ಕೋಕೋ ಬೆಳೆಯಲು ಯುವಜನತೆ ಮುಂದೆ ಬರಬೇಕು : ಡಾ.ಪ್ರಭಾತ್ ಕುಮಾರ್
ಶಿವಮೊಗ್ಗ, ಜೂನ್ 03 : ಕೋಕೋ ಬೆಳೆಯನ್ನು ಬೆಳೆಯಲು ಯುವಜನತೆ ಮುಂದೆ ಬರಬೇಕು ಹಾಗೂ ಕೋಕೋ ಸಣ್ಣ ಉದ್ದಿಮೆಗಳು, ಸ್ಟಾರ್ಟ್ ಅಪ್ಗಳನ್ನು ಆರಂಭಿಸಲು ಉತ್ತೇಜನ ಬೇಕೆಂದು ಭಾರತ ಸರ್ಕಾರದ ಕೃಷಿ ಸಚಿವಾಲಯದ ತೋಟಗಾರಿಕೆ ಆಯುಕ್ತರಾದ ಡಾ.ಪ್ರಭಾತ್ ಕುಮಾರ್ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಡೈರಕ್ಟರೇಟ್ ಆಫ್ ಕ್ಯಾಶು ಆಂಡ್ ಕೋಕೊ ಡೆವಲಪ್ಮೆಂಟ್, ಕೊಚಿನ್ ಇವರ ಸಹಯೋಗದಲ್ಲಿ ಇಂದು ಜೆಎನ್ಎನ್ ಸಿಇ ಕಾಲೇಜಿಲ್ಲಿ ಏರ್ಪಡಿಸಲಾಗಿದ್ದ ಕೋಕೊ ಅಭಿವೃದ್ದಿ, ಸವಾಲುಗಳು ಮತ್ತು ಅವಕಾಶ ಕುರಿತಾದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೋಕೋ ಒಂದು ವಾಣಿಜ್ಯ ಬೆಳೆಯಾಗಿದ್ದು ಕೋಕೋವನ್ನು ಅಂತರಬೆಳೆಯಾಗಿ ಬೆಳೆದಲ್ಲಿ ರೈತರಿಗೆ ಅನುಕೂಲವಾಗುವುದು. ಸಣ್ಣ ಸಣ್ಣ ಇಡುವಳಿದಾರರು ಅಡಿಕೆ, ತೆಂಗು, ರಬ್ಬರ್ ಹೀಗೆ ವಿವಿಧ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಬೆಳೆದಲ್ಲಿ ಉತ್ಪಾದನಾ ವೆಚ್ಚವೂ ತಗ್ಗುತ್ತದೆ ಎಂದರು.
ಪ್ರಸ್ತುತ 1 ಲಕ್ಷ ಜನರು ಕೋಕೋ ಬೆಳೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆ ಲಭ್ಯವಿದ್ದರೂ ಇಲ್ಲಿರುವ ಅಸಮತೋಲನವನ್ನು ಸರಿಪಡಿಸಿಕೊಳ್ಳಬೇಕಿದೆ. ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಇದಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನು ಬಲಪಡಿಸಬೇಕಿದೆ. ಹಾಗೂ ಸಣ್ಣ ಉದ್ದಿಮೆ, ಸ್ಟಾರ್ಟ್ ಅಪ್ ಕಂಪೆನಿಗಳನ್ನು ಶುರು ಮಾಡಲು ಉತ್ತೇಜನ ನೀಡಬೇಕು. ಜೊತೆಗೆ ಜ್ಞಾನ ಹೆಚ್ಚಬೇಕು. ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲು ಮೌಲ್ಯಸರಪಳಿಗೆ ಒತ್ತು ನೀಡಬೇಕಿದೆ.
ಅಡಿಕೆಯಿಂದ ಲಾಭ ಹೆಚ್ಚಿರುವುದರಿಂದ ಸರ್ಕಾರದ ಸಬ್ಸಿಡಿ, ಉತ್ತೇಜನ ಇಲ್ಲದಿದ್ದರೂ ರೈತರು ಹೆಚ್ಚಾಗಿ ಇದಕ್ಕೆ ವಾಲುತ್ತಿದ್ದಾರೆ. ಆದರೆ ಕೋಕೋ ಬೆಳೆಗೆ ಪೈಲಟ್ ಕಾರ್ಯಕ್ರಮ, ಪ್ರಾತ್ಯಕ್ಷಿಕೆ ಹಾಗೂ ಕಾಳಜಿ ಅವಶ್ಯಕವಾಗಿದೆ. ಕೋಕೋ ಉತ್ಪನ್ನ ಕಂಪೆನಿಗಳು ಮುಂದೆ ಬಂದು ರೈತರಲ್ಲಿ ಒಂದು ವಿಶ್ವಾಸ ಮುಡಿಸಬೇಕು. ಬೆಳೆಗೆ ಸಂಬಂಧಿಸಿದಂತೆ ಒಂದು ಸ್ಪಷ್ಟ ಮಾರ್ಗಸೂಚಿ ಬೇಕು. ಜೊತೆಗೆ ಯುವಜನತೆ ಇದನ್ನು ಅಳವಡಿಸಿಕೊಳ್ಳು ಮುಂದೆ ಬರಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಂಗಳೂರಿನ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದವರು ಕೋಕೋ ಗ್ರಾಫ್ಟೆಡ್ ಮತ್ತು ಹೈಬ್ರಿಡ್ ತಳಿಗಳನ್ನು ನೀಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ತಜ್ಞರು ಹೈಬ್ರಿಡ್ ತಳಿಗಳನ್ನು ಅಭಿವೃದ್ದಿಪಡಿಸಿ ನೀಡುವಂತೆ ಕೋರಿದರು.
ಕೋಕೋ ಕೆಲವು ಪ್ರಾಕೃತಿಕವ ವಿಕೋಪ, ಮಂಗ, ಕಾಡುಬೆಕ್ಕು ಹಾವಳಿಯಿಂದ ಇಳುವರಿ ಕಡಿಮೆ ಆಗುತ್ತಿದ್ದು ಇದಕ್ಕೆ ಇಲಾಖೆಯ, ವಿವಿಗಳ ತಜ್ಞರು ಮಾರ್ಗೋಪಾಯಗಳನ್ನು ಸೂಚಿಸಬೇಕು. ಮೊದಲಿಗಿಂತ ಪ್ರಸ್ತುತದಲ್ಲಿ ಜನರು ಹೆಚ್ಚು ಪ್ರಮಾಣದಲ್ಲಿ ಚಾಕಲೇಟ್ ಸೇವನೆ ಮಾಡುತ್ತಿದ್ದು ಈ ಬೆಳೆಗೆ ಹೆಚ್ಚಿನ ಉತ್ತೇಜನ, ಸಂಶೋಧನೆ ಅವಶ್ಯಕತೆ ಇದೆ.
ಹಾಗೂ ಕೋಕೋ ದಿಂದ ಉಂಟಾಗಬಹುದಾದ ಆರೋಗ್ಯ ಪ್ರಯೋಜನೆಗಳ ಬಗ್ಗೆ ತಜ್ಞರು ಅಧ್ಯಯನ ಮಾಡಿ ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆದರೆ ಕೃಷಿಕರಿಗೆ ಹೆಚ್ಚಿನ ಆದಾಯ ದೊರಕುತ್ತದೆ ಎಂಬುದಕ್ಕೆ ಒತ್ತು ನೀಡಬೇಕು.
ಕ್ಯಾಂಪ್ಕೊ ಸಂಸ್ಥೆಯು ಏಷ್ಯಾದಲ್ಲಿ ದೊಡ್ಡ ಚಾಕಲೇಟ್ ಮತ್ತು ಇತರೆ ಉತ್ಪನ್ನ ಉತ್ಪಾದಿಸುವ ಸಂಸ್ಥೆಯಾಗಿದ್ದು 23 ಸಾವಿರ ಮೆಟ್ರಿಕ್ ಟನ್ ಕೋಕೋ ದಿಂದ ವಿವಿಧ ರೀತಿಯ ಚಾಕಲೇಟ್, ಉತ್ಪನ್ನ ತಯಾರಿಸುವ ಸಾಮಥ್ರ್ಯ ಹೊಂದಿದೆ. ಉತ್ತಮ ಗುಣಮಟ್ಟದ ಮಷೀನ್ಗಳೊಂದಿಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.
ಆಂಧ್ರದಲ್ಲಿ ಉತ್ತಮ ಗುಣಮಟ್ಟದ ಕೋಕೋ ಬೆಳೆಯಲಾಗುತ್ತಿದೆ. ಆದರೆ ಬೆಳೆ ತಾಂತ್ರಿಕತೆಯಲ್ಲಿ ಇನ್ನೂ ಸುಧಾರಣೆ ಆಗಬೇಕಿದೆ. ಪ್ರಸ್ತುತ ಆಫ್ರಿಕಾ ಮತ್ತು ಇತರೆ ದೇಶಗಳಿಂದ ಕೋಕೋವನ್ನು ಆಮದುಕೊಳ್ಳಲಾಗುತ್ತಿದೆ. ನಮ್ಮ ರಾಜ್ಯ ಮತ್ತು ದೇಶದಲ್ಲಿ ಕೋಕೋ ಉತ್ಪಾದನೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ಅಡಿಕೆಗಾಗಿ ಕೋಕೋ ಬೆಳೆ ನಿಲ್ಲಿಸಲಾಗುತ್ತಿದೆ.
ರೈತರಿಗೆ ಲಾಭ ತರುವ ಅಡಿಕೆಯನ್ನು ಇತ್ತೀಚೆಗೆ ಯಥೇಚ್ಚವಾಗಿ ಬೆಳೆಯಲಾಗುತ್ತಿದೆ. ನೀರಾವರಿ ಭಾಗದಲ್ಲಿ ಸಹ ಅಡಿಕೆ ಹೆಚ್ಚಾಗಿದೆ. ಆಂಧ್ರ, ತಮಿಳುನಾಡಿನಲ್ಲೂ ಅಡಿಕೆ ಬೆಳೆ ಹೆಚ್ಚುತ್ತಿದೆ. ಮಲೆನಾಡಿನ ಬೆಳೆಯಾದ ಅಡಿಕೆಯನ್ನು ಎಲ್ಲೆಡೆ ಬೆಳೆಯುತ್ತಿರುವುದನ್ನು ನೋಡಿ ಮುಂದೊಂದು ದಿನ ವಿಷಾಧನೀಯ ಪರಿಸ್ಥಿತಿ ಬರಬಹುದು, ಮಲೆನಾಡಿನ ರೈತರಿಗೆ ತೊಂದರೆಯಾಗಬಹುದೆಂಬ ಚಿಂತನೆ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೋಕೋ ಬೆಳೆದು ಯಶಸ್ವಿಯಾದ ರಾಜ್ಯದ ನವೀನ್ ಕೃಷ್ಣ ಶಾಸ್ತ್ರಿ ಮತ್ತು ಶ್ರೀಮತಿ ಪ್ರಶಾಂತಿ ಶಾಸ್ತ್ರಿ, ಕೇರಳದ ಟೋನಿ ಜೇಮ್ಸ್, ತಮಿಳುನಾಡಿನ ಡಿ.ಚಂದ್ರಶೇಖರನ್, ಆಂಧ್ರಪ್ರದೇಶದ ನೇಮಣಿ ಗಣೇಶ್ವರ ರಾವ್ ಇವರನ್ನು ಸನ್ಮಾನಿಸಲಾಯಿತು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕಾಡಾ ಅಧ್ಯಕ್ಷರು ಮತ್ತು ಪ್ರಗತಿಪರ ರೈತರಾದ ನಗರದ ಮಹಾದೇವಪ್ಪ ಮಾನತಾಡಿದರು. ಡಾ.ಬಿ.ಹೇಮ್ಲಾನಾಯ್ಕ್ ಸ್ವಾಗತಿಸಿದರು. ಕೊಚ್ಚಿ ಡಿಸಿಸಿಓ ಮಾಜಿ ನಿರ್ದೇಶಕ ಡಾ.ವೆಂಕಟೇಶ್ ಎನ್ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿವಿ ನಿರ್ವಹಣಾ ಮಂಡಳಿ ಸದಸ್ಯರಾದ ಕೆ.ನಾಗರಾಜ್, ವೀರಭದ್ರದ್ದಪ್ಪ ಪೂಜಾರಿ, ಕೊಚಿನ್ ಡಿಸಿಸಿಓ ನಿರ್ದೇಶಕ ಡಾ.ರವೀಂದ್ರ ಕುಮಾರ್, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರತಿನಿಧಿಗಳು, ವಿವಿ ಬೋಧಕ, ಬೋಧಕೇತರ ವರ್ಗದವರು ಹಾಜರಿದ್ದರು.