News Next

ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಜೂನ್ 25ರಿಂದ ಜುಲೈ 04ರವರೆಗೆ ಜಿಲ್ಲೆಯ 84ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಕೊರೋನ ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಅವರು ಹೇಳಿದರು.
ಅವರು ಇಂದು ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವಸಿದ್ಧತೆಗಳ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು ಕೈಗೊಂಡ ಕ್ರಮಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 12,287ವಿದ್ಯಾರ್ಥಿಗಳು ಹಾಗೂ 11,956ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 24,243ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪೈಕಿ ಭದ್ರಾವತಿ ತಾಲೂಕಿನ 4,607, ಹೊಸನಗರ ತಾಲೂಕಿನ 1,629, ಸಾಗರ ತಾಲೂಕಿನ 2,878, ಶಿಕಾರಿಪುರ ತಾಲೂಕಿನ 3,697, ಶಿವಮೊಗ್ಗ ತಾಲೂಕಿನ 7164., ಸೊರಬ ತಾಲೂಕಿನ 2578 ಹಾಗೂ ತೀರ್ಥಹಳ್ಳಿ ತಾಲೂಕಿನ 1,690 ವಿದ್ಯಾರ್ಥಿಗಳಿದ್ದಾರೆ ಎಂದರು.
ಪರೀಕ್ಷೆ ನಡೆಸಲು ಈ ಹಿಂದೆ 1050ಕೊಠಡಿಗಳನ್ನು ನಿಗಧಿಪಡಿಸಲಾಗಿತ್ತು. ಆದರೆ ಪ್ರಸಕ್ತ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿಯಾಗಿ 202ಕೊಠಡಿಗಳು ಸೇರಿದಂತೆ ಒಟ್ಟು 84ಪರೀಕ್ಷಾ ಕೇಂದ್ರಗಳಲ್ಲಿ 1252ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಶೇಷ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೊಠಡಿಗೆ 20ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.
ಜಿಲ್ಲೆಯ 08ಕಂಟೈನ್‍ಮೆಂಟ್ ಝೋನ್‍ಗಳಿಂದ ಪರೀಕ್ಷೆಗೆ ಹಾಜರಾಗುವ 250ವಿದ್ಯಾರ್ಥಿಗಳಿಗಾಗಿ ವಿಶೇಷ ಕೊಠಡಿ ಸ್ಥಾಪಿಸಲಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಸಾಮಾನ್ಯ ಅಂತರಕ್ಕಿಂತ ಹೆಚ್ಚಿನ ಅಂತರದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಪರೀಕ್ಷೆಗೆ ಹಾeರಾಗುವ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೆ ಹಾಜರಿದ್ದು, ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ನಡೆಸುವ ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಬೇಕು. ಪ್ರತಿ ವಿದ್ಯಾರ್ಥಿಗೆ ಸ್ವಯಂ ಸೇವಾ ಸಂಸ್ಥೆಗಳು ನೀಡಿರುವ 02ಮಾಸ್ಕ್ ಹಾಗೂ ದೈನಂದಿನ ಬಳಕೆಗೆ ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಮೇಲ್ವಿಚಾರಕರ ಅಣತಿಯಂತೆ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರದಿಂದ ನಿರ್ಗಮಿಸಲು ಸೂಚಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಯು ಕುಡಿಯುವ ನೀರು ಹಾಗೂ ಅಗತ್ಯದ ಉಪಹಾರವನ್ನು ತರುವಂತೆ ಸೂಚಿಸಲಾಗಿದೆ. ಕೆಲವು ಸಂದರ್ಭದಲ್ಲಿ ದೂರದ ಊರಿನಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯವಿದ್ದಲ್ಲಿ ಉಪಹಾರ ನೀಡುವ ಕ್ರಮವಾಗಿ ಒಂದು ಬಿಸ್ಕಿತ್ ಪ್ಯಾಕೇಟ್‍ನ್ನು ಹಾಗೂ ಕುಡಿಯುವ ನೀರನ್ನು ಒದಗಿಸಲಾಗುವುದು. ಇದರ ವ್ಯವಸ್ಥಿತ ನಿರ್ವಹಣೆಗಾಗಿ ಸ್ಕೌಟ್ ಮತ್ತು ಗೈಡ್ಸ್‍ನ 375ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಅಂತೆಯೇ ವಿದ್ಯಾರ್ಥಿಯು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಅವರಿರುವ ಸ್ಥಳದಿಂದಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಶಿವಮೊಗ್ಗ ಜಿಲ್ಲೆಯ 743ವಿದ್ಯಾರ್ಥಿಗಳು ಹೊರಜಿಲ್ಲೆಗಳಲ್ಲಿ ಹಾಗೂ ಹೊರಜಿಲ್ಲೆಯ 668ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟಾರೆಯಾಗಿ ಯಾವುದೇ ವಿದ್ಯಾರ್ಥಿಯು ಪರೀಕ್ಷೆ ಅವಕಾಶದಿಂದ ವಂಚಿತರಾಗದಂತೆ ಗಮನಹರಿಸಲಾಗಿದೆ ಎಂದರು.
ಬಿ.ಸಿ.ಎಂ., ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಮತ್ತಿತರು ನಿರ್ವಹಿಸುತ್ತಿರುವ ಹಾಸ್ಟೆಲ್‍ನಲ್ಲಿದ್ದು ಪರೀಕ್ಷೆ ಬರೆಯಲಿರುವ 586ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಅವಧಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಬಯಸಿದಲ್ಲಿ ಅವರಿಗೂ ತಂಗುವ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಪ್ರತಿ ಹಾಸ್ಟೆಲ್‍ಗೆ ಓರ್ವ ಅಧಿಕಾರಿಯನ್ನು ಮೇಲ್ವಿಚಾರಕರನ್ನಾಗಿ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂಧಿ ಓರ್ವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು.
ಈ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಬಳಸಿಕೊಂಡು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಅಂತಹ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತೊಮ್ಮೆ ಪುನರ್ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗುವುದು ಎಂದ ಅವರು, 3745ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕಾಲ್ನಡಿಗೆಯಲ್ಲಿ, 10,940ಮಕ್ಕಳು ತಮ್ಮ ಪೋಷಕರ ನೆರವಿನೊಂದಿಗೆ, 548ಮಕ್ಕಳು ಶಾಲಾ ವಾಹನದಲ್ಲಿ, 752ಮಕ್ಕಳು ರೂಟ್ ಬಸ್‍ನಲ್ಲಿ ಹಾಗೂ 586ಮಕ್ಕಳ ಹಾಸ್ಟೆಲ್‍ನಲ್ಲಿದ್ದು ಪರೀಕ್ಷಾ ಕೇಂದ್ರಕ್ಕೆ ಬರಲಿದ್ದಾರೆ. ಯಾವುದೇ ಸೌಲಭ್ಯವಿಲ್ಲದಿರುವ 4097ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಸುರಕ್ಷಿತವಾಗಿ ಮನೆಗೆ ತಲುಪಿಸಲು 189ಶಾಲೆಗಳ 252ಖಾಸಗಿ ಶಾಲಾ ವಾಹನಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ 104ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅವುಗಳಲ್ಲಿಯೂ 05ಬಸ್ಸುಗಳನ್ನು ತುರ್ತು ಸಂದರ್ಭಗಳಿಗಾಗಿ ಕಾಯ್ದಿರಿಸಲಾಗಿದೆ ಎಂದರು.
ಉಳಿದಂತೆ ಈ ಹಿಂದಿನಂತೆಯೇ ಎಲ್ಲಾ ಪರೀಕ್ಷಾ ಕ್ರಮಗಳು ಮುಂದುವರೆಯಲಿವೆ. ಅದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಇಲಾಖೆಯ ಸಚಿವರ ಉಪಸ್ಥಿತಿಯಲ್ಲಿ ಅನೇಕ ಸಭೆಗಳನ್ನು ನಡೆಸಲಾಗಿದೆ ಎಂದವರು ತಿಳಿಸಿದರು.

error: Content is protected !!