ಶಿವಮೊಗ್ಗ, ಡಿಸೆಂಬರ್ 16: ಜಿಲ್ಲೆಯ 6.46 ಲಕ್ಷ ಜಾನುವಾರುಗಳಿಗೆ (ದನಗಳು, ಎಮ್ಮೆಗಳು ಮತ್ತು ಹಂದಿಗಳು) ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು 2021 ರ ಡಿಸೆಂಬರ್ 17 ರಿಂದ 2022 ರ ಜನವರಿ 15 ರವರೆಗೆ ಜಿಲ್ಲೆಯಾದ್ಯಂತ ಉಚಿತವಾಗಿ ಹಮ್ಮಿಕೊಳ್ಳಲಾಗಿದ್ದು ಎಲ್ಲ ರೈತರ ಬಾಂಧವರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲ್ಲೂಕುವಾರು, ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು.
ಲಸಿಕೆ ಹಾಕುವುದರಿಂದ ಹಾಲು ಕಡಿಮೆಯಾಗಲೀ, ಗರ್ಭಪಾತವಾಗುವುದಾಗಲೀ ಆಗುವುದಿಲ್ಲ. ಯಾವುದೇ ಮೂಢನಂಬಿಕೆ ಅಥವಾ ತಪ್ಪು ಗ್ರಹಿಕೆಗೆ ಒಳಗಾಗದೇ ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ
.