ಮೇ. 18ಃ ಬಿ. ಟಿ. ಲಲಿತಾ ನಾಯ್ಕ್‍ರಿಂದ ಉಪನ್ಯಾಸ-ಸಂವಾದ
ಶಿವಮೊಗ್ಗ, ಏ. 16ಃ- ಕರ್ನಾಟಕ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮೇ 18 ಶನಿವಾರ ಸಂಜೆ 5.30ಕ್ಕೆ ಮಾಜಿ ಸಚಿವರೂ ಸಾಹಿತಿಗಳು ಪ್ರಗತಿಪರ ಚಿಂತಕರೂ ಆದ ಡಾ. ಬಿ. ಟಿ. ಲಲಿತಾ ನಾಯ್ಕ್‍ರವರು ಪಾಲ್ಗೊಂಡು ಮೂಢ ನಂಬಿಕೆ ಮತ್ತು ರಾಜಕೀಯ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಹೆಚ್. ಡಿ. ಉದಯಶಂಕರ ಶಾಸ್ತ್ರಿಯವರು ವಹಿಸಲಿದ್ದಾರೆ.
ಡಾ. ಬಿ. ಟಿ. ಲಲಿತಾ ನಾಯ್ಕ್‍ರವರು ಓರ್ವ ಪ್ರಬುದ್ಧ ರಾಜಕಾರಣಿ ಮಾತ್ರವಲ್ಲದೆ ಡಾ.ಬಿ.ಟಿ.ಲಲಿತಾನಾಯಕ್‍ರವರು ನಾಡಿನ ಓರ್ವ ಪ್ರತಿಷ್ಠಿತ ಲೇಖಕಿಯೂ ಹೌದು. ಕಡೂರು ತಾಲೂಕಿನ ತಂಗಲಿ ತಾಂಡದವರಾದ ನಾಯ್ಕ್‍ರವರು ಚಂದ್ರಪರಾಭವ, ಭಟ್ಟನ ಕನಸು, ಹಬ್ಬ ಮತ್ತು ಬಲಿ, ನೆಲೆ ಬೆಲೆ, ಇದೇ ಕೂಗು ಮತ್ತೆ ಮತ್ತೆ, ಗ್ರಹಿಕೆ ಗೊಂಚಲು.. ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಹಲವು ಕೃತಿಗಳು ಶಾಲೆ, ಕಾಲೇಜು ಹಾಗು ವಿ.ವಿ.ಗಳಲ್ಲಿ ಪಠ್ಯವಾಗಿವೆ. ಕಡೂರು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಾಗು ಬೆಂಗಳೂರು ನಗರ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜಕಾರಣದಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಹಾಗು ರಾಜ್ಯ ಸರ್ಕಾರದ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉತ್ತಮ ಶಾಸಕಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ,….. ಮುಂತಾದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಲಂಕೇಶ್ ಪತ್ರಿಕೆಯ ವರದಿಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುವೆಂಪು ವಿ.ವಿ.ಯು 2010ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಇವರ ಸಾಹಿತ್ಯವನ್ನೆ ಕುರಿತು ಎಂಫಿಲ್ ಹಾಗೂ ಪಿಎಚ್‍ಡಿ ಮಹಾ ಪ್ರಬಂಧಗಳು ಮಂಡಿಸಿರುವುದು ಹೆಮ್ಮೆಯ ಸಂಗತಿ.
ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ. ಎಚ್. ಎಸ್. ನಾಗಭೂಷಣ ಕೋರಿದ್ದಾರೆ.