ಬೆಂಗಳೂರು, ಆಗಸ್ಟ್ 19-
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಸಾಲ ಮರುಪಾವತಿ ಮೊಬೈಲ್ ಆಪ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ನಿಗಮದ ಸಾಲ ಮರುಪಾವತಿ ಶೇ. 90 ರಷ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಿಗಮವನ್ನು ಫೈನಾನ್ಸ್ ಕಾರ್ಪೊರೇಷನ್ ಆಗಿ ಪರಿವರ್ತಿಸಲು ಸಲಹೆ ನೀಡಿದರು. ಆ ಮೂಲಕ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸಲು ಸಾಧ್ಯವಾಗುವುದು ಹಾಗೂ ಹೆಚ್ಚು ಸಂಖ್ಯೆಯಲ್ಲಿ ಬಡ ಫಲಾನುಭವಿಗಳಿಗೆ ನೆರವು ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಅವರು, ನಿಗಮದ ಫಲಾನುಭವಿಗಳು ಸಾಲ ಮರುಪಾವತಿಗಾಗಿ ದೂರದ ಊರುಗಳಿಂದ ಜಿಲ್ಲಾಕೇಂದ್ರಕ್ಕೆ ಪ್ರಯಾಣಿಸುವುದನ್ನು ತಡೆಗಟ್ಟಲು ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಸುಗಮ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಲು ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ ಎಂದು ವಿವರಿಸಿದರು.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ ಮತ್ತು ಇತರರು ಉಪಸ್ಥಿತರಿದ್ದರು.