ಶಿವಮೊಗ್ಗ, ಅಕ್ಟೋಬರ್ 14 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕವೂ ಅಮೂಲ್ಯವೂ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಹೇಳಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ 150ನೇ ಗಾಂಧೀಜಯಂತ್ಯೋತ್ಸವದ ಅಂಗವಾಗಿ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ನಿಲ್ದಾಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಗಾಂಧೀಜಿಯವರ ಜೀವನ ಮತ್ತು ಸಾಧನೆ ಬಿಂಬಿಸುವ ಅಪರೂಪದ ಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ಸಂಸ್ಕøತಿಯಲ್ಲಿ ಹಾಸು ಹೊಕ್ಕಾಗಿದ್ದ ಶಾಂತಿ, ಅಹಿಂಸೆ, ಸತ್ಯ ಎಂಬ ಅಂಶಗಳನ್ನು ಅಸ್ತ್ರವನ್ನಾಗಿ ಮಾರ್ಪಡಿಸಿದ ಗಾಂಧೀಜಿ ಇವುಗಳನ್ನು ಬ್ರಿಟೀಷರ ವಿರುದ್ಧ ಪ್ರಯೋಗಿಸಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ಸತ್ಯಾಗ್ರಹ, ಅಸಹಕಾರದಂತಹ ಪ್ರತಿಭಟನೆಗಳೊಂದಿಗೆ ವಿಶ್ವದ ಗಮನ ಸೆಳೆದ ಗಾಂಧೀಜಿ ನವಯುಗದ ನೇತಾರರಾಗಿ ಹೊರಹೊಮ್ಮಿದರು ಎಂದವರು ನುಡಿದರು.
ವಾರ್ತಾ ಇಲಾಖೆಯು ಬೇರೆ-ಬೇರೆ ಮೂಲಗಳಿಂದ ಸಂಗ್ರಹಿಸಿದ ಅಪರೂಪದ ಚಿತ್ರಗಳಲ್ಲಿ ಗಾಂಧೀಜಿಯವರ ಜೀವನ, ಸಾಧನೆ ಹಾಗೂ ಅಪರೂಪದ ಘಟನಾವಳಿಗಳನ್ನು ಪ್ರತಿಬಿಂಬಿಸುವ ಕಪ್ಪು-ಬಿಳುಪು ಚಿತ್ರಗಳು ವೀಕ್ಷಕರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಕಣ್ಣೆದುರು ತಂದು ನಿಲ್ಲಿಸಲಿವೆ ಎಂದರು.
ಈ ಚಿತ್ರಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರು ಕರ್ನಾಟಕಕ್ಕೆ ಭೇಟಿ ಕೊಟ್ಟ ಸ್ಥಳಗಳು, ದೇಶದಾದ್ಯಂತ ನಡೆಸಿದ ಸಭೆ-ಸಮಾರಂಭಗಳು, ಹಿರಿಯ ನೇತಾರರೊಂದಿಗೆ ನಡೆಸಿದ ಸಭೆಗಳು, ಶೈಕ್ಷಣಿಕ ಮತ್ತು ಬಾಲ್ಯದ ಘಟನಾವಳಿಗಳು, ದೇಶ-ವಿದೇಶಗಳಲ್ಲಿ ಗಾಂಧೀಜಿಯವರು ಕಳೆದ ದಿನಗಳ ಕುರಿತು ಇತಿಹಾಸದ ಹಲವು ಘಟನೆಗಳ ಮೇಲೆ ಬೆಳಕುಚೆಲ್ಲಲಿವೆ ಎಂದರು.
ಈ ಅತ್ಯಪರೂಪದ ಸಂಗ್ರಹದ ಚಿತ್ರಗಳನ್ನು ಸಾರ್ವಜನಿಕರು, ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಗಾಂಧೀಜಿಯವರ ಅನುಯಾಯಿಗಳು, ಪೋಷಕರು, ಶಿಕ್ಷಕರು, ಮಕ್ಕಳು, ಗಾಂಧೀಜಿಯವರ ಜೀವನಾದರ್ಶಗಳ ಪರಿಪಾಲಕರು ವೀಕ್ಷಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಸಂಚಲನಾಧಿಕಾರಿ ಸತೀಶ್ ವಿ., ಮತ್ತು ಸಿದ್ದೇಶ್ ಹಾಗೂ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ ಹಾಗೂ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.