ಕೊರೊನಾ ವೈರಸ್ ಕುರಿತಂತೆ ಜನರಲ್ಲಿರುವ ಭಯವನ್ನು ತೆಗೆದು ಹಾಕಲು ಮತ್ತು ಸ್ವಚ್ಛತೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್ ಸ್ವಯಂಸೇವಕರು ಶಿವಮೊಗ್ಗದಲ್ಲಿ ತಯಾರಾಗಿದ್ದು ಜಿಲ್ಲಾಡಳಿತ, ರೆಡ್ಕ್ರಾಸ್ ಸಂಸ್ಥೆ, ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಯೋಗದಲ್ಲಿ 200 ಜನರು ಶಿವಮೊಗ್ಗದಲ್ಲಿ ಹೆಸರು ನೋಂದಾಯಿಸಿ ಕಾರ್ಯೋನ್ಮುಖರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಕ್ಷಣ ತರುವುದು, ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದವರ ಮನೆ ಬಾಗಿಲಿಗೆ ಆಹಾರ, ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಲ್ಲಿ ಅರಿವು ಮೂಡಿಸುವುದು, ಕರಪತ್ರಗಳನ್ನು ಹಂಚುವುದು ಮಾಡುತ್ತಿದೆ. ಅಲ್ಲದೆ ಹೊರ ರಾಜ್ಯಗಳಿಂದ ಕೂಲಿಗಾಗಿ ಶಿವಮೊಗ್ಗ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರಿಗೆ ನಿರ್ಮಿಸಿರುವ ಕೊರಂಟೈನ್ ಕೇಂದ್ರಗಳಲ್ಲಿ ಅವರ ರಾಜ್ಯದ ಭಾಷೆಗಳಲ್ಲಿಯೇ ಮಾಹಿತಿ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ರೆಡ್ಕ್ರಾಸ್ನಿಂದ ತರಬೇತಿ ಪಡೆದಿರುವ ತಂಡ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲಾದ್ಯಂತ ಈ ಪಡೆ ಮುನ್ನಡೆಯಲಿದೆ.
ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸ್ಪಂದಿಸುವುದಲ್ಲದೇ ಸೇವೆಯೇ ಬಹಳ ಮುಖ್ಯವಾಗಿ ಕೆಲಸ ಮಾಡುತ್ತಿದ್ದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ನೇತೃತ್ವದಲ್ಲಿ ತಂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೊರೊನಾ ವಾರಿಯರ್ಸ್ ತಂಡದಲ್ಲಿ ವೈದ್ಯರು, ಪತ್ರಕರ್ತರು, ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದಾರೆ. ಹಗಲು ಇರುಳೆನ್ನದೆ ಕಾರ್ಯ ನಿರ್ವಹಿಸುತ್ತಿದ್ದು ಏನೇ ಸಮಸ್ಯೆಯಾದರೂ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.
ಡಾ|| ಕುಮಾರ್ ಮಾತನಾಡಿ ರಾಜ್ಯ ವೈಸ್ ಛೇರ್ಮನ್, ರೆಡ್ಕ್ರಾಸ್, ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ತಂಡ ರಚನೆ ಮಾಡಲಾಗಿದ್ದು ರೆಡ್ಕ್ರಾಸ್ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಬಗ್ಗೆ ಇರುವ ಭಯವನ್ನು ಜನರಿಂದ ತೆಗೆದು ಹಾಕುವುದು, ಜಾಗೃತಿ ಮೂಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡದಂತೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಡಾ|| ದಿನೇಶ್ ಮಾತನಾಡಿ ಕಾರ್ಯದರ್ಶಿ, ರೆಡ್ಕ್ರಾಸ್, ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಕೂಲಿ ಕೆಲಸಕ್ಕಾಗಿ ಉತ್ತರಾಂಚಲ, ಜಾರ್ಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಜಾಪುರ ಮುಂತಾದ ಕಡೆಗಳಿಂದ ಕಾರ್ಮಿಕರು ಆಗಮಿಸಿದ್ದಾರೆ. ಜಿಲ್ಲಾಡಳಿತ ನಿರ್ಮಿಸಿರುವ ಕ್ಯಾಂಪ್ಗಳಲ್ಲಿ ಅವರ ಭಾಷೆಗಳಲ್ಲಿಯೇ ಅರಿವು ಮೂಡಿಸುವ ಕೊರೊನಾಕ್ಕೆ ಸಂಬಂಧಪಟ್ಟ ಪ್ರಾತ್ಯಕ್ಷಿಕೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಹಾಲಸ್ವಾಮಿ, ಪತ್ರಕರ್ತ & ಸಾಮಾಜಿಕ ಕಾರ್ಯಕರ್ತ ಮಾತನಾಡಿ ಶಿವಮೊಗ್ಗ: ಕೊರೊನಾ ವಾರಿಯರ್ಸ್ನ ಗುಂಪಿನಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ ತೊಡಗಿಕೊಂಡವರು ಕಾರ್ಯ ನಿರ್ವಹಿಸುತ್ತಿದ್ದೇವೆ. ಸಂಕಷ್ಟದ ಸಂದರ್ಭದಲ್ಲಿ ಸಾಂಘಿಕವಾಗಿ ಸ್ಪಂದಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಜಿಲ್ಲಾಡಳಿತದ ಚಿಂತನೆ ನಮ್ಮನ್ನು ಹೆಚ್ಚು ಕಾರ್ಯೋನ್ಮುಖರಾಗಲು ಉತ್ತೇಜಿಸಿದೆ.
ಡಾ. ರೇಶ್ಮಾ, ಉಪನ್ಯಾಸಕಿ, ಮಾತನಾಡಿ ಶಿವಮೊಗ್ಗ: ನನ್ನ ವಿದ್ಯಾರ್ಥಿಗಳನ್ನೂ ಕೊರೊನಾ ವಾರಿಯರ್ಸ್ ತಂಡದಲ್ಲಿ ತೊಡಗಿಸಿದ್ದೇನೆ. ಇಂತಹ ಸಂದರ್ಭದಲ್ಲಿ ಜನರಲ್ಲಿರುವ ಭಯವನ್ನು ತೆಗೆದುಹಾಕಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ. ನಮಗೆ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವ ಬಗ್ಗೆ ರೆಡ್ಕ್ರಾಸ್ ತರಬೇತಿ ನೀಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ತಂಡಕ್ಕೆ 200 ಜನ ನೋಂದಣಿ ಮಾಡಿಕೊಂಡಿದ್ದು ಹಂತ ಹಂತವಾಗಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಪ್ರಥಮವಾಗಿ 50ಕ್ಕೂ ಹೆಚ್ಚಿನವರಿಗೆ ತರಬೇತಿ ನೀಡಲಾಗಿದ್ದು ಗುರುತಿನ ಚೀಟಿ ನೀಡಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ತಂಡದ ಸಾಮಾಜಿಕ ಕಾಳಜಿ, ಪ್ರಾಮಾಣಿಕ ಪ್ರಯತ್ನ ಜನಮನ ಗೆಲ್ಲುತ್ತಿದೆ.