ಶಿವಮೊಗ್ಗ, ಏಪ್ರಿಲ್ 23 : ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಕೈಜೋಡಿಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.
ಕೋರೊನಾ ಪ್ರಕರಣ ದೇಶಾದ್ಯಂತ ಹೆಚ್ಚುತ್ತಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅವರು ತಿಳಿಸಿದ್ದಾರೆ.
ಈ ಮಾರಾಣಾಂತಿಕ ಸೋಂಕು ತಡೆಗಟ್ಟಲು ಪ್ರಸ್ತುತ ಕೋವಿಶೀಲ್ಡ್ ಲಸಿಕೆ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದ್ದು, 45 ವರ್ಷಗಳಿಗಿಂತ ಮೇಲ್ಪಟ್ಟವರು ಈ ಲಸಿಕೆಗಳನ್ನು ಪಡೆದುಕೊಳ್ಳುವುದು. ಹಾಗೇಯೇ ದೀರ್ಘಕಾಲೀನ ಖಾಯಿಲೆಗಳು ಅಥವಾ ಹೃದಯ, ನರಮಂಡಲ, ಶ್ವಾಸಕೋಶದ, ಮೂತ್ರಪಿಂಡ ಖಾಯಿಲೆಗಳನ್ನು ಹೊಂದಿರುವವರು, ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಅಸ್ತಮಾ ಅಥವಾ ಥೈರಾಯ್ಡ್ ಖಾಯಿಲೆಯಿದ್ದು ಅದಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಹ ಮತ್ತು ಇಮ್ಯುನೊ ಡಿಫಿಷಿಯನ್ಸಿ, ಹೆಚ್ಐವಿಯಂತಹ ಖಾಯಿಲೆಗಳು ಯಾವುದೇ ಹಂತದಿಂದಾಗಿ ರೋಗ ನಿರೋಧಕ-ನಿಗ್ರಹದ ರೋಗಿಗಳು ಸಹ ಈ ಲಸಿಕೆಗಳನ್ನು ಪಡೆಯಬಹುದಾಗಿದೆ. ಆದರೆ ಗರ್ಭಿಣಿಯರು ಮತ್ತು ಬಾಣಂತಿಯರು ಈ ಲಸಿಕೆಗಳನ್ನು ಪಡೆಯಬಾರದು ಎಂದು ಅವರು ತಿಳಿಸಿದ್ದಾರೆ.
ಲಸಿಕೆ ಪಡೆಯಲು ಆನ್ಲೈನ್ ನೊಂದಣಿ ಮತ್ತು ನೇರ ನೊಂದಣಿ ಮಾಡಿಕೊಂಡು ತಮ್ಮ ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ/ಪಾಸ್ ಪೋರ್ಟ್/ ವಾಹನ ಚಾಲನಾ ಪರವಾನಿಗೆ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಸಲ್ಲಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ/ ತಾಲೂಕು ಆಸ್ಪತ್ರೆ/ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ಪಡೆಯಬಹುದಾಗಿದೆ.
ಕೋರೋನಾ ಸಾಂಕ್ರಾಮಿಕವನ್ನು ನಿರ್ಲಕ್ಷ್ಯ ಮಾಡದೇ ಅದರ ವಿರುದ್ಧದ ಹೋರಾಟದಲ್ಲಿ ನಾವೆಲ್ಲಾ ಭಾಗಿಯಾಗಿ ಲಸಿಕೆ ಪಡೆದು ನಂತರವೂ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ನ್ಯಾಯಾಧೀಶರು ಸಾರ್ವಜನಿಕರಿಗೆ ಮನವಿ ಮಾಡಿರುತ್ತಾರೆ.