ವಕೀಲರೇ ಅನಭಿಶಿಕ್ತ ಶಾಸನ ಕರ್ತರು : ಜಸ್ಟಿಸ್ ಕೃಷ್ಣಾ ದೀಕ್ಷಿತ್
ಶಿವಮೊಗ್ಗ : ಕವಿಗಳನ್ನು ಅನಭಿಶಿಕ್ತ ಸಾಹಿತ್ಯದ ಕರ್ತರು ಎನ್ನುವಂತೆ ವಕೀಲರು ಶಾಸನದ ಅನಭಿಶಿಕ್ತ ಕರ್ತರು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟಿಸ್ ಕೃಷ್ಣಾ ಎಸ್.ದೀಕ್ಷಿತ್ ಅಭಿಪ್ರಾಯಪಟ್ಟರು.
ಶನಿವಾರ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವ ಉಪನ್ಯಾಸ ಸರಣಿಯ ಆರನೇ ಮಾಲಿಕೆ ಹಾಗೂ ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಧೀಶರಿಗಿಂತ ವಕೀಲರ ಜವಾಬ್ದಾರಿ ಹೆಚ್ಚು. ಕಾನೂನು ವಿದ್ಯಾರ್ಥಿಗಳು ಪದವಿ ನಂತರವು ಅಧ್ಯಯನಶೀಲತೆ ಮುಂದುವರೆಸಬೇಕಿದೆ. ವಕೀಲರೆಂದರೆ ಕೆಲವು ತತ್ವಗಳ ಮೇಲೆ ನಿರ್ಮಾಣವಾಗಿದೆ ಎಂದು ಸಮಾಜ ನಂಬಿದೆ. ಅಂತಹ ನಂಬಿಕೆಗಳಿಗೆ ಘಾಸಿಯಾಗದಂತೆ ವಕೀಲರಾದವರು ನಡೆದುಕೊಳ್ಳಬೇಕಿದೆ.
ವಕೀಲ ಎಂದ ಕೂಡಲೇ ವಿನಾಕಾರಣ ವಾದ ಮಾಡುವವರು, ಅವರಿಗೆ ಮನೆ ಬಾಡಿಗೆ ನೀಡಬಾರದು, ಮಾತನಾಡಿಸಬಾರದು ಎಂದು ಸಮಾಜದ ಒಂದು ಭಾಗ ವಿಚಾರ ಮಾಡುವ ಕಾಲವಿತ್ತು. ಅದರೇ ಅಂತಹ ವಿಚಾರಗಳು ಸಮಾಜದಲ್ಲಿ ಬದಲಾಗಿದೆ. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರದ ಮಹತ್ವವನ್ನು ಕುರಿತು ಸಮಾಜ ಒಪ್ಪಿಕೊಂಡಿದೆ. ಸಂವಿಧಾನದ ರೂಪರೇಷ ಉಳಿಸಿಕೊಳ್ಳುವಲ್ಲಿ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಮುಖ್ಯ ಕಾರಣ. ವಕೀಲಿ ವೃತ್ತಿ ಸಂವಿಧಾನದಲ್ಲಿಯೇ ಉಲ್ಲೇಖವಾಗಿರುವ ವೃತ್ತಿ. ಅಂತಹ ವೃತ್ತಿಯ ಬಗ್ಗೆ ಕೀಳರಿಮೆ ಬೇಡ.
ನ್ಯಾಯಾಲಯ ಅಂಗಡಿಗಳಲ್ಲ, ಅದೊಂದು ನ್ಯಾಯದಾನದ ದೇಗುಲ. ಹಾಗಾಗಿಯೇ ವಕೀಲರಾಗುವವರಲ್ಲಿ ಲಾಭಾಂಶದ ಹಂಬಲ ಬೇಡ. ವ್ಯಾಜ್ಯಗಳ ಅಗತ್ಯತೆಗೆ ತಕ್ಕಂತೆ ಶುಲ್ಕವನ್ನು ಪಡೆಯಿರಿ. ಶುಲ್ಕ ಕಡಿಮೆ ನೀಡುತ್ತಾರೆ ಎಂಬ ಕಾರಣಕ್ಕೆ ಕೇಸ್ ಪಡೆಯದೇ ಇರುವುದು ಸರಿಯಲ್ಲ.
ಸಾಮಾನ್ಯ ಜನರು ತಡವಾಗಿ ಸಿಗುವ ನ್ಯಾಯದ ಕುರಿತು ಸದಾ ಬೇಸರಿಸುತ್ತಾರೆ. ತಡವಾಗಿ ಸಿಗುವ ನ್ಯಾಯ ನ್ಯಾಯವೇ ಅಲ್ಲ ಎಂಬ ಮಾತಿದೆ. ಅದರೇ ಅವಸರದಲ್ಲಿ ನೀಡಿದ ನ್ಯಾಯ ಸಮಾಧಿ ಮಾಡಿದಂತೆ ಎಂಬ ಸಮಂಜಸವು ಬರುತ್ತದೆ ಎಂದು ಹೇಳಿದರು.
ಅಮೃತಮಹೋತ್ಸವದ ವಿಶೇಷ ಉಪನ್ಯಾಸದಲ್ಲಿ ಮಾನವ ಹಕ್ಕುಗಳ ಕುರಿತು ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಮಾತನಾಡಿ, ಎಪ್ಪತ್ತೈದು ವರ್ಷ ಪೂರೈಸಿರುವ ಮಾನವ ಹಕ್ಕುಗಳು ನಮ್ಮ ಸಂವಿಧಾನದಲ್ಲಿ ಪ್ರಬಲವಾಗಿ ಅಡಕವಾಗಿದೆ. ಪ್ರತಿಯೊಂದು ಪ್ರಾಣಿ, ಪಕ್ಷಿ, ಮನುಷ್ಯರಿಗೆ ಬದುಕುವ ಹಕ್ಕಿದೆ. ಅದರೇ ಮನುಷ್ಯನಿಗೆ ವಿಶೇಷವಾಗಿ ಹುಟ್ಟಿನಿಂದಲೇ ಆಲೋಚಿಸುವ, ಹಕ್ಕುಗಳನ್ನು ಮಂಡನೆ ಮಾಡುವ ಶಕ್ತಿಯಿದೆ. ಭಾರತ ಮುಕ್ತವಾಗಿ ಹೆಣ್ಣು ಮತ್ತು ಗಂಡಿಗೆ ಸಮಾನವಾದ ಹಕ್ಕು ನೀಡಿದೆ. ಇಂದಿನ ದಿನಮಾನದಲ್ಲಿ ಶಿಕ್ಷೆಯ ಮನಃಪರಿವರ್ತನೆಯ ಉದ್ದೇಶಗಳು ಸಕಾರಗೊಳ್ಳುತ್ತಿಲ್ಲ. ಶಿಕ್ಷೆ ಎಂದು ಕಳಿಸಿದ ಜೈಲು ವ್ಯಾಪಾರ ಕೇಂದ್ರವಾಗಿ ಮಾರ್ಪಾಡಾಗಿರುವುದು ವಿಷಾದನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಸ್ವಾಗತಿಸಿದರು, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಖಜಾಂಚಿಗಳಾದ ಡಿ.ಜಿ.ರಮೇಶ್, ಪ್ರಾಂಶುಪಾಲರಾದ ಡಾ.ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕಾನೂನು ಪದವಿ ಪಡೆದ ಅರವತ್ತಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.