ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಇರಬಹುದಾದ ಅಡ್ಡಿ ಆತಂಕಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮನವಿ ಮಾಡಲಾಗುವುದು ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರು ಹೇಳಿದರು.
ಅವರು ಇಂದು ಮುತ್ತಿನಕೊಪ್ಪ ಗ್ರಾಮದ ಚಾನಲ್ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶಿಲನೆ ನಡೆಸಿದ ಅವರು ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ತುಂಗಾ ಜಲಾಶಯ ಸೇರುತ್ತಿದ್ದ ಹೆಚ್ಚುವರಿಯಾದ ಸುಮಾರು 17ಡಿ.ಎಂ.ಸಿ.ನೀರನ್ನು ಈ ಚಾನಲ್ ಗಳ ಮೂಲಕ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶಕ್ಕೆ ಹರಿಸಲಾಗುವುದು ಎಂದರು.
ಈ ಚಾನಲ್ ಕಾಮಗಾರಿ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಈಗಾಗಲೇ ವಿದ್ಯುತ್ ಇಲಾಖೆಯ ಪರವಾನಿಗೆ ದೊರೆತಿದ್ದು, ಹಾಗೂ ಅರಣ್ಯ ಇಲಾಖೆಯ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದರು.
ಈ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಹಿಂದಿನ ಸಿದ್ಧರಾಮಯ್ಯನವರ ಸರ್ಕಾರದ ಅವಧಿಯಲ್ಲಿ 7000ಕೋಟಿ ಅನುದಾನ ಬಿಡುಗಡೆಯಾಗಿತ್ತು. ಕೇಂದ್ರ ಸರ್ಕಾರವು ಕಳೆದ ಬಜೆಟ್ನಲ್ಲಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಸುಮಾರು 5300ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು. ಈ ಅನುದಾನವನ್ನು ಬಳಸಿಕೊಂಡು, ಸ್ಥಳೀಯವಾಗಿ ಎದುರಾಗಬಹುದಾದ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಯೋಜನೆಯನ್ನು ಮುಂದಿನ ಒಂದು ವರ್ಷದೊಳಗಾಗಿ ಪೂರ್ಣಗೊಳಿಸುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ ಅವರು, ಮಾತಿನಂತೆ ಕೇಂದ್ರದಿಂದ ಅನುದಾನ ನಿಡುಗಡೆಯಾಗದಿದ್ದಲ್ಲಿ ಆ ಹಣವನ್ನು ರಾಜ್ಯ ಸರ್ಕಾರದದಲೆ ಭರಿಸಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ, ವೀರೇಂದ್ರ, ಪಪ್ಪಿ, ಹೆಚ್.ಆಂಜನೇಯ, ರಘುಮೂರ್ತಿ, ರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.