ಗೋಧೂಳಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹಸುಗಳು ನಮ್ಮನ್ನು ಬರಮಾಡಿಕೊಳ್ಳುತ್ತಿದ್ದವು. ಈಗ ಕೊಟ್ಟಿಗೆಗಳೆಲ್ಲಾ ಬರಿದಾಗುತ್ತಿವೆ. ಹೈನುಗಾರಿಕೆಗೇ ಅಂಟಿಕೊಂಡವರು, ಲಾಭದ ಚಿಂತನೆ ಇರುವವರು ಸ್ವಯಂ ಉದ್ಯೋಗಕ್ಕಾಗಿ ಒಗ್ಗಿಕೊಂಡವರು ಗೋವು ಸಾಕುತ್ತಾರೆ. ದೇಶೀಯ ತಳಿಗಳು ಅವನತಿಯ ಅಂಚಿನಲ್ಲಿವೆ. ವರ್ಷದ 365 ದಿನವೂ ಗೋವಿನ ಸೇವೆ ಮಾಡುವ, ಗೋವಿನ ನೆರವಿಗೊಂದು ವಾಹನ ಇಟ್ಟುಕೊಂಡಿರುವ ಅಪರೂಪದ ವ್ಯಕ್ತಿಯೊಬ್ಬರು ತನ್ನ ಕುಟುಂಬದೊಂದಿಗೆ ನಿತ್ಯವೂ ಗೋಸೇವೆ ಅದರಲ್ಲಿಯೇ ಗೋಪೂಜೆಯನ್ನು ಮಾಡುತ್ತಾರೆಂದರೆ ಅಚ್ಚರಿಯೂ ಹೌದು, ಸತ್ಯವೂ ಹೌದು.
ಗೋಪಾಲಕ
ಸಾಗರದ ಶಿವಪ್ಪನಾಯಕ ನಗರದ ವಾಸಿ ಪುರುಷೋತ್ತಮ ಹೆಗಡೆ 2008ರಲ್ಲಿ ಪುಣ್ಯಕೋಟಿ ಗೋರಕ್ಷಣಾ ವೇದಿಕೆ (ರಿ.) ಎನ್ನುವ ಟ್ರಸ್ಟ್‍ವೊಂದನ್ನು ನಿರ್ಮಿಸಿಕೊಂಡು ಬೀಡಾಡಿ ದನಗಳು, ಅಪಘಾತಕ್ಕೊಳಗಾದವು ಎಲ್ಲವನ್ನೂ ತನ್ನ ಮನೆಯಲ್ಲಿಯೇ ಕಟ್ಟಿಕೊಂಡು ಅದಕ್ಕೆ ಮೇವು ನೀಡಿ ಶುಶ್ರೂಷೆ ಮಾಡಿ ಸಂತೋಷಪಡುತ್ತಿದ್ದಾರೆ. ಇದೆಲ್ಲಾ ಪ್ರಸ್ತುತ ದಿನಮಾನದಲ್ಲಿ ಸಾಧ್ಯವೇ ಎಂದರೆ ಉತ್ತರ ಇವರ ಗೋಶಾಲೆಯಲ್ಲಿದೆ. ಪುರುಷೋತ್ತಮರ ಅಕ್ಕ ಶೋಭಾ ದೀಕ್ಷಿತ್ ತನ್ನ ಮನೆಯನ್ನೇ ಈ ಪುಣ್ಯ ಕಾಯಕಕ್ಕಾಗಿ ಬಿಟ್ಟುಕೊಟ್ಟಿದ್ದಾರೆ. ಕಷ್ಟಜೀವಿ ಪುರುಷೋತ್ತಮ ಹೊಲಗದ್ದೆಗಳಲ್ಲಿ ಬೆಳೆದ ಹುಲ್ಲನ್ನು ಬೇಡಿ ಹೊತ್ತು ತಂದು ಹಸುಗಳಿಗೆ ಮೇವುಣಿಸುತ್ತಿದ್ದಾರೆ. ಆತನ ನಿರಂತರ ನಿಸ್ವಾರ್ಥ ಕಾಯಕವನ್ನು ನೋಡಿ ದಾನಿಗಳು ಕೈಜೋಡಿಸಿದ್ದಾರೆ. ದೀಪಾವಳಿ ಹಬ್ಬದಲ್ಲಿ ಪ್ರತಿ ವರ್ಷ ನೂರಾರು ದನಗಳಿಗೆ ಇಲ್ಲಿ ಗೋಪೂಜೆ ನಡೆಯುತ್ತದೆ. ಸಾಗರ ಪಟ್ಟಣದ ಜನ ಇಲ್ಲಿಯೇ ಬಂದು ಸಾರ್ವತ್ರಿಕವಾಗಿ ಗೋಪೂಜೆ ನಡೆಸುತ್ತಾರೆ. ಪ್ರಚಾರವಿಲ್ಲದೆ ಗೋವಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಪರೂಪದ ಈ ಗೋಪಾಲಕನಿಗೆ ಅಹಂಕಾರವೂ ಇಲ್ಲ, ಸೋಮಾರಿತನವೂ ಇಲ್ಲ. ಯಾವುದೇ ಪ್ರಚಾರದ ಗೋಜಿಗೂ ಹೋಗುವುದಿಲ್ಲ.
ಗೋವಿಗೆ ನೆರವು
ಮನುಷ್ಯನಿಗೆ ತೊಂದರೆ ಆಯಿತು, ಅಪಘಾತವಾಯಿತು ಎಂದರೆ ತಕ್ಷಣ ಅಂಬುಲೆನ್ಸ್ ಕರೆಸಿ ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತದೆ. ಅಂಥದ್ದೊಂದು ಗೋವುಗಳಿಗಾಗಿಯೇ ಅಂಬುಲೆನ್ಸ್ ಸಾಗರದಲ್ಲಿ ಪುರುಷೋತ್ತಮ ತನ್ನ ಸಂಘಟನೆ ವತಿಯಿಂದ ತಂದಿದ್ದಾರೆ. ದಾನಿಗಳು ಇದಕ್ಕೆ ಕೈಜೋಡಿಸಿದ್ದಾರೆ. ತೀರ್ಥಹಳ್ಳಿಯ ಬಾಳಗಾರು ಮಠದ ಶ್ರೀಗಳು ವಾಹನಕ್ಕೂ ಸೇರಿ 50 ಸಾವಿರ ರೂಪಾಯಿಗಳನ್ನು ನೀಡಿರುವುದನ್ನು ಪುರುಷೋತ್ತಮ ಸ್ಮರಿಸುತ್ತಾರೆ. ಅವರ ಮೊಬೈಲ್‍ಗೆ ಒಂದು ಫೋನ್ ಮಾಡಿದರೆ ಕಾಲು, ಕೊಂಬು, ಕಿವಿ ಮುರಿದುಕೊಂಡ ದನಗಳನ್ನು ತಕ್ಷಣ ಪ್ರಥಮ ಚಿಕಿತ್ಸೆ ಮಾಡಿ ತಮ್ಮ ಗೋಶಾಲೆಗೆ ಒಯ್ಯುತ್ತಾರೆ. ಇಲ್ಲಿಯೂ ಲಾಭದ ಯೋಚನೆಯಿಲ್ಲ. ಅವುಗಳು ಆರೋಗ್ಯ ಹೊಂದಿದ ಮೇಲೆ ಸಂಬಂಧಪಟ್ಟವರು ಬಂದರೆ ಪತ್ರ ಬರೆಸಿಕೊಂಡು ಜಾನುವಾರುಗಳನ್ನು ನೀಡುತ್ತಾರೆ. 2008ರಿಂದ ಇಲ್ಲಿಯವರೆಗೆ ಒಂದು ಸಾವಿರಕ್ಕೂ ಅಧಿಕ ಜಾನುವಾರುಗಳು ಇವರ ಗೋಶಾಲೆಯಲ್ಲಿ ಶುಶ್ರೂಷೆಗೊಂಡಿವೆ. 400ಕ್ಕೂ ಹೆಚ್ಚು ಗೋವುಗಳ ಅಂತ್ಯಸಂಸ್ಕಾರವನ್ನು ಮಾಡಿರುವ ಪುರುಷೋತ್ತಮ ಒಬ್ಬ ಅಪರೂಪದ ಗೋಸಂರಕ್ಷಕ. ಇವರ ಜೀವನಕ್ಕೆ ಗ್ಯಾಸ್ ಸ್ಟೌ ರಿಪೇರಿ ಮತ್ತು ಬೇರೆಯವರಿಂದ ಅಡಿಕೆ ತಂದು ಸುಲಿಸುವುದೇ ಆಧಾರ.
ಸರ್ಕಾರ-ಸಹಕಾರ
ಗೋಶಾಲೆಗಾಗಿ ಜಾಗ ಕೇಳಿ, ಅರ್ಜಿ ಬರೆದು ಅಲೆದೂ ಅಲೆದೂ ಸಾಕಾದ ಪುರುಷೋತ್ತಮ ಅಂತಿಮವಾಗಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ಸಹಕಾರದಿಂದ ಒಂದು ಎಕರೆ ಜಾಗ ಕುಂಟಗೋಡಿನ ಸಮೀಪ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದಾಖಲಾತಿಗಳು ಸಂಪೂರ್ಣಗೊಂಡಿವೆ. ಶೀಘ್ರ ಪಹಣೆ ಇವರ ಕೈಸೇರಲಿದೆ. ಸಾಗರದ ಕಂದಾಯ ಇಲಾಖೆಯ ಸಿಬ್ಬಂದಿಗಳು, ಅರಣ್ಯ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿಯಿಂದ ಗೋಶಾಲೆಯ ಜಾಗದ ಅನುಮತಿಗೆ ಹಸಿರು ನಿಶಾನೆ ದೊರೆತಿದೆ.
ಕಾಡಿನಲ್ಲೀಗ ಗೋಶಾಲೆ
ಪುರುಷೋತ್ತಮ ಮತ್ತು ಕುಟುಂಬದವರು ಕುಂಟಗೋಡಿನ ಕಾಡಿನಲ್ಲಿಯೇ ತಮಗೆ ನೀಡಲಾಗುವ ಜಾಗದಲ್ಲಿ ಗೋಶಾಲೆ ತೆರೆದಿದ್ದಾರೆ. ನಾಲ್ಕು ತಗಡುಗಳ ಮೂಲಕ ಮನೆ ಮಾಡಿಕೊಂಡಿದ್ದು ಇಲ್ಲಿರುವ ಮರಗಳಿಗೆ ಜಾನುವಾರು ಕಟ್ಟಿದ್ದಾರೆ. ಒಂದು ಕಿಲೋಮೀಟರ್ ದೂರದಿಂದ ಸುಡು ಬಿಸಿಲಿನಲ್ಲಿಯೂ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ತರಲಾಗುತ್ತಿದೆ. ನಿರ್ಜನವಾದ ಕಾಡಿನಲ್ಲಿ ಅವರ ಪ್ರೀತಿಯ ಗೋವುಗಳಾದ ಸಿಂಡ್ರೆಲಾ, ಲಕ್ಷ್ಮೀ, ತಂಗಿ, ಗುಂಡ, ಶ್ಯಾಮ, ಗೌರಿ, ಪುಟ್ಟ, ಪಾಪು ಎಲ್ಲವೂ ಕೂಗಿ ಕರೆದರೆ ಸಾಕು, ಒಂದಾದಮೇಲೊಂದು ಬಂದು ಮೇವು ತಿನ್ನುತ್ತವೆ. ಪುಟ್ಟ ಕರುವೊಂದು ಜೀಕಿ ಪುರುಷೋತ್ತಮ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತದೆ. ಗೋವಿನ ಜೊತೆಯಲ್ಲಿಯೇ ಬದುಕು ಸಾಗಿಸುತ್ತಿರುವ ಪುರುಷೋತ್ತಮರವರಿಗೆ ಇವರ ಟ್ರಸ್ಟ್‍ನ ಕುಂಟಗೋಡು ಸೀತಾರಾಂ ಬೆನ್ನೆಲುಬಾಗಿ ನಿಂತಿದ್ದಾರೆ. ಕೆಲಸಕ್ಕೆ ಶಿವು, ವಿನಯ, ಶೋಭ ದೀಕ್ಷಿತ್ ಸಾಥ್ ನೀಡುತ್ತಾರೆ. ಕಾಡಿನಲ್ಲೀಗ ಗೋಶಾಲೆ ತೆರೆದುಕೊಂಡಿದೆ.
ಪ್ರಚಾರದಿಂದ ದೂರ
ಸದಾ ಮಾತನಾಡುವ ಮನುಷ್ಯನಿಗಿಂತ ಮೌನದಲ್ಲಿಯೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಪ್ರಾಣಿಗಳು ಬಹಳ ಸೂಕ್ಷ್ಮ ಎನ್ನುವ ಪುರುಷೋತ್ತಮ ಹೆಗಡೆ, ಸದಾ ಪ್ರಚಾರದಿಂದ ದೂರ ಉಳಿಯುತ್ತಾರೆ. ಫೋಟೋಫೋಸಿಗೂ ನಾಚಿಕೊಳ್ಳುವ ಅವರು, ಗಾಯವಾದ ಗೋವುಗಳಿಗೆ ಎಣ್ಣೆ ಹಚ್ಚಿ ತಿಕ್ಕಿ ಕೀಲುಗಳನ್ನು ಸರಿ ಮಾಡುವಲ್ಲಿ ತೊಡಗಿಕೊಂಡಿರುತ್ತಾರೆ. ಪಶು ವೈದ್ಯಕೀಯ ತಜ್ಞರು ತಮ್ಮ ಕೆಲಸಕ್ಕೆ ಸಹಕಾರ ಮಾಡುತ್ತಿರುವುದನ್ನು ನೆನಪಿಸಿಕೊಳ್ಳುವ ಅವರು, ಮಲೆನಾಡು ಗಿಡ್ಡದಂತಹ ದೇಶೀಯ ತಳಿಗಳು ಉಳಿಯಬೇಕು. ಆ ನಿಟ್ಟಿನಲ್ಲಿ ನಾವು ಯೋಚಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ. ನಮ್ಮ ಜೊತೆಯಲ್ಲಿ ಮಾತನಾಡುತ್ತಲೇ ಅವರಿಗೆ ಗೋ ಶುಶ್ರೂಷೆಯ ಕರೆಗಳು ಬರುತ್ತಲೇ ಬರುತ್ತಿದ್ದವು. ಯಾವುದಾದರೂ ಗೋವಿಗೆ ತೊಂದರೆಯಾದರೆ ನಮ್ಮಲ್ಲಿ ತಂದುಬಿಡಿ ಎನ್ನುತ್ತಾರೆ. ಸಾಗರದ ಸುತ್ತಮುತ್ತ ಗೋವುಗಳಿಗೆ ಅಪಘಾತವಾದರೆ 9164697791 ನಂಬರಿಗೆ ಕರೆ ಮಾಡಿ.

error: Content is protected !!