ಶಿವಮೊಗ್ಗ, ಜೂ.03: ಕೋವಿಡ್ ಪಾಸಿಟಿವಿಟಿ ಗಣನೀಯವಾಗಿ ಕಡಿಮೆಯಾಗುವ ತನಕ ಕಂಟೈನ್‍ಮೆಂಟ್ ವಲಯಗಳನ್ನು ಕಟ್ಟುನಿಟ್ಟಿನಿಂದ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ನಿರ್ವಹಣೆ ಹಾಗೂ ಮಾನ್ಸೂನ್ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಕಂಟೈನ್‍ಮೆಂಟ್ ವಲಯವನ್ನು ಕನಿಷ್ಟ 14 ದಿನಗಳಿಗಿಂತ ಮೊದಲು ತೆರವುಗೊಳಿಸಬಾರದು. ಕಂಟೈನ್‍ಮೆಂಟ್ ವಲಯದಲ್ಲಿ ಕರೋನಾ ತಪಾಸಣೆಯನ್ನು ವ್ಯವಸ್ಥಿತವಾಗಿ ನಡೆಸಬೇಕು. ಇದಕ್ಕಾಗಿ ಸಂಚಾರಿ ವಾಹನದ ವ್ಯವಸ್ಥೆ ಮಾಡಬೇಕು. ಪಾಸಿಟಿವ್ ವ್ಯಕ್ತಿಗಳನ್ನು ಮನೆ ಐಸೋಲೇಷನ್‍ಗೆ ಅವಕಾಶ ನೀಡದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇರಿಸಬೇಕು. ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಮನೆ ಐಸೋಲೇಷನ್‍ಗೆ ಹೆಚ್ಚಿನ ಅವಕಾಶ ನೀಡಿರುವುದು ಕಂಡು ಬಂದಿದ್ದು, ಇದನ್ನು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕರೋನಾದಿಂದ ಚೇತರಿಸಿಕೊಳ್ಳುವ ಮಕ್ಕಳ ಆರೋಗ್ಯದ ಮೇಲೆ ಆಶಾ ಕಾರ್ಯಕರ್ತರು ನಿರಂತರ 6ವಾರಗಳ ಕಾಲ ನಿಗಾ ವಹಿಸಬೇಕು. ಪಾಸಿಟಿವ್ ಬಂದ ಪಾಲಕರ ಮಕ್ಕಳ ಮೇಲೆ 6ವಾರಗಳ ನಿಗಾ ಅಗತ್ಯ. ಯಾವುದೇ ಮಕ್ಕಳಿಗೆ 3ದಿನಗಳಿಂದ ಜ್ವರ ನಿರಂತರವಾಗಿ ಬರುತ್ತಿದ್ದರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಪೂರಕವಾಗಿ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳ ದುರಸ್ತಿಯಂತಹ ಅಂಗಡಿಗಳಿಗೆ ಸೀಮಿತ ಅವಧಿಯ ಮಿತಿಗೆ ಒಳಪಟ್ಟು ತೆರೆಯಲು ಅವಕಾಶ ನೀಡಬಹುದಾಗಿದೆ. ಆವಶ್ಯಕ ವಸ್ತುಗಳ ಸಗಟು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ಸಾಮಾಗ್ರಿ ಪೂರೈಕೆ ಮಾಡಲು ಅವಕಾಶವಿದೆ ಎಂದರು.
ಮಾನ್ಸೂನ್ ಸಿದ್ಧತೆ: ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ನೆರೆ ಹಾವಳಿ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಬೇಕು. ಭೂಕುಸಿತ ಸಂಭವಿಸಬಹುದಾದ ಸ್ಥಳಗಳು, ನೆರೆ ನೀರಿಗೆ ಮುಳುಗಬಹುದಾದ ಕಿರು ಸೇತುವೆಗಳು, ನೀರು ನಿಲ್ಲಬಹುದಾದ ತಗ್ಗು ಪ್ರದೇಶಗಳು ಇತ್ಯಾದಿಗಳನ್ನು ಗುರುತಿಸಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಜಲಾಶಯಗಳು, ಕೆರೆಕಟ್ಟೆಗಳು, ಅಣೆಕಟ್ಟಿನ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇರಿಸಬೇಕು. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಿನದ 24ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಆರಂಭಿಸಬೇಕು. ನಗರ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಾಗಲು ಗಿಡಗಂಟಿಗಳು, ಕಸಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವ ಕಾರ್ಯವನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಶಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.