ಮತಚಲಾವಣೆ ಪ್ರಜಾಪ್ರಭುತ್ವ ರಕ್ಷಣೆಯ ಹಾದಿ: ಪ್ರೊ. ವೀರಭದ್ರಪ್ಪ
ಶಂಕರಘಟ್ಟ, ಏಪ್ರಿಲ್ 26: ಜಗತ್ತಿನ ಶ್ರೇಷ್ಠ ಆಡಳಿತ ವ್ಯವಸ್ಥೆಯೆಂದರೆ ಅದು ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆ. ಅದನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬ ಜನಸಾಮಾನ್ಯನಿಗೆ ನೀಡಿರುವ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಿಕೊಂಡು ಮುನ್ನಡೆಯಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಕರೆಕೊಟ್ಟರು.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾನ ಕುರಿತ ಜಾಗೃತಿ ಮೂಡಿಸಲು ರೂಪಿಸಿರುವ ಸಂಚಾರಿ ಮತಗಟ್ಟೆ ಮಾದರಿ ವಾಹನವನ್ನು ವಿವಿಯ ಆವರಣಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.
ನಮ್ಮ ಪ್ರತಿನಿಧಿಗಳ ಆಯ್ಕೆಯು ನಮ್ಮ ಸಾಮಾಜಿಕ ಕಾಳಜಿ, ಬದ್ಧತೆ, ಪ್ರಾಮಾಣಿಕತೆಗಳನ್ನು ಪ್ರತಿಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿಗಳನ್ನು ನಿರ್ಣಯಿಸಿ, ತಪ್ಪದೇ ಎಲ್ಲರೂ ತಮ್ಮತಮ್ಮ ಮತಕ್ಷೇತ್ರಗಳಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಉಳಿಸುವ, ಬೆಳೆಸುವ ನಮ್ಮ ಕರ್ತವ್ಯ ನಿಭಾಯಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡೋಣ. ಚುನಾವಣಾ ದಿನದಂದು ವೈಯಕ್ತಿಕ ಕೆಲಸಗಳಿಗೆ ಕಡಿವಾಣ ಹಾಕಿ, ಪ್ರವಾಸ ಇತ್ಯಾದಿಗಳಿಗೆ ಹೋಗದೆ ನಮ್ಮ ಹಕ್ಕನ್ನು ಚಲಾಯಿಸೋಣ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೂರಕ್ಕೆ ನೂರು ಮತದಾನವಾಗುತ್ತದೆ. ನಮ್ಮಲ್ಲಿಯೂ ಸಹ ಅದೇರೀತಿ ಮತದಾನ ಆಗುವ ಹಾಗೆ ಮಾಡುವಲ್ಲಿ ನಮ್ಮೆಲ್ಲರ ಪ್ರಯತ್ನ ದೊಡ್ಡದು. ಮತದಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿ ಯಾವುದೇ ಆಮಿಷಕ್ಕೆ ಒಳಗಾಗದೆ ಹೆಚ್ಚು ಮತದಾನ ಮಾಡುವ ಹಾಗೆ ನಾವೆಲ್ಲರೂ ಜಾಗೃತಿ ಮೂಡಿಸೋಣ ಎಂದರು.
ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲು ಶಿವಮೊಗ್ಗ ಜಿಲ್ಲಾಡಳಿತವು ಸ್ವೀಪ್ ಅಭಿಯಾನವನ್ನು ಆರಂಭಿಸಿದ್ದು ಸಂಚಾರಿ ಮತಗಟ್ಟೆ ಮಾದರಿಯೊಂದನ್ನು ರೂಪಿಸಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮತಗಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಗಳು, ಅಗತ್ಯ ದಾಖಲೆಗಳು, ಅನುಸರಿಸಬೇಕಾದ ನಿಯಮಗಳ ಕುರಿತು, ಮತಪಟ್ಟಿಯಲ್ಲಿ ತಮ್ಮ ಹೆಸರು ಖಾತರಿ ಪಡಿಸಿಕೊಳ್ಳುವ ಬಗ್ಗೆ, ಅಭ್ಯರ್ಥಿಗಳ ಹಿನ್ನೆಲೆ ತಿಳಿಯುವ ಕುರಿತು ಮಾಹಿತಿಗಳನ್ನು ಪಡೆದರು.
ಕುವೆಂಪು ವಿವಿ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಸತ್ಯಪ್ರಕಾಶ್ ಎಂ. ಆರ್, ಜಿಲ್ಲಾ ಪಂಚಾಯತ್ ನ ಗೌರಿಶಂಕರ್, ಸತೀಶ್, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.