ಶಿವಮೊಗ್ಗ, ಜೂ.10 : ಜಿಲ್ಲೆಯಾದ್ಯಂತ ಸ್ವಚ್ಛತೆ ಹಾಗೂ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸಲು ಒಂದು ತಿಂಗಳ ಕಾಲ `ಸ್ವಚ್ಛ ಮೇವ ಜಯತೆ’ ಹಾಗೂ ಜಲಾಮೃತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಅಭಿಯಾನವನ್ನು ಜೂನ್ 11ರಂದು ಉದ್ಘಾಟಿಸುವರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ ಅವರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಅಂಗವಾಗಿ ವೈಯಕ್ತಿಕ ಹಂತದಿಂದ ಸಾಮುದಾಯಿಕ ಹಂತದವರೆಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಒಂದು ತಿಂಗಳ ಕಾಲ ಆಯೋಜಿಸಲಾಗುವುದು. ಎಲ್ಲಾ 271ಗ್ರಾಮ ಪಂಚಾಯತ್‍ಗಳಲ್ಲಿ ಅಭಿಯಾನದ ಬಗ್ಗೆ ಅರಿವು ಮೂಡಿಸಲು ಮೂರು ಆಕರ್ಷಕ ಸ್ವಚ್ಛ ರಥ ಸಿದ್ಧಪಡಿಸಲಾಗಿದ್ದು, ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಸಂಚರಿಸಲಿದೆ. ಈ ಎಲ್ಲಾ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಅಭಿಯಾನದ ಅವಧಿಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ತಲಾ 500ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಹಾಗೂ ನೀರಿನ ಸಮರ್ಪಕ ಬಳಕೆ ಬಗ್ಗೆ ಅರಿವು ಮೂಡಿಸಲು ಚರ್ಚಾ ಸ್ಪರ್ಧೆಗಳು ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ತಾಲೂಕು ಮಟ್ಟದಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಪ್ರಥಮ 8ಸಾವಿರ ರೂ. ದ್ವಿತೀಯ 5ಸಾವಿರ ರೂ. ಹಾಗೂ ತೃತೀಯ 4ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಪ್ರತಿ ದಿನ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜು ಅಂಗನವಾಡಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಅಂಗನವಾಡಿಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕೈತೊಳೆಯುವ ವಿಧಾನ ಕಲಿಸುವಿಕೆ, ಎಲ್ಲಾ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿ ಕುರಿತು ಪ್ರಾತ್ಯಕ್ಷಿಕೆ, ಶೌಚಾಲಯ ಬಳಕೆ ಕುರಿತು ಜಾಗೃತಿ, ಪ್ರತಿ ತಾಲೂಕುಗಳಲ್ಲಿ ಜಾಥಾ ಕಾರ್ಯಕ್ರಮ, ನೇರ ಫೋನ್ ಇನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಶೌಚಾಲಯ ನಿರ್ಮಾಣ: ಜಿಲ್ಲೆಯನ್ನು ಬಯಲುಮುಕ್ತ ಶೌಚಾಲಯ ಜಿಲ್ಲೆ ಎಂದು ಘೋಷಿಸಲಾಗಿದ್ದರೂ, ಶೌಚಾಲಯಗಳು ಇಲ್ಲದ 12384 ಕುಟುಂಬಗಳನ್ನು ಗುರುತಿಸಲಾಗಿದೆ. ಈಗಾಗಲೇ 10400 ಶೌಚಾಲಯಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು, ಸುಮಾರು 3ಸಾವಿರ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭ: ಅಭಿಯಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಆಯನೂರಿನಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸುವರು. ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಅವರು ಅಧ್ಯಕ್ಷತೆ ವಹಿಸುವರು.
ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಲೋಗೊ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಉಪ ಕಾರ್ಯದರ್ಶಿ ರಂಗಸ್ವಾಮಿ, ಯೋಜನಾ ನಿರ್ದೇಶಕ ವೀರಾಪುರ ಅವರು ಉಪಸ್ಥಿತರಿದ್ದರು.