ಶಿವಮೊಗ್ಗ, ಜೂನ್ 09 2023 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ಜಿಲ್ಲೆಯಲ್ಲಿ ಜೂನ್ 12 ರಿಂದ 19 ರವರೆಗೆ ನಡೆಯಲಿದ್ದು ಸುವ್ಯವಸ್ಥಿತ ಮತ್ತು ಶಾಂತಿಯುತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯ ಪೂರ್ವಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಸೂಚನೆಗಳನ್ನು ನೀಡಿದರು.
ಒಟ್ಟು 3523 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಜಿಲ್ಲೆಯ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜೂನ್ 12 ರಂದು ಪ್ರಥಮ ಭಾಷೆ, ಜೂ.13 ರಂದು ವಿಜ್ಞಾನ, ಜೂ.14 ರಂದು ದ್ವಿತೀಯ ಭಾಷೆ, ಜೂನ್ 15 ಸಮಾಜ ವಿಜ್ಞಾನ, ಜೂನ್ 16 ರಂದು ತೃತೀಯ ಭಾಷೆ, ಜೂನ್ 17 ರಂದು ಗಣಿತ, ಜೂನ್ 19 ರಂದು ಇತರೆ ಕೋರ್ ವಿಷಯಗಳ ಪರೀಕ್ಷೆ ನಡೆಯಲಿದೆ.
ಈಗಾಗಲೇ 14 ಮುಖ್ಯ ಅಧೀಕ್ಷಕರರು, 14 ಜನ ಸ್ಥಾನಿಕ ಜಾಗೃತ ದಳ ಅಧಿಕಾರಿ, 7 ಜನ ಮಾರ್ಗಾಧಿಕಾರಿ, 7 ಮೊಬೈಲ್ ಸ್ವಾಧೀನಾಧಿಕಾರಿ, 9 ಜನ ವೀಕ್ಷಕರನ್ನು ನೇಮಿಸಲಾಗಿದೆ. ಹಾಗೂ ಕೊಠಡಿ ಮೇಲ್ವಿಚಾರಕು, ಸಿಬ್ಬಂದಿ ನಿಯೋಜನೆ ಆಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಮತ್ತು ಇತರೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ.
ಪರೀಕ್ಷಾ ದಿನಗಳಂದು ಯಾವುದೇ ಅಹಿತರ ಘಟನೆಗಳಿಗೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ.ಫಾಸಲೆಯವರೆಗೆ ಸಿಆರ್‍ಪಿಸಿ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಆಸನ/ಪೀಠೋಪಕರಣ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ, ಒದಗಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕಾರ್ಯನಿರ್ವಹಣೆ ಖಾತರಿಪಡಿಸಿಕೊಳ್ಳಬೇಕು ಎಂದ ಅವರು ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಸಕಲ ಸಿದ್ದತೆ ಬಗ್ಗೆ ಸೂಚನೆ ನೀಡಿದರು.
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಡಯಟ್ ಪ್ರಾಚಾರ್ಯ ಬಸವರಾಜಪ್ಪ, ಶಿಕ್ಷಣಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು
