ರಾಷ್ರ್ಟೀಯ ಕೃಷಿ ವಿಜ್ಞಾನ ಕೇಂದ್ರ ಸಮ್ಮಾನ್ ಪ್ರಶಸ್ತಿಯನ್ನು ಮಹಿಂದ್ರಾ ಸಮೃದ್ಧಿ ಇಂಡಿಯಾ ಅಗ್ರಿ ಅವಾರ್ಡ-2020 ಕರ್ನಾಟಕ ರಾಜ್ಯದ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಐಸಿಎಅರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಗೆ ನೀಡಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನಾಧಾರಿತ ಅಧಿಕ ಹಾಗೂ ಗುಣಮಟ್ಟದ ಇಳುವರಿ ಮತ್ತು ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಹಾಗೂ ಪ್ರಗತಿಪರ ರೈತರಿಗೆ ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್‍ರವರು 2011 ರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಈ ಅತ್ಯುನ್ನತÀವಾದ ಪ್ರಶಸ್ತಿಯು ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ಒಳಗೊಂಡಿದೆ.
ದೇಶದಲ್ಲಿರುವ ಒಟ್ಟು 721 ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರಗಳ ಪೈಕಿ ಕೋಲ್ಕೊತಾ ಹಾಗೂ ಕಲಬುರಗಿ ಕೇಂದ್ರಗಳು ಈ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವು ಪ್ರಸಾರ ಮಾಡಿದ ಹಲವಾರು ತಾಂತ್ರಿಕತೆಗಳೆಂದರೆ, ತೊಗರಿ ಬೆಳೆಯಲ್ಲಿ ಮುಖ್ಯವಾಗಿ ಕಂಡುಬರುವ ನೆಟೆ ಮತ್ತು ಗೊಡ್ಡು ರೋಗ ನಿರೋಧಕ ತಳಿಗಳನ್ನು ಅಧಿಕ ಕ್ಷೇತ್ರಗಳಿಗೆ ವಿಸ್ತರಿಸಿ, ಪಲ್ಸ್‍ಮ್ಯಾಜಿಕ್ ತಂತ್ರಜ್ಞಾನದ ಬಳಕೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ತಂತ್ರಜ್ಞಾನಗಳನ್ನು ರೈತ ಬಾಂಧವರು ಅಳವಡಿಸಿಕೊಂಡರು. ಇದರಿಂದ ಹೆಚ್ಚಿನ ಹಾಗೂ ಗುಣಮಟ್ಟದ ತೊಗರಿ ಇಳುವರಿ ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗೆಯೇ ಹವಾಮಾನ ಮುನ್ಸೂಚನೆ, ಬೀಜೋಪಚಾರ ಆಂದೋಲನಾ, ಸಿರಿಧಾನ್ಯಗಳ ಮೌಲ್ಯವರ್ಧನೆ, ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣು ಮತ್ತು ನೀರಿನ ಪರೀಕ್ಷೆ, ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ, ವೈಜ್ಞಾನಿಕ ಹೈನುಗಾರಿಕೆ, ಆಧುನಿಕ ತೋಟಗಾರಿಕೆ, ಪುಷ್ಪಕೃಷಿ, ಹಣ್ಣು ಮತ್ತು ತರಕಾರಿ ಮಾಲ್ಯವರ್ಧನೆ, ತಾರಸಿ ಕೈತೋಟ, ಎರೆಹುಳು ಗೊಬ್ಬರ ಘಟಕ, ಅಜೋಲ್ಲಾ ಘಟಕ, ಜಲಕೃಷಿ ಘಟಕ ಹಾಗೂ ಇ-ಸ್ಯಾಪ್ ತಂತ್ರಜ್ಞಾನಗಳ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಳ್ಳುತ್ತಿದೆ.
ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಸರಕಾರೇತರ ಸಂಸ್ಥೆಗಳಾದ ಮೈರಾಡ, ಪರಿವರ್ತನಾ, ಧಾನ್ ಪೌಂಡೇಷನ್ ಮತ್ತು ರೈತ ಉತ್ಪಾದಕಾ ಸಂಸ್ಥೆಗಳಾದ ನೇಗಿಲಯೋಗಿ, ಪುಣ್ಯಕೋಟಿ, ಸಂಗಮೇಶ್ವರ ಮತ್ತು ಗ್ರಾಮೀಣ ರೈತ ತೋಟಗಾರಿಕೆ ಉತ್ಪಾದಕರ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಗಳೊಂದಿಗೆ ಅನೇಕ ರೈತಪರ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೆ ತಂದ ಹೆಗ್ಗಳಿಕೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ್ದಾಗಿದೆ. ಇದಲ್ಲದೆ ಕೃಷಿ ಸಂವಹನಗಳಾದ ರೇಡಿಯೋ, ದೂರದರ್ಶನ, ವಾಟ್ಸ್‍ಆಪ್, ವಿಡಿಯೋ ಕ್ಲಿಪಿಂಗ್ಸ್, ಸಂದೇಶಗಳು, ಯುಟ್ಯೂಬ್ ಮತ್ತು ಫೇಸ್‍ಬುಕ್‍ಗಳ ಮೂಲಕ ರೈತರಿಗೆ ಮಾಹಿತಿಯನ್ನು ನೀಡುತ್ತಾ ರೈತರ ಆದಾಯ ಹೆಚ್ಚಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ.
ಈ ಪ್ರಶಸ್ತಿಯನ್ನು ಕೋವಿಡ್-19 ಕಾರಣದಿಂದ ಯಾವುದೇ ಸಭೆ, ಸಮಾರಂಭಗಳನ್ನು ಮಾಡದಿರುವುದರಿಂದ ಆನ್‍ಲೈನ್ ಮುಖಾಂತರ ನೀಡಲಾಯಿತು. ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಕೆ.ಎನ್ ಕಟ್ಟಿಮನಿಯವರು ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಕುಲಸಚಿವರು ಹಾಗೂ ಶಿಕ್ಷಣ ನಿರ್ದೇಶಕರಾದ ಡಾ. ಎಂ.ಜಿ. ಪಾಟೀಲ್, ವಿಸ್ತರಣಾ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳಾದ ಡಾ. ಡಿ.ಎಂ. ಚಂದರಗಿ, ಸಂಶೋಧನಾ ನಿರ್ದೇಶಕರಾದ ಡಾ. ಬಿ.ಕೆ. ದೇಸಾಯಿ, ಹಣಕಾಸು ನಿಯಂತ್ರಾಣಾಧಿಕಾರಿಗಳಾದ ಡಾ. ಜೆ. ಅಶೋಕ, ಸಂಪರ್ಕಾಧಿಕಾರಿಗಳಾದ ಡಾ. ಪ್ರಮೋದ ಕಟ್ಟಿ, ಸ್ನಾತಕೋತ್ತರ ಡೀನ್‍ರಾದ ಡಾ. ಸತ್ಯನಾರಾಯಣರಾವ್, ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್‍ರಾದ ಡಾ. ವೀರನಗೌಡ, ಕೃಷಿ ವ್ಯವಹಾರ ಯೋಜನೆ ಮತ್ತು ಅಭಿವೃದ್ದಿ ಘಟಕದ ಮುಖ್ಯಸ್ಥರಾದ ಡಾ. ಆರ್. ಲೋಕೇಶ, ಪ್ರೋಜೆಕ್ಟ್ ಪ್ಲಾನಿಂಗ್ ಹಾಗೂ ಮೊನಿಟರಿಂಗ್ ಸೆಲ್ ಮುಖ್ಯಸ್ಥರಾದ ಡಾ. ಎನ್. ಶಿವಶಂಕರ್, ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಈ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಿಸ್ತರಣಾ ನಿರ್ದೇಶಕರ ತಾಂತ್ರಿಕ ಅಧಿಕಾರಿಗಳಾದ ಡಾ. ಮೌಲಾಸಾಬರವರು ವಂದಿಸಿದರು ಹಾಗೂ ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!