ಶಿವಮೊಗ್ಗ: ಜೂನ್ 17 : ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿ ಮಳೆಗಾಲದ ಬಳಿಕ ಪ್ರತಿ ವರ್ಷ ಕಾಣಿಸಿಕೊಳ್ಳುವ ಕೆಎಫ್ಡಿ ಕಾಯಿಲೆ ಹರಡದಂತೆ ತಡೆಗಟ್ಟಲು ಮುಂಜಾಗರೂಕತಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಎಫ್ಡಿ ಸಮನ್ವಯ ಸಮಿತಿಯ ಸಭೆ ಹಾಗೂ ನಿಫಾ ಮತ್ತು ಇತರ ಸಾಂಕ್ರಾಮಿಕ ರೋಗಗಳ ತಡೆಯುವ ಕುರಿತಾದ ಸಭೆಯಲ್ಲಿ ಮಾತನಾಡಿದರು.
ಕೆಎಫ್ಡಿ ಕಾಯಿಲೆ ಹೊಸ ಹೊಸ ಪ್ರದೇಶಗಳಿಗೆ ಹರಡುತ್ತಿದ್ದು, ಕಳೆದ ಬಾರಿ ಅರಳಗೋಡಿನಲ್ಲಿ ಭಾರೀ ಅನಾಹುತ ಉಂಟು ಮಾಡಿದೆ. ಇದೇ ರೀತಿ ಕೆಎಫ್ಡಿ ಕಾಯಿಲೆ ಬರಬಹುದಾದ ಗ್ರಾಮಗಳನ್ನು ಗುರುತಿಸಬೇಕು. ಈಗಾಗಲೆ ಕೆಎಫ್ಡಿ ಕಂಡು ಬಂದಿರುವ ಗ್ರಾಮಗಳಲ್ಲಿ ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಮುಂದುವರೆಸಬೇಕು. ರೋಗ ಬರಲು ಸಾಧ್ಯತೆಯಿರುವ ಗ್ರಾಮಗಳಲ್ಲಿ ಜಾನುವಾರುಗಳಿಗೆ ಲಸಿಕೆ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ತಡೆಗೆ ಬೇಕಾದ ಲಸಿಕೆ, ತೈಲ ಇನ್ನಿತರ ಔಷಧಿ ಸರಂಜಾಮುಗಳನ್ನು ಪಡೆಯುವ ಪ್ರಕ್ರಿಯೆಯನ್ನು ಈಗಲೇ ಪ್ರಾರಂಭಿಸಬೇಕು. ಎಲ್ಲಾ ಔಷಧಿಗಳನ್ನು ಮಳೆಗಾಲ ಮುಗಿಯುವ ಮೊದಲೇ ಸಿದ್ಧಪಡಿಸಿಟ್ಟಿರಬೇಕು ಎಂದು ಸೂಚನೆ ನೀಡಿದರು.
ಕೆಎಫ್ಡಿ ಕಾಯಿಲೆಯನ್ನು ಎದುರಿಸಲು ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯವಿದೆ. ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ್ಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆ ಮತ್ತಿತರ ಇಲಾಖೆಗಳು ತಮಗೆ ನಿಗದಿಪಡಿಸಿರುವ ಕಾರ್ಯಗಳನ್ನು ಮಾರ್ಗಸೂಚಿ ಪ್ರಕಾರ ಕೈಗೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಕೆಎಫ್ಡಿ ಕಾಯಿಲೆ ಹರಡಬಹುದಾದಂತಹ ಸ್ಥಳಗಳಲ್ಲಿ ಪ್ರವಾಸಿಗರಿಗೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು. ಮಂಗಗಳು ಸತ್ತು ಬಿದ್ದಿರುವುದು ಕಂಡು ಬಂದಲ್ಲಿ ತಕ್ಷಣ ಎಚ್ಚೆತ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಒಟ್ಟು 3548 ಶಂಕಿತ ಕೆಎಫ್ಡಿ ಪ್ರಕರಣಗಳು ಪತ್ತೆಯಾಗಿದ್ದು, 341 ಪ್ರಕರಣಗಳಲ್ಲಿ ಪಾಸಿಟಿವ್ ಆಗಿದೆ. ಈ ಅವಧಿಯಲ್ಲಿ 491 ಮಂಗಗಳು ಸತ್ತಿದ್ದು, 21ಪ್ರಕರಣಗಳಲ್ಲಿ ಕೆಎಫ್ಡಿ ಪಾಸಿಟಿವ್ ಕಂಡು ಬಂದಿದೆ ಎಂದು ಡಾ.ಕಿರಣ್ ಅವರು ಮಾಹಿತಿ ನೀಡಿದರು.
ನಿಫಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ: ನೆರೆಯ ಕೇರಳ ರಾಜ್ಯದಲ್ಲಿ ಶಂಕಿತ ನಿಫಾ ವೈರಸ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ವೈರಸ್ ಸಾಮಾನ್ಯವಾಗಿ ಬಾವಲಿ ಮೂಲಕ ಹರಡುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಬಾವಲಿಗಳು 10ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಲ್ಲಿ ತಕ್ಷಣ ಮಾಹಿತಿಯನ್ನು ನೀಡಬೇಕು. ಕೇರಳ ರಾಜ್ಯದೊಂದಿಗೆ ಸಂಪರ್ಕ ಹೊಂದಿರುವವರಲ್ಲಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಡಾ.ಶಂಕರಪ್ಪ, ಎಎಸ್ಪಿ ಡಾ.ಎಚ್.ಟಿ.ಶೇಖರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.