ಶಿವಮೊಗ್ಗ, ಜುಲೈ 30 : ನೆರೆಯ ಕೇರಳ ರಾಜ್ಯದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೋಂಕಿತರು ರಾಜ್ಯದ ಗಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಕೊರೋನ ನಿಯಂತ್ರಣ ಸಂಬಂಧ ರಾಜ್ಯದ ಗಡಿಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಗಡಿಭಾಗದ ಜಿಲ್ಲೆಗಳಲ್ಲಿ ಕೊರೋನ ಟೆಸ್ಟ್ಗಳನ್ನು ಇನ್ನಷ್ಟು ಹೆಚ್ಚಿಸಬೇಕು. ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಕೊರೋನ ತಪಾಸಣೆ ಆಗಿರುವ ಕುರಿತು ವರದಿ ಪರಿಶೀಲಿಸಿ ಅನುಮತಿ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದ ಅವರು ಆಯಾ ಜಿಲ್ಲೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಖುದ್ದಾಗಿ ಈ ಕಾರ್ಯದಲ್ಲಿ ಸಕ್ರಿಯರಾಗುವಂತೆ ಸೂಚಿಸಿದರು.
ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಬರುವಲ್ಲಿ ಆರೋಗ್ಯ, ಕಂದಾಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳ ಶ್ರಮ ಸ್ಮರಣೀಯವಾದುದು ಎಂದ ಅವರು, ಮತ್ತೊಮ್ಮೆ ಇಂತಹ ಸಂದಿಗ್ಧ ಹಾಗೂ ಸವಾಲುಗಳನ್ನು ಎದುರಿಸುವ ಮೊದಲು ಮುನ್ನೆಚ್ಚರಿಕೆ ಕ್ರಮ ವಹಿಸುವುದು ಸೂಕ್ತವಾದುದಾಗಿದೆ. ತಪ್ಪಿದಲ್ಲಿ ಮತ್ತೊಮ್ಮೆ ರಾಜ್ಯದ ಜನರನ್ನು ಸಮಸ್ಯೆಯ ಕೂಪಕ್ಕೆ ತಳ್ಳಬೇಕಾದೀತು ಎಂದವರು ಎಚ್ಚರಿಸಿದರು.
ಗಡಿಭಾಗದಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ, ಹಗಲಿರುಳು ತಪಾಸಣೆ ನಡೆಸಬೇಕು. ರಾಜ್ಯ ಸರ್ಕಾರವೂ ಕೂಡ ಸೋಂಕಿನ ನಿಯಂತ್ರಣ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯಗೊಳಿಸುವಂತೆ ಅವರು ಸಲಹೆ ನೀಡಿದರು.
ಗಡಿಭಾಗದಲ್ಲಿ ಅಗತ್ಯವಿದ್ದಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಪ್ರವಾಸಿ ತಾಣಗಳಲ್ಲಿಯೂ ಕೊರೋನ ತಪಾಸಣಾ ಕೇಂದ್ರಗಳನ್ನು ಆರಂಭಿಸಬೇಕು. ನೆರೆಯ ಕೇರಳಕ್ಕೆ ರಾಜ್ಯಕ್ಕೆ ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯನ್ನು ತಾತ್ಕಾಲಿಕ ಅವಧಿಗೆ ರದ್ದುಪಡಿಸಬೇಕು ಎಂದು ಸಲಹೆ ನೀಡಿದ ಅವರು, ಕೊರೋನ ತಪಾಸಣೆಗಳನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸೋಂಕಿತರನ್ನು ಗುರುತಿಸಿ, ಚಿಕಿತ್ಸೆ ಕೊಡಿಸುವ ಕಾರ್ಯ ಮುಂದುವರೆಸಬೇಕು. ಅಕ್ಸಿಜನ್ ಘಟಕಗಳ ನಿರ್ವಹಣೆ ಕುರಿತು ಅಧಿಕಾರಿಗಳಲ್ಲಿ ಸಮನ್ವಯತೆ ಇರಬೇಕು. 2ನೇ ಹಂತದ ಲಸಿಕೆಯನ್ನು ಆಂದೋಲನ ರೀತಿಯಲ್ಲಿ ಪೂರ್ಣಗೊಳಿಸಿ. ಮೈಕ್ರೋ ಕಂಟೋನ್ಮೆಂಟ್ ವಲಯಗಳನ್ನು ಮಾಡಿ, ಸೋಂಕನ್ನು ನಿಯಂತ್ರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮಾರ್ಗವು ಕರಾವಳಿ ಹಾಗೂ ಕೇರಳದೊಂದಿಗೆ ವ್ಯಾವಹಾರಿಕವಾಗಿ ಸಂಪರ್ಕ ಹೊಂದಿದ್ದು, ಅಲ್ಲಿನ ಜನರಿಂದ ಸೋಂಕು ಹರಡಬಹುದಾಗಿದ್ದು, ತೀರ್ಥಹಳ್ಳಿಯಲ್ಲಿ ಸೋಂಕು ತಪಾಸಣಾ ಕೇಂದ್ರವನ್ನು ಆರಂಭಿಸುವಂತೆ ಹಾಗೂ ಹೊರರಾಜ್ಯಗಳಿಂದ ಆಗಮಿಸುವವರಿಗೆ ಆರ್.ಟಿ.ಪಿ.ಸಿ.ಆರ್. ಅಥವಾ ರ್ಯಾಟ್ ತಪಾಸಣೆ ಕಡ್ಡಾಯಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಸಿಗಂಧೂರು, ಜೋಗ ಮುಂತಾದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಸೋಂಕು ಹರಡಬಹುದಾದ ಸಂಭವವಿದ್ದು, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ಆಗುಂಬೆಯಲ್ಲಿ ಚೆಕ್ಪೋಸ್ಟನ್ನು ಸ್ಥಾಪಿಸಿ, ಅಗತ್ಯ ಸಿಬ್ಬಂಧಿಗಳನ್ನು ನಿಯೋಜಿಸಿ, ತಪಾಸಣಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ ಅವರು ಹೊಸನಗರ, ತೀರ್ಥಹಳ್ಳಿ, ಮತ್ತು ಸಾಗರ ತಾಲೂಕುಗಳಲ್ಲಿನ ಸ್ಟೇ ಹೋಂ ಮತ್ತು ಹೋಟೆಲ್ಗಳಲ್ಲಿ ಆನ್ಲೈನ್ ಮೂಲಕ ರೂಂಗಳನ್ನು ಕಾಯ್ದಿರಿಸುವ ದಿನದಂದು ಕನಿಷ್ಟ 72ಗಂಟೆಗಳ ಮೊದಲು ಕೊರೋನ ತಪಾಸಿಸಿ, ನೆಗೆಟಿವ್ ವರದಿ ಹೊಂದಿರುವ ¨ಗ್ಗೆ ಹೋಟೆಲ್ ಮಾಲೀಕರು ವರದಿ ಪಡೆದು ಕೊಠಡಿ ನೀಡುವಂತೆ ಸಲಹೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅನುಮತಿ ಇಲ್ಲದೇ ಸಭೆ, ಸಮಾರಂಭ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದವರು ನುಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿಯಿಂದ ನಡೆದ ಈ ವಿಡಿಯೋ ಸಂವಾದದಲ್ಲಿ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಚಾಮರಾಜ ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉಪಸ್ಥಿತರಿದ್ದರು.