ಭಾರತ ಇತಿಹಾಸದಲ್ಲಿ ತುಳಸಿಗೆ ವಿಶೇಷವಾದ ಸ್ಥಾನಮಾನ ಇದೆ. ಆಯುರ್ವೇದದ ದಿವ್ಯ ಔಷಧಿ ಗುಣವುಳ್ಳ ತುಳಸಿಯನ್ನು ನಿರಂತರವಾಗಿ ಉಳಿಸಿ, ಬೆಳೆಸಿಕೊಂಡು ಬರುವ ಪ್ರಯತ್ನವನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೇಶವ ಕಾಮತ್ರವರು ಮನೆಯ ಮುಂಭಾಗದಲ್ಲಿರುವ ಸ್ವಲ್ಪ ಜಾಗದಲ್ಲಿಯೇ ತುಳಸೀ ವನ ನಿರ್ಮಿಸಿದ್ದಾರೆ. ಯಾವುದೇ ಪ್ರಶಸ್ತಿ, ಪುರಸ್ಕಾರ, ಶ್ರೇಷ್ಠತೆಗೆ ನೋಡದೇ ಕಾಯಕವೇ ಬಹು ಮುಖ್ಯ ಕೆಲಸ ಎಂದು . ತಾನು ಮಾಡುವ ಕಾಯಕವನ್ನು ಭಗವಂತ ಮೆಚ್ಚುವ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ತುಳಸಿ ಪುರಾಣ ಕಾಲದಿಂದಲೂ ತನ್ನದೇ ಆದ ವೈಶಿಷ್ಟ್ಯ ಹಾಗು ಗುಣವನ್ನು ಹೊಂದಿದೆ. ಇದಕ್ಕೆ ಕಥಾನಕಗಳಿವೆ. ಜನಪದದ ಸಂಪ್ರದಾಯವಿದೆ. ದೇವರಪೂಜೆಗೆ ತುಳಸಿ ಅತ್ಯಂತ ಪವಿತ್ರವಾದುದು. ಬದುಕಿನ ಎಲ್ಲಾ ಆಚರಣೆ ಆರಾಧನೆಗಳಲ್ಲಿ ತುಳಸಿಯನ್ನು ಪವಿತ್ರದ ಸಂಕೇತವಾಗಿ ಬಳಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತುಳಸಿ ಬೆಳೆಸುವ ಮನೋಪ್ರವೃತ್ತಿ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ತಕ್ಕದಾದ ಕಾರಣಗಳೂ ಇವೆ. ಕಳೆದ 50 ವರ್ಷಗಳಿಂದ ಸದ್ದಿಲ್ಲದೇ ತುಳಸಿ ಬೆಳೆದು ದೇವರಿಗೆ, ಯೋಗಿಗಳಿಗೆ, ಮನೆ ಮನೆಗೆ ತಲುಪಿಸಿದ ಕಾಯಕಯೋಗಿ ಕೇಶವ ಕಾಮತ್ರ ಯಶೋಗಾಥೆ ಎಂಥವರಿಗೂ ಸ್ಫೂರ್ತಿಯಾಗಿದೆ.
ತುಳಸೀವನ ನಿಮಿ೯ಸಿದವರ ಕಥೆ
ಕೇಶವ ಕಾಮತ್ ಆರಂಭದಲ್ಲಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ತದನಂತರ ನಿವೃತ್ತರಾದವರು. ಮನೆ ಮನೆಗೆ ಅಂಚೆ ತಲುಪಿಸುವ ಕೆಲಸ ನಡೆಸಿದವರು. ಮನೆಯ ಮುಂಭಾಗದಲ್ಲಿರುವ ಸ್ವಲ್ಪ ಜಾಗದಲ್ಲಿಯೇ ತುಳಸೀ ವನ ನಿರ್ಮಿಸಿದ್ದಾರೆ. ಇಲ್ಲಿ 600ಕ್ಕೂ ಅಧಿಕ ಮೂರು ವಿದಧ ತುಳಸಿ ಬೆಳೆದಿದೆ; ವಿಷ್ಣು ತುಳಸಿ, ಕೃಷ್ಣ ತುಳಸಿ ಮತ್ತು ಶ್ರೀತುಳಸಿ ಅವರಿಗಾಗಿ ಅವರು ತುಳಸಿ ಬೆಳೆದುಕೊಂಡಿದ್ದರೆ ಅದೇನೂ ವಿಶೇಷವಲ್ಲ. ಸುತ್ತಮುತ್ತಲಿನ ಸಾರ್ವಜನಿಕರಿಗಾಗಿ ಅವರು ತುಳಸಿ ಬೆಳೆದಿದ್ದಾರೆ. ಇಲ್ಲಿರುವ ತುಳಸಿಯನ್ನು ಸಾವ೯ಜನಿಕರು ಬಂದು ಕಿತ್ತುಕೊಂಡು ಹೋಗಬಹುದು. ಅದು ದಿನದ ಪೂಜೆಗೆ, ದೇವಾಲಯಗಳಿಗೆ, ಊರಿಗೆ ಹಾರ ತಯಾರಿಸಲು ಇಲ್ಲಿಂದಲೇ ತುಳಸಿ ಒಯ್ಯುತ್ತಾರೆ.. ತುಳಸಿ ಒಯ್ಯುವಾಗ ಅದರ ಬೀಜಗಳನ್ನು ಜನರಿಗೆ ಕೊಡುತ್ತಾರೆ. ನೀವೂ ಬೆಳೆಯಿರಿ ಎನ್ನುವ ಇವರು ಬೆಳೆಯುವವರಿಗೆ ಉತ್ತೇಜನ ಕೊಡುತ್ತಾರೆ.. ಇಷ್ಟಕ್ಕೆ ಮುಗಿಯುವುದಿಲ್ಲ ಅವರ ತುಳಸಿ ಪ್ರೀತಿ.
ಕಾಮತ್ ರ ಬಹುಮುಖಿ ವ್ಯಕ್ತಿತ್ವ:
ಕೇಶವ ಕಾಮತ್ ಅವರ ತುಳಸಿ ಪ್ರೀತಿಗೆ ನಿರಂತರ ಸಹಕಾರ ನೀಡುತ್ತಿದ್ದಾರೆ ಅವರ ಪತ್ನಿ ಯಶೋದ. ಕೂಡ ತನ್ನ ಪತಿಯ ಕಾಯಕಕ್ಕೆ ನಿರಂತರವಾಗಿ ಸಹಕಾರವನ್ನು ಕೊಡುತ್ತಾ ಬಂರುತ್ತಿದ್ದಾರೆ. ಈಗಾಗಲೇ 60 ಸಾವಿರಕ್ಕೂ ಅಧಿಕ ತುಳಸಿ ಸಸಿಗಳನ್ನು ಇಲ್ಲಿಯವರೆಗೆ ಜನರಿಗೆ ಉಚಿತವಾಗಿ ನೀಡಿದ್ದಾರೆ.
ಮನೆಯ ಮುಂದಿನ ತುಳಸೀಕಟ್ಟೆಯಲ್ಲಿ ತುಳಸಿ ನಳನಳಿಸಬೇಕು. ಮನೆಗೊಂದು ಎಕ್ಕೆ ಗಿಡ ಇರಬೇಕು, ನಿಮ್ಮ ಮನೆಯಲ್ಲಿ ಕಡ್ಡಾಯವಾಗಿ ತುಳಸಿ ಬೆಳೆಸಿ. ಗ್ರಹ-ಗ್ರಹಚಾರಗಳು ಸುಳಿಯುವುದಿಲ್ಲ ಎನ್ನುವ ಕೇಶವ ಕಾಮತರಿಗೆ ಈಗ ಎಂಭತ್ತು ವರ್ಷ. ಇಂದಿಗೂ ಪ್ರತಿಫಲಾಪೇಕ್ಷೆ ಇಲ್ಲದೆ ಮಲೆನಾಡಿನಲ್ಲಿ ತುಳಸಿ ಉಳಿಸುವ ಚಳವಳಿ ನಡೆಸುತ್ತಿದ್ದಾರೆ.
ಪವಿತ್ರ ತುಳಸಿ ಪೂಜೆಯಿಂದ ಹಿಡಿದು ಔಷಧಿಯವರೆಗೆ ತುಂಬಾ ಅವಶ್ಯವಿದೆ. ತುಳಸಿಯನ್ನು ಪ್ರತಿಯೊಂದು ಮನೆಯಲ್ಲಿಯೂ ಬೆಳೆಸಬೇಕು ಎನ್ನುವುದಕ್ಕೆ ಕೇಶವ ಕಾಮತ್ ಕೈಗೊಂಡಿರುವ ನಿರಂತರ ಕಾಯಕ ಎಂಥವರಿಗೂ ಸ್ಫೂರ್ತಿ ನೀಡುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಶೇಷಗಿರಿ ಹೆಗಡೆ.
ಬಹಳ ವರ್ಷಗಳಿಂದ ನಾನು ಕೇಶವ ಕಾಮತ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಹಬ್ಬ ಹರಿದಿನಗಳಲ್ಲಿ ಇವರ ತುಳಸಿ ವನಕ್ಕೆ ಸಾಕಷ್ಟು ಜನ ಬಂದು ತುಳಸಿ ಒಯ್ಯುತ್ತಾರೆ. ತುಳಸಿ ಕೊಯ್ಯಲು ಅವರೂ ಸಹಕರಿಸುತ್ತಾರೆ.
ಕೇಶವ ಕಾಮತ್, ಮೊಬೈಲ್: 9844810567