ಕೃಷಿಯು ನಾಡಿನ ಗ್ರಾಮೀಣ ಜನತೆಯ ಮುಖ್ಯ ಅಂಗವಾಗಿರುವಂತೆಯೇ, ಕೃಷಿ ಪೂರಕ ಚಟುವಟಿಕೆಯಾದ ಪಶು ಪಾಲನೆ ಮತ್ತು ಕೋಳಿ ಸಾಕಾಣಿಕೆಯು ದೇಶದ ಆಹಾರೋತ್ಪಾದನೆ ಸಾಮರ್ಥ್ಯದ ದೃಷ್ಟಿಯಿಂದ ಮುಖ್ಯವಾದುದು. ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಾಣಿಕೆಯು ಒಂದು ಪ್ರಮುಖ ಉದ್ದಿಮೆಯಾಗಿ ಬೆಳೆಯುತ್ತಿದ್ದರೂ ಸಹ, ದೇಶದಲ್ಲಿ ಮಾಂಸ ಮತ್ತು ಮೊಟ್ಟೆ ಲಭ್ಯತೆಯಲ್ಲಿ ಸಾಕಷ್ಟು ಕೊರತೆಯಿದ್ದು, ಅದರ ಸುಧಾರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಹಳ್ಳಿಗಾಡುಗಳಲ್ಲಿ ನೆಲೆಸಿರುವ ಗ್ರಾಮೀಣ ರೈತರ ಅಭಿವೃದ್ಧಿಗಾಗಿ ಕೃಷಿ ಹಾಗೂ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಶ್ರಮಿಸುತ್ತಿವೆ.
ಈ ನಿಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನಾ ಸಾಮಥ್ರ್ಯ ಹೊಂದಿರುವ ತಳಿಗಳನ್ನು ಪರಿಚಯಿಸುವ ಸದುದ್ದೇಶದಿಂದ “ಗಿರಿರಾಜ” ಎಂಬ ಕೋಳಿ ತಳಿಗಳನ್ನು ಬಹಳ ಹಿಂದೆಯೇ ಪರಿಚಯಿಸಲಾಗಿದ್ದು, ಈ ತಳಿಯು ಗ್ರಾಮೀಣ ಮಹಿಳೆಯರ ಅಚ್ಚುಮೆಚ್ಚಿನ ಪ್ರಬೇಧವಾಗಿದೆ. ಈ ತಳಿಯು ಕರ್ನಾಟಕ ಹಾಗೂ ಭಾರತ ದೇಶದಲ್ಲಲ್ಲದೆ, ವಿದೇಶಗಳಾದ ಶ್ರೀಲಂಕಾ ಮತ್ತು ನೇಪಾಳಗಳಲ್ಲೂ ಹೆಚ್ಚು ಪ್ರಚಲಿತವಾಗಿದೆ. ಇದಲ್ಲದೆ, 2006ರಲ್ಲಿ ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿಜ್ಞಾನಿಗಳು ಹೆಚ್ಚು ಮೊಟ್ಟೆ ಉತ್ಪಾದಿಸುವ ಅಂಶವನ್ನು ಗಮನದಲ್ಲಿಟ್ಟುಕೊಂಡು “ಸ್ವರ್ಣಧಾರ” ಎಂಬ ಕೋಳಿ ತಳಿಯನ್ನು ಬಿಡುಗಡೆಗೊಳಿಸಿದ್ದಾರೆ. ಈ ತಳಿಯು ನಾಟಿ ಕೋಳಿಯನ್ನು ಹೋಲುವ ರೆಕ್ಕೆ ಪುಕ್ಕಗಳನ್ನು ಹೊಂದಿದ್ದು ನಾಟಿ ಕೋಳಿಗಿಂತ ಹೆಚ್ಚು ಮೊಟ್ಟೆಗಳನ್ನು ನೀಡುತ್ತದೆ. ಯಾವುದೇ ಭೌಗೋಳಿಕ ವಾತಾವರಣಕ್ಕೆ ಹೊಂದಿಕೊಂಡು ಹಿತ್ತಲಲ್ಲಿ ಬದುಕಬಲ್ಲ ಇವುಗಳಿಗೆ ಆಧುನಿಕ ವಸತಿ, ಸಮತೋಲನ ಆಹಾರ ಹಾಗೂ ಆರೋಗ್ಯ ರಕ್ಷಣಾ ಕ್ರಮಗಳ ಅವಶ್ಯಕತೆಯಿರುವುದಿಲ್ಲ.
ಸಾಕುವ ಸರಳ ವಿಧಾನಗಳು:
- ಸಾಕಣೆ ಮಾಡುವವರು ಒಂದು ದಿನದ ವಯಸ್ಸಿನ ಕೋಳಿ ಮರಿಗಳನ್ನು ಪಡೆದು, ಮೂರು ವಾರದ ವಯಸ್ಸಿನವರೆಗೂ ಬಿದಿರಿನ ಬುಟ್ಟಿಯೊಳಗೆ ಬಲ್ಬ್ನ್ನು ಜೋಡಿಸಿ ಕೃತಕ ಕಾವು ಕೊಡಬೇಕಾಗುತ್ತದೆ.
- ಕಾಗೆ, ಹದ್ದು, ಬೆಕ್ಕು ಮತ್ತು ನಾಯಿಗಳಿಂದ ಕೋಳಿ ಮರಿಗಳನ್ನು ರಕ್ಷಿಸಲು, ಸುಮಾರು ಅರ್ಧ ಕೆ.ಜಿ.ಯಷ್ಟು ದೇಹದ ತೂಕ ಹೊಂದುವವರೆಗೂ ಮನೆಯಲ್ಲಿ ಪೋಷಿಸಿ ನಂತರ ನಾಟಿ ಕೋಳಿಗಳಂತೆ ಹೊರಗಡೆ ಮೇಯಲು ಬಿಡಬಹುದು.
- ಕೊಕ್ಕರೆ ರೋಗದಿಂದ ರಕ್ಷಿಸಲು 8ನೇ ದಿನ, 6ನೇ ವಾರ ಮತ್ತು 8ನೇ ವಾರದ ವಯಸ್ಸಿನಲ್ಲಿ ಕೊಕ್ಕರೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು.
- ಈ ಸುಧಾರಿತ ತಳಿಯ ಕೋಳಿಗಳು ಬೆಳೆದು 5 ರಿಂದ 6 ತಿಂಗಳ ವಯಸ್ಸಿನವಾದಾಗ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಪ್ರತಿ 6 ರಿಂದ 8 ಕೋಳಿಗಳಿಗೊಂದರಂತೆ ಒಂದು ಹುಂಜ ಇರುವಂತೆ ನೋಡಿಕೊಳ್ಳಬೇಕು. ಸ್ಥಳೀಯ ನಾಟಿ ಹುಂಜಗಳನ್ನು ಸ್ವರ್ಣಧಾರ ಕೋಳಿಗಳ ಜೊತೆಗಿರಿಸದೇ ಅವುಗಳನ್ನೆಲ್ಲಾ ಮಾಂಸಕ್ಕಾಗಿ ವಿಲೇವಾರಿ ಮಾಡಬೇಕು.
- ಹಿತ್ತಲಲ್ಲಿ ಸಾಕುವಾಗ ಸ್ಥಳೀಯವಾಗಿ ದೊರಕುವ ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆ, ಗೋಧಿ, ಅಕ್ಕಿ ನುಚ್ಚು ಹಾಗೂ ಇತರೆ ಆಹಾರ ಧಾನ್ಯಗಳನ್ನು ಪ್ರತಿ ಕೋಳಿಗೆ 30 ರಿಂದ 50 ಗ್ರಾಂ.ನಂತೆ ಪ್ರತಿ ನಿತ್ಯ ಒದಗಿಸುವುದರಿಂದ ಅವುಗಳ ಮಾಂಸ ಮತ್ತು ಮೊಟ್ಟೆ ಉತ್ಪಾದನೆಯನ್ನು ಅಧಿಕಗೊಳಿಸಬಹುದು.
- ಸ್ವರ್ಣಧಾರ ಕೋಳಿಗಳು ಕಾವಿಗೆ ಕುಳಿತು ಮರಿ ಮಾಡಿಸುವ ಗುಣ ಹೊಂದಿರುವುದಿಲ್ಲ. ಆದುದರಿಂದ ಒಂದು ನಾಟಿ ಕಾವು ಕೋಳಿಯಿಂದ ಸುಮಾರು 8-10 ಮೊಟ್ಟೆಗಳನ್ನಿಟ್ಟು ಕಾವು ಕೊಟ್ಟು ಮರಿ ಮಾಡಿಸಬಹುದು.
ಸ್ವರ್ಣಧಾರ, ಗಿರಿರಾಜ ಮತ್ತು ಜವಾರಿ ಕೋಳಿಗಳ ತುಲನಾತ್ಮಕ ಹೋಲಿಕೆ
ಗುಣಲಕ್ಷಣಗಳು ಸ್ವರ್ಣಧಾರ ಗಿರಿರಾಜ ನಾಟಿ ಕೋಳಿ
8 ವಾರಗಳಲ್ಲಿ ಶರೀರದ ತೂಕ (ಗ್ರಾಂ.) 1000-1100 1600 600-700
ವಾರ್ಷಿಕ ಮೊಟ್ಟೆ ಉತ್ಪಾದನೆ 180-200 140-150 60-70
ಸರಾಸರಿ ಮೊಟ್ಟೆ ತೂಕ (ಗ್ರಾಂ.) 50-60 60 50
ವಯಸ್ಕ ಮೈ ತೂಕ (ಕಿ.ಗ್ರಾಂ.)
ಹುಂಜ 3.5–4.5 5-6 2.0-2.5
ಹೇಂಟೆ 2.5-3.0 3.5-4.0 1.5-1.8
ಸ್ವರ್ಣಧಾರ ತಳಿಗಳಲ್ಲಿ ಮೊಟ್ಟೆ ಮತ್ತು ಮಾಂಸ ಉತ್ಪಾದನೆಯ ಸಾಮಥ್ರ್ಯವು ನಾಟಿ ಕೋಳಿಗಳಿಗಿಂತ ಸುಮಾರು 2 ರಿಂದ 3 ಪಟ್ಟು ಅಧಿಕವಾಗಿರುತ್ತದೆ. ನಾಟಿ ಕೋಳಿಗಳಂತೆ ಮಾಂಸವು ರುಚಿಕರÀವಾಗಿರುತ್ತದೆ. ಮಕ್ಕಳ ಸಸಾರಜನಕದ (ಪ್ರೋಟೀನ್) ಅವಶ್ಯಕತೆಯನ್ನು ಪೂರೈಸುವುದರ ಜೊತೆಗೆ ರೈತ ಕುಟುಂಬದ ವೆಚ್ಚಕ್ಕೆ ಸ್ವಲ್ಪ ಹಣ ಒದಗಿಸುವಲ್ಲಿ ಈ ತಳಿಗಳು ಸಹಾಯಕಾರಿಯಾಗಿವೆ.
20 ಸ್ವರ್ಣಧಾರ ಕೋಳಿ ಮರಿಗಳ ಸಾಕಣೆಯಿಂದ ಬರುವ ಆದಾಯದ ವಿವರಣೆ ಈ ಕೆಳಕಂಡಂತಿದೆ.
• ಒಂದು ದಿನದ ಮರಿಗೆ ರೂ.22/-ರಂತೆ 20 ಮರಿಗಳಿಗೆ ರೂ.440/-ಗಳು.
• ಆಹಾರ: ಹಿತ್ತಲಲ್ಲಿ ಅಥವಾ ಹೊಲದಲ್ಲಿ ದೊರೆಯುವ ಜೋಳ, ರಾಗಿ, ಅಕ್ಕಿ ನುಚ್ಚು ಹಾಗೂ ಅಡುಗೆ ಮನೆಯ ತ್ಯಾಜ್ಯ ಪದಾರ್ಥಗಳು.
• ಮೊಟ್ಟೆಯಿಡಲು 6 ತಿಂಗಳ ನಂತರ ಶೇ.80ರ ಉಳಿಕೆ ಪ್ರಮಾಣ = 16 ಕೋಳಿಗಳು.
• ಇದರಲ್ಲಿ ಅರ್ಧದಷ್ಟು ಅಂದರೆ 8 ಹೆಣ್ಣು, ಉಳಿದ ಅರ್ಧದಷ್ಟು ಅಂದರೆ 8 ಗಂಡು.
• 2 ಗಂಡು ಕೋಳಿಗಳನ್ನು ಸಂತಾನೋತ್ಪತ್ತಿಗಾಗಿ ಉಳಿಸಿಕೊಂಡು ಉಳಿದ 6 ಕೋಳಿಗಳನ್ನು ಸರಾಸರಿ ರೂ.400/- ದರದಲ್ಲಿ ಮಾರಾಟ ಮಾಡಿದಲ್ಲಿ ಬರುವ ಆದಾಯ ರೂ.2,400/-ಗಳು.
• 8 ಹೆಣ್ಣು ಕೋಳಿಗಳಿಂದ 75 ವಾರಗಳಲ್ಲಿ (ಪ್ರತಿಯೊಂದು ಕೋಳಿ 200 ಮೊಟ್ಟೆ) ಸರಾಸರಿ ಒಟ್ಟು 1600 ಮೊಟ್ಟೆಗಳು ದೊರೆಯುತ್ತವೆ. ಒಂದು ಮೊಟ್ಟೆಗೆ ಕನಿಷ್ಠ ರೂ.8/-ರಂತೆ ಒಟ್ಟು ಆದಾಯ ರೂ.12,800/-ಗಳು.
• ಕೊನೆಯಲ್ಲಿ 8 ಹೆಣ್ಣು ಕೋಳಿಗಳನ್ನು ರೂ.400/-ಗಳಂತೆ ಹಾಗೂ 2 ಗಂಡು ಕೋಳಿಗಳನ್ನು ರೂ.500/-ಗಳಂತೆ ವಿಲೇವಾರಿ ಮಾಡಿದಲ್ಲಿ ಒಟ್ಟು ಆದಾಯ ರೂ.4,200/-ಗಳು.
• 75 ವಾರಗಳಲ್ಲಿ 20 ಸ್ವರ್ಣಧಾರ ಮರಿಗಳಿಂದ ಬರುವ ಒಟ್ಟು ನಿವ್ವಳ ಲಾಭ (2400+12800+4200) = ರೂ.19,400/-ಗಳು. ಇದಲ್ಲದೇ, ಕೋಳಿಗಳ ಗೊಬ್ಬರದಿಂದ ಹೊಲದ ಫಲವತ್ತತೆ ಹೆಚ್ಚುತ್ತದೆ.
ಸ್ವರ್ಣಧಾರ ಕೋಳಿ ಮರಿಗಳು ಬೇಡಿಕೆ, ಲಭ್ಯತೆ ಮತ್ತು ಉತ್ಪಾದನೆಗೆ ಅನುಗುಣವಾಗಿ ಮಾರಾಟಕ್ಕೆ ಲಭ್ಯವಿದ್ದು, ಸಾಕಲಿಚ್ಛಿಸುವವರು ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗ, ಪಶು ವೈದ್ಯಕೀಯ ಕಾಲೇಜು, ವಿನೋಬಾ ನಗರ ಶಿವಮೊಗ್ಗ -577204 ಇವರಿಂದ ಮುಂಗಡವಾಗಿ ಕಾಯ್ದಿರಿಸಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9916208462ನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:
ಡಾ.ಉಮೇಶ್.ಬಿ.ಯು ,
ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗ,
ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ. ಮೊಬೈಲ್ ಸಂಖ್ಯೆ: ೯೯೧೬೨೦೮೪೬೨