BY: LOKESH JAGANNATH 13 September 2021

ಶಿವಮೊಗ್ಗ, ಅಕ್ಟೋಬರ್ 13 : : ಕೋವಿಡ್-19 ಸೋಂಕಿನಿಂದ ಮೃತ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರವು ಈಗಾಗಲೇ ಘೋಷಿಸಿರುವ ಆರ್ಥಿಕ ನೆರವನ್ನು ಒದಗಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಹಶೀಲ್ದಾರರು ಹಾಗೂ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಿಂದ ಏರ್ಪಡಿಸಲಾಗಿದ್ದ ಕೋವಿಡ್ ಮೃತ ಕುಟಂಬಕ್ಕೆ ಆರ್ಥಿಕ ನೆರವು ಒದಗಿಸುವುದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆ, ಬೆಳೆ, ಆಸ್ತಿ, ಜನ-ಜಾನುವಾರು ಹಾನಿಗಳ ಕುರಿತ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ಸರ್ಕಾರವು ಜಿಲ್ಲೆಯಲ್ಲಿ ಕೋವಿಡ್‍ನಿಂದ ಮೃತರಾದ ವ್ಯಕ್ತಿಗಳಲ್ಲಿ ಮೊದಲ ಹಂತದಲ್ಲಿ 1064ಜನ ಮೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೃತರ ಕುಟುಂಬದ ಸದಸ್ಯರು ನೆರವಿಗಾಗಿ ಅರ್ಜಿ ಸಲ್ಲಿಸುವವರೆಗೆ ಕಾಯದೇ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರ ಮನೆಗೆ ಧಾವಿಸಿ, ಅವರಿಂದ ಅರ್ಜಿ ಹಾಗೂ ಮಾಹಿತಿ ಪಡೆದು, ಆನ್‍ಲೈನ್ ಮೂಲಕ ಮಾಹಿತಿ ಉನ್ನತೀಕರಿಸಿ ಮಾಹಿತಿ ನೀಡುವಂತೆಯೂ ಅವರು ಸೂಚಿಸಿದರು.
ಮೃತರ ಕುಟುಂಬವು ಬಿ.ಪಿ.ಎಲ್. ಕುಟುಂಬ ವ್ಯಾಪ್ತಿಗೊಳಪಟ್ಟಿದ್ದರೆ ರಾಜ್ಯ ಸರ್ಕಾರವು ಒಂದು ಲಕ್ಷ ರೂ.ಗಳ ಆರ್ಥಿಕ ನೆರವು ಹಾಗೂ ಕೇಂದ್ರ ಸರ್ಕಾರವು ಕೋವಿಡ್‍ನಿಂದ ಮೃತರಾದ ಎಲ್ಲಾ ಕುಟುಂಬಗಳಿಗೆ ರೂ.50,000/-ಗಳ ನೆರವು ಒದಗಿಸಲಿದೆ. ಈ ಪರಿಹಾರಧನ ಪಡೆಯಲು ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಸಂಬಂಧಿತ ಅಧಿಕಾರಿಗಳು ಇನ್ನಾದರೂ ವಿಳಂಬಕ್ಕೆ ಅವಕಾಶ ಕೊಡದೆ ಈ ತಿಂಗಳ ಮಾಸಾಂತ್ಯದೊಳಗಾಗಿ ಮಾಹಿತಿಯನ್ನು ಸಂಗ್ರಹಿಸಿ, ಫಲಾನುಭವಿಗಳಿಗೆ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ತಾಕೀತು ಮಾಡಿದರು.
ಆನ್‍ಲೈನ್‍ನಲ್ಲಿ ಮಾಹಿತಿ ತುಂಬಲು ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ಮೃತ ವ್ಯಕ್ತಿಯು ಹೊರಗಿನ ಜಿಲ್ಲೆಯವರಾಗಿದ್ದಲ್ಲಿ ಅಂತಹವರು ತಮ್ಮ ಮೂಲ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕೋವಿಡ್-19 ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕಾರ್ಯಕ್ರಮ ಹಾಗೂ ಚಟುವಟಿಕೆಗಳಿಗೆ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಅನುದಾನದ ಖರ್ಚು-ವೆಚ್ಚಗಳ ಕುರಿತು ಬಳಕೆ ಪ್ರಮಾಣಪತ್ರವನ್ನು ಕೂಡಲೇ ನೀಡಬೇಕು. ಕೊರತೆ ಉಂಟಾಗಿದ್ದಲ್ಲಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದಲ್ಲಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ 18+ ಇರುವ ಎಲ್ಲರಿಗೂ ಸರ್ಕಾರದಿಂದಲೇ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತಿದೆ. ಈವರೆಗೂ ಮೊದಲ ಹಂತದ ಲಸಿಕೆ ಪಡೆಯದಿರುವ ವ್ಯಕ್ತಿಗಳನ್ನು ಗುರುತಿಸಿ, ಲಸಿಕೆ ಹಾಕುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು, ತಾಲೂಕು ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ತಹಶೀಲ್ದಾರರು ಸಭೆ ನಡೆಸಿ, ಎಲ್ಲಾ ಗ್ರಾಮಗಳಲ್ಲಿ ಆಂದೋಲನ ರೂಪದಲ್ಲಿ ಕಾರ್ಯಕ್ರಮ ಏರ್ಪಡಿಸಿ, ಜನರ ಮನವೊಲಿಸಿ, ಲಸಿಕೆ ನೀಡಲು ಕ್ರಮ ವಹಿಸಬೇಕು. ಅದಕ್ಕೂ ಮುನ್ನ ಗ್ರಾಮಗಳಲ್ಲಿ ಲಸಿಕೆ ಪಡೆದ ಮತ್ತು ಪಡೆಯದಿರುವ ವ್ಯಕ್ತಿಗಳ ವಿವರವಾದ ಮಾಹಿತಿ ಹೊಂದಿರಬೇಕು. ಈ ಮಹತ್ವದ ಕಾರ್ಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆಯುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಅಲ್ಪ ಪ್ರಮಾಣದ ಬೆಳೆ ಹಾನಿಯಾಗಿರುವುದನ್ನು ಗಮನಿಸಲಾಗಿದೆ. 105ಮನೆಗಳ ಭಾಗಶಃ ಹಾನಿಯಾಗಿರುವುದು ಹಾಗೂ 02ಜೀವಹಾನಿ ಪ್ರಕರಣಗಳಾಗಿರುವುದನ್ನು ಗುರುತಿಸಲಾಗಿದೆ. ಅಲ್ಲದೇ ತಾಲೂಕು ಮಟ್ಟದ ಅಧಿಕಾರಿಗಳು ಈವರೆಗೆ ತಾವು ಸಂಗ್ರಹಿಸಿದ ಕ್ರೋಢೀಕೃತ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸುವಂತೆ ಸೂಚಿಸಿದರು.
ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಜಾತಿಪ್ರಮಾಣ ಕೋರಿ ಬರುವ ಅರ್ಜಿಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಪ್ರಮಾಣಪತ್ರ ನೀಡಬೇಕು. ಸುಳ್ಳು ಜಾತಿಪ್ರಮಾಣ ಪತ್ರ ನೀಡಿದ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ. ಈಗಾಗಲೇ ಇತರೆ ತಾಲೂಕುಗಳಲ್ಲಿ ನೀಡಲಾಗಿರುವ ಸುಳ್ಳು ಪ್ರಮಾಣಪತ್ರಗಳ ಕುರಿತು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ 07 ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಅವುಗಳನ್ನು ತಮ್ಮ ಕಚೇರಿಯ ದಾಖಲೆಯಲ್ಲಿಯೂ ರದ್ದುಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ್, ಆರ್.ಸಿ.ಹೆಚ್.ಅಧಿಕಾರಿ ಡಾ||ನಾಗರಾಜ್‍ನಾಯ್ಕ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು

error: Content is protected !!