ಆತ್ಮರಕ್ಷಣೆ ತರಬೇತಿ ನೀಡುವ ಸರ್ಕಾರದ ಕಲ್ಪನೆ ಅದ್ಭುತವಾಗಿದೆ: ಡಿ.ಎಸ್.ಅರುಣ್
ಶಿವಮೊಗ್ಗ, ಫೆಬ್ರವರಿ 08: ಓಬವ್ವ ಆತ್ಮಸ್ಥೈರ್ಯ, ಧೈರ್ಯ ಮತ್ತು ಶೌರ್ಯದ ಪ್ರತೀಕವಾಗಿದ್ದು ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾಳೆ. ಓಬವ್ವನ ಹೆಸರಿನಲ್ಲಿ ಹೆಣ್ಣುಮಕ್ಕಳು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಕರಾಟೆ ಕಲೆಯಂತಹ ತರಬೇತಿ ನೀಡುವ ರಾಜ್ಯ ಸರ್ಕಾರದ ಕಲ್ಪನೆ ಅದ್ಭುತವಾಗಿದೆ ಎಂದರು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಓಬವ್ವ ಆತ್ಮ ರಕ್ಷಣಾ ಕಲೆ’ ಕರಾಟೆ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅನಾದಿ ಕಾಲದಿಂದಲೂ ಭಾರತೀಯ ನಾರಿ ಶೌರ್ಯದ ಸಂಕೇತವಾಗಿದ್ದಾಳೆ. ಚಿತ್ರದುರ್ಗದ ಕೋಟೆಯ ಪಾಳೆಗಾರ ಮದಕರಿ ನಾಯಕನ ಹೆಂಡತಿ ಓಬವ್ವಳು ಹೈದರಾಲಿ ಹಠಾತ್ತನೆ ಕೋಟೆಯ ಮೇಲೆ ಆಕ್ರಮಣ ಮಾಡಿದಾಗ, ಓಬವ್ವಳು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಧೈರ್ಯವಾಗಿ ಶತ್ರುಗಳನ್ನು ಎದುರಿಸಿದ್ದ ಬಗ್ಗೆ ಎಲ್ಲರಿಗೆ ತಿಳಿದಿದೆ. ಈ ವೀರವನಿತೆಯ ಶೌರ್ಯ, ಶಕ್ತಿ ಎಲ್ಲ ಹೆಣ್ಣು ಮಕ್ಕಳಲ್ಲಿ ಕಾಣಬೇಕು. ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಯನ್ನು ತಾವು ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಮ್ಮ ಸಮಾಜ ಉತ್ತಮವಾಗಿದೆ. ಆದರೂ ಸಮಾಜದಲ್ಲಿ ಕೆಲ ಕಿಡಗೇಡಿಗಳ ವರ್ತನೆಯಿಂದ ಸಮಾಜಘಾತುಕ ಚಟುವಟಿಕೆ ನಡೆಯುತ್ತಿರುತ್ತವೆ. ಅದನ್ನು ಮೀರಿ ನಾವು ಬೆಳೆಯಬೇಕು. ಅದಕ್ಕೆ ಆತ್ಮಸ್ಥೈರ್ಯ ಬಹುಮುಖ್ಯವಾಗುತ್ತದೆ ಎಂದ ಅವರು ಶಿವಮೊಗ್ಗದ ಯುವಜನತೆ ಕೂಡ ಕರಾಟೆ, ಜೂಡೋ, ಕುಂಗ್‍ಫು ಇನ್ನೂ ಅನೇಕ ಆತ್ಮರಕ್ಷಣೆ ಚಟುವಟಿಕೆಗಳು ಸೇರಿದಂತೆ ಕ್ರೀಡೆ ಇತ್ಯಾದಿ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು, ಅಧಿಕಾರಿಗಳು ಸಹ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು
ವಿಧಾನ ಸಭಾ ಸದಸ್ಯರಾದ ಕೆ.ಬಿ.ಅಶೋಕ್‍ನಾಯ್ಕ್ ಮಾತನಾಡಿ, ಓಬವ್ವ ಎಂದರೆ ಧೈರ್ಯ. ಆಕೆ ಸಾಹಸದ ಸಂಕೇತವಾಗಿದ್ದು, ಆತ್ಮರಕ್ಷಣೆ ಕಲೆಯು ನಿಶ್ಚಿತವಾಗಿ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಆಗಾಗ್ಗೆ ಕಿಡಿಗೇಡಿಗಳಿಂದ ಸಮಸ್ಯೆ ಎದುರಾಗುತ್ತಿರುತ್ತದೆ. ಅದನ್ನು ಎದುರಿಸುವ ಧೈರ್ಯ ಮತ್ತು ಶಕ್ತಿ ಬೇಕು. ಆದ್ದರಿಂದ ರಾಜ್ಯ ಸರ್ಕಾರ ದೇಶದಲ್ಲೇ ಪ್ರಥಮವಾಗಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದರು.
ಗೌರವ ಸಮರ್ಪಣೆ : ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಕ್ರೀಡೆಗಳ ಜಾಗೃತಿ ಕುರಿತು ಯುವಜನ ಸಬಲೀಕರಣ ಇಲಾಖೆಯು ‘ಶಿಖರದಿಂದ ಸಾಗರ’ ಎಂಬ ಸಾಹಸಮಯ ಕಾರ್ಯಕ್ರಮ ಆಯೋಜಿಸಿದ್ದು, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯ ವಿದ್ಯಾರ್ಥಿನಿಲಯದ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿರುವ ಕು.ಐಶ್ವರ್ಯ.ವಿ ರಾಜ್ಯದಲ್ಲಿ ಆಯ್ಕೆಯಾದ ಐದು ಜನರ ತಂಡದಲ್ಲಿ ಒಬ್ಬರಾಗಿ ಪ್ರತಿನಿಧಿಸಿ, ಕಾಶ್ಮೀರದಿಂದ ಕಾರವಾರದವರೆಗೆ 3550 ಕಿ.ಮೀ ನ್ನು ಕೇವಲ 07 ದಿನಗಳಲ್ಲಿ ಸೈಕ್ಲಿಂಗ್ ಮೂಲಕ ಸಾಗಿ ಬಂದು ಯಶಸ್ವಿಗೊಳಿಸಿರುತ್ತಾರೆ. ಇವರ ಈ ಸಾಧನೆಗೆ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಕುಮಾರ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಕರಾಟೆ ಸಂಘದ ಪದಾಧಿಕಾರಗಳು ಹಾಗೂ ಮುಖ್ಯ ತರಬೇತುದಾರರಾದ ವಿನೋದ್ ಮತ್ತು ಶಬ್ಬೀರ್ ಅಹ್ಮದ್, ವಿದ್ಯಾರ್ಥಿಗಳು ಹಾಜರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶ ಕೆ.ನಾಗರಾಜ್ ವಂದಿಸಿದರು.