ನಾಡೋಜ ಹಂಪನಾರ ಕೃತಿಗಳ ಬಿಡುಗಡೆ

ಭಾರತೀಯ ಭಾಷೆಗಳಿಗೆ ಕನ್ನಡ ಸಾಹಿತ್ಯದ ಅನುವಾದ ವೃದ್ಧಿಸಲಿ: ಪ್ರೊ. ತಮಿಳ್ ಸೆಲ್ವಿ

ಶಂಕರಘಟ್ಟ, ಸೆ. 28: ಅಪಾರವಾದ ಕಾವ್ಯ, ಕಥನ ಸಂಪತ್ತು, ಸಾಹಿತ್ಯ ಪ್ರಕಾರಗಳನ್ನುಳ್ಳ ಕನ್ನಡ ಭಾಷಾ ಸಾಹಿತ್ಯವು ಭಾರತೀಯ ಭಾಷೆಗಳು ಸೇರಿದಂತೆ ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಳ್ಳಬೇಕಿದೆ ಎಂದು ಮದ್ರಾಸ್ ವಿವಿಯ ಪ್ರಾಧ್ಯಾಪಕಿ ಡಾ. ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಕನ್ನಡ ಭಾರತಿ ಮತ್ತು ಬೆಂಗಳೂರಿನ ಸಪ್ನ ಬುಕ್ ಹೌಸ್ ವತಿಯಿಂದ ಕುವೆಂಪು ವಿವಿಯ ಪ್ರೊ. ಹಿರೇಮಠ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆಚಾರ್ಯ ಹಂಪನಾ ವಿರಚಿತ ‘ಸ್ಪೆಕ್ಟ್ರಂ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ-5’ ಕೃತಿಗಳ ಲೋಕಾರ್ಪಣೆ ಮತ್ತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಕೃತಿಗಳ ಕುರಿತು ಮಾತನಾಡಿದರು. ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯವು ಯತೇಚ್ಚ ಗದ್ಯ-ಪದ್ಯ, ಕವನ, ಕಾವ್ಯ, ಕಥನ ಸಂಕಲನ, ವಚನ ಸಂಪತ್ತುಗಳನ್ನು ಒಳಗೊಂಡಿದೆ. ಅವುಗಳನ್ನು ನೆರೆಯ ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ ಭಾಷೆಗಳಿಗೆ ಅನುವಾದಿಸಿ ಪರಿಚಯಿಸುವ ಮೂಲಕ ನಮ್ಮ ಸಾಹಿತ್ಯದ ಜ್ಞಾನವನ್ನು, ಆಳ-ಉದಾತ್ತತೆಗಳನ್ನು ತಿಳಿಸಿಕೊಡಬೇಕು. ಇಲ್ಲವಾದಲ್ಲಿ ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನ ಕುರಿತು ಭವಿಷ್ಯದಲ್ಲಿ ಪ್ರಶ್ನೆಗಳು ಏಳುತ್ತವೆ ಎಂದರು.

ಭಾರತೀಯ ಭಾಷೆಗಳಲ್ಲದೇ ಜಗತ್ತಿನ ಪ್ರಮುಖ ಭಾಷೆಗಳಾದ ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ಜರ್ಮನ್ ಭಾಷೆಗಳಿಗೂ ಕನ್ನಡವನ್ನು ಅನುವಾದಿಸಿ, ಕನ್ನಡದ ಜ್ಞಾನಹಿರಿಮೆಯನ್ನು ಎತ್ತಿಹಿಡಿಯಬೇಕು. ಅಂತಹ ಕೆಲಸ ಮಾಡುವವರ ಸಂಖ್ಯೆ ಬಹಳ ವಿರಳವಿದೆ. ಆದರೆ ನಾಡೋಜ ಪ್ರೊ. ಹಂಪನಾ ಅವರು ಇಡೀ ಕನ್ನಡ ಸಾಹಿತ್ಯವನ್ನು ಈ ಐದು ಕೃತಿಗಳ ಮೂಲಕ ಇಂಗ್ಲೀಷ್ ಬಲ್ಲವರಿಗೆ ಸರಳವಾಗಿ, ಸುಲಭವಾಗಿ, ಸವಿವರವಾಗಿ ಅರ್ಥಮಾಡಿಸಬಲ್ಲಂತೆ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತಗಳನ್ನು ಅಭ್ಯಸಿಸಿದ ಅಪರೂಪದ ವಿದ್ವಾಂಸರು ಪ್ರೊ. ಹಂಪನಾ. ಅಭ್ಯಾಸ ಮಾಡಿದ್ದಷ್ಟೇ ಅಲ್ಲ ಅದನ್ನು ಅನುಭವಿಸಿ, ಅನುಸಂಧಾನಗೊಳಿಸುವ ಹಂತಕ್ಕೆ ಪ್ರಾವಿಣ್ಯತೆ ಹೊಂದಿದ ಅವರು ಈ ಐದು ಕೃತಿಗಳಲ್ಲಿ ಕನ್ನಡದ ಹಲ್ಮಿಡಿ ಶಾಸನದಿಂದ ಆರಂಭಿಸಿ ಇತ್ತೀಚಿನ ಬುಕ್ಕರಾಯ ಶಾಸನದವರೆಗಿನ ಎಲ್ಲ ಸತ್ವ, ಸಾರಾಂಶಗಳನ್ನು ಇಡಿಯಾಗಿ ಕೃತಿಗಳಲ್ಲಿ ದಾಖಲಿಸಿದ್ದಾರೆ, ಕ್ಲಾಸಿಕಲ್ ಅನ್ನುವಂತಹ ಕೆಲಸವೊಂದನ್ನು ಪೂರ್ಣಗೊಳಿಸದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಅನುರಾಧ ಜಿ., ವಿಮರ್ಶಕ, ಚಿಂತಕರು ಆದ ಪ್ರೊ. ಪಿ.ವಿ. ನಾರಾಯಣ, ಪ್ರೊ. ಬಸವರಾಜ ಕಲ್ಗುಡಿ, ಪತ್ರಕರ್ತ, ಸಂಸ್ಕೃತಿ ಚಿಂತಕ ಡಾ. ಪದ್ಮರಾಜ ದಂಡಾವತಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊ. ಪ್ರಶಾಂತ್‌ನಾಯಕ ಜಿ., ಪ್ರೊ. ಶಿವಾನಂದ ಕೆಳಗಿನಮನಿ ಸೇರಿದಂತೆ ವಿವಿಧ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

ಬಾಕ್ಸ್ ಐಟಮ್
ನಾಡೋಜ ಪ್ರೊ. ಹಂಪನಾ ಮಾತನಾಡಿ, ಕನ್ನಡ ಸಾಹಿತ್ಯ ಇತಿಹಾಸ ಎಂದರೆ ಆದಿಕವಿ ಎಂಬ ಕಾರಣಕ್ಕೆ ಪಂಪನಿಂದ ಆರಂಭಿಸಬೇಡಿ. ಪಂಪನಿಗಿಂತಲೂ 100 ವರ್ಷಕ್ಕಿಂತ ಮೊದಲೇ ಕವಿರಾಜಮಾರ್ಗ ಮೂಲಕ ಶ್ರೀವಿಜಯ ಉತ್ಕೃಷ್ಟ ಸಾಹಿತ್ಯ ನೀಡಿದ್ದನು. ಕನ್ನಡ ಸಾಹಿತ್ಯದಲ್ಲಿ ಹತ್ತಾರು ಪ್ರಕಾರಗಳು ಇದ್ದು, ಸಮಾನತೆ, ವಿಶ್ವಮಾನವ ತತ್ವ, ಸಹೋದರತ್ವಗಳನ್ನು ಬೋಧಿಸಿದ ಅಪಾರವಾದ ಸಂಪತ್ತು ಇದೆ.

ಪಂಪನ ತಮ್ಮ ಜೀನವಲ್ಲಭ ತೆಲುಗು ಸಾಹಿತ್ಯದಲ್ಲಿ ಆದಿಕವಿ ಎಂದು ಕರೆಸಿಕೊಂಡಿದ್ದಾನೆ. ಅವನು ಕನ್ನಡ, ತೆಲುಗು, ಸಂಸ್ಕೃತದಲ್ಲಿ ಬರೆಸಿದ ಅಪರೂಪದ ತ್ರಿಭಾಷಾ ಶಾಸನ ಅಂಧ್ರಪ್ರದೇಶ ಕರೀಂನಗರದ ಬಳಿ ದೊರೆತಿತ್ತು. ಕನ್ನಡ ಭಾಷೆ, ಸಾಹಿತ್ಯ, ಕಾವ್ಯ, ಸಂಸ್ಕೃತಿಗೆ ಆಳವಾದ, ವಿಶ್ವವ್ಯಾಪಿಯಾಗಬಲ್ಲಂತಹ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

error: Content is protected !!