ಶಿವಮೊಗ್ಗ, ಆಗಸ್ಟ್ 02: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುಗಣಿ ಹೋಬಳಿ ಭಕ್ತನಕೊಪ್ಪ ಗ್ರಾಮ ಠಾಣಾ ನಂ.1 ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 110 ಎಂವಿಎ, 110/11ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೆತ್ತುಕೊಳ್ಳುತ್ತಿರುವುದರಿಂದ ಸುತ್ತಮುತ್ತಲ ಊರುಗಳ ಸಾರ್ವಜನಿಕರು, ರೈತರು ಸಹಕರಿಸಬೇಕೆಂದು ಕೋರಲಾಗಿದೆ. ಶಿಕಾರಿಪುರ ತಾಲ್ಲೂಕಿನ ಉಡುಗಣಿ ಭಕ್ತನಕೊಪ್ಪ ಗ್ರಾಮ ಠಾಣಾ ನಂ.1 ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 110 ಎಂವಿಎ, 110/11ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಹಾಲಿ ಇರುವ ಬಳ್ಳಿಗಾವಿ ಹಿರೇಕೆರೂರು 110 ಕೆ.ವಿ.ಪ್ರಸರಣ ಮಾರ್ಗಕ್ಕೆ ಜೋಡಣೆಯಾಗಿ ಉದ್ದೇಶಿತ 110 ಕೆವಿ ಮಾರ್ಗವು ಭಕ್ತನಕೊಪ್ಪ ಗ್ರಾಮದ ಸರ್ವೇ ಸಂಖ್ಯೆ 68 ಮತ್ತು ಅಕ್ಕ ಪಕ್ಕ ಹಾದು ಹೋಗಿ ಉದ್ದೇಶಿತ ಭಕ್ತನಕೊಪ್ಪ 1*10 ಎಂವಿಎ, 110/11 ಕೆ.ವಿ, ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ.
ಈ ಉದ್ದೇಶಿತ ಕಾಮಗಾರಿಯಿಂದ ಭಕ್ತನಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಕುಡಿಯುವ ನೀರಿನ ಸ್ಥಾವರಗಳಿಗೆ, ವಿದ್ಯಾರ್ಥಿಗಳಿಗೆ, ಹಿಟ್ಟಿನ ಗಿರಣಿಗಳಿಗೆ, ಸಣ್ಣಗುಡಿ ಕೈಗಾರಿಕೆಗಳಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಸಾಧ್ಯವಾಗಲಿದ್ದು, ಸುತ್ತಮುತ್ತಲಿನ ಊರುಗಳ ರೈತರು ಹಾಗೂ ಸಾರ್ವಜನಿಕರು ಉದ್ದೇಶಿತ 110 ಕೆವಿ ಮಾರ್ಗದ ಕಾಮಗಾರಿಗೆ ಸಹಕರಿಸಬೇಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.