜರಿದ್ದರು.