ಶಿವಮೊಗ್ಗ, ನವೆಂಬರ್-೦೬: ಇಂದಿನ ಆಧುನಿಕತೆ ಯುಗದಲ್ಲಿ ಶೈಕ್ಷಣಿಕ ಹಾಗೂ ತಾಂತ್ರಿಕತೆಗೆ ಹೆಚ್ಚು ಮಾನ್ಯತೆ ದೊರಕುತ್ತಿರುವ ಹಿನ್ನಲೆ ಕೃಷಿಕ್ಷೇತ್ರ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಬಿ.ಪಿ ವೀರಭದ್ರಪ್ಪ ಹೇಳಿದರು.
ನವಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಿದ್ದ ನೆರೆ ಮತ್ತು ಬರ ನಿರ್ವಹಣೆಯಲ್ಲಿ ಕೃಷಿ ತಾಂತ್ರಿಕತೆ ಕುರಿತ ವಿಚಾರ ಸಂಕೀರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರೆದರು ಮಾನುಷ್ಯನ ಜೀವನದಲ್ಲಿ ಕೃಷಿಯೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆದರೆ ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತ ಇಂದು ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ರೈತನ ಆಧಾರವಾಗಿರುವ ಕೃಷಿ ಕ್ಷೇತ್ರ ಇಂದು ಅತಿವೃಷ್ಠಿ ಅನಾವೃಷ್ಠಿಗಳಿಂದ ನಲಗುತ್ತಿದೆ. ಇಂತಹ ಸಂದರ್ಭದಲ್ಲಿ ಆತನಿಗೆ ಪ್ರೋತ್ಸಾಹ ಸಿಗದಿದ್ದರೆ ಮುಂದೊAದು ದಿನ ನಾವೆಲ್ಲರೂ ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ಉದ್ಭವಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿರುವ ಇಂದಿನ ಜಗತ್ತಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತಿರುವ ಕಾರಣ ಉನ್ನತ ಮತ್ತು ಅತ್ಯುನ್ನತ ಪದವಿ ಪಡೆಯುತ್ತಿರುವ ಯುವ ಜನತೆ ಕೃಷಿ ಕ್ಷೇತ್ರದಿಂದ ಬಹುದೂರ ಉಳಿಯುತ್ತಿದೆ. ಇನ್ನೊಂದು ಕಡೆ ರೈತರ ಸಂಕಷ್ಟಗಳಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಈ ರೀತಿಯ ನಾನಾ ಕಾರಣಗಳಿಂದ ಇಡೀ ಕೃಷಿ ಕ್ಷೇತ್ರ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ನುಡಿದರು.
ಇತ್ತೀಚೆಗೆ ಉತ್ತರ ಕರ್ನಾಟಕ ಮತ್ತು ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಾದ ಪ್ರವಾಹದಿಂದಾಗಿ ರೈತರು ಮತ್ತು ಜನರ ಜೀವನ ತತ್ತರಿಸಿದ್ದು, ಪ್ರವಾಹದಿಂದಾಗಿ ಅಂದಾಜು ೬೦ ಕೋಟಿಯಷ್ಟು ನಷ್ಟವಾಗಿರುವುದೇ ಕೃಷಿಕ್ಷೇತ್ರಕ್ಕೆ ಒಂದು ರೀತಿಯ ಶಾಪವಾಗಿದೆ ಎಂದು ತಿಳಿಸಿದರು.
ಈ ಪರಿಸ್ಥಿತಿಯಲ್ಲಿ ರೈತರು ಭಯಭೀತರಾಗದೇ ಮುಂದಿನ ಕೃಷಿಚಟುವಟಿಕೆಗೆ ಮುಂದಾಗಬೇಕು. ರೈತರು ಜಾಗೃತರಾಗಿ ಹವಾಮಾನ ವರದಿಯ ಅನುಗುಣವಾಗಿ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ವಿವಿಯ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ಬಿ.ಆರ್. ಹೆಗಡೆ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಏಜೆನ್ಸಿ ವಿಜ್ಞಾನಿ ಡಾ. ಅಶೋಕ್ ರೆಡ್ಡಿ, ಹಿರಿಯೂರು ಪ್ರಗತಿಪರ ರೈತ ವೇದಮೂರ್ತಿ, ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ.ಎಂ.ಕೆ ನಾಯ್ಕ, ಸಂಶೋಧನ ನಿರ್ದೇಶಕ ಡಾ. ಬಿ.ಆರ್ ಗುರುಮೂರ್ತಿ, ತೋಟಗಾರಿಕೆಯ ಉಪನಿರ್ದೇಶಕ ಯೋಗೆಶ್ ಆಡಳಿತ ಮಂಡಳಿಯ ಸದಸ್ಯ ಡಾ. ಎಂ.ಹೆಚ್ ಕೃಷ್ಣ ಮೂರ್ತಿ ಹಾಗೂ ರೈತರು ಮುಂತಾದ ಗಣ್ಯರು ಉಪಸ್ಥಿತರಿದ್ದರು.