ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಈ ಯೋಜನೆ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನಿಗದಿತ ಸಮಯಕ್ಕೆ ಹಣ ಮಂಜೂರಾಗುತ್ತಿಲ್ಲ ಎನ್ನುವ ಕೂಗು ಇದ್ದರೂ ಫಲವಂತಿಕೆಯಲ್ಲಿ ಮಾತ್ರ ಯಶಸ್ಸು ಕಾಣುತ್ತಿದೆ. ನರೇಗಾ ಯೋಜನೆಯಲ್ಲಿ ಗಂಡು ಮಕ್ಕಳ ಜೊತೆಯಲ್ಲಿ ಹೆಣ್ಣುಮಕ್ಕಳು ಹೆಚ್ಚು ತೊಡಗಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸ್ವಾತಂತ್ರ್ಯಾನಂತರದ ಹೆಣ್ಣು-ಗಂಡಿಗೆ ಸಮಾನ ವೇತನ ನೀಡುವ ಭಾರತದ ಪ್ರಥಮ ಯೋಜನೆ ಇದಾಗಿದ್ದು ಮಾನವ ಸಂಪನ್ಮೂಲದ ಬಳಕೆಯಲ್ಲಿ ಸಾರ್ಥಕತೆಯನ್ನು ಕಾಣುತ್ತಿದೆ.

                ರಾಜ-ಮಹಾರಾಜರು ಕೆರೆಕಟ್ಟೆಗಳನ್ನು ಅಂದು ಕುಡಿಯುವ ನೀರಿಗೆ ಜಾನುವಾರುಗಳಿಗೆ ಹಾಗು ಕೃಷಿ ಸಂಭಂಧಿತ ಯೋಜನೆಗಳಿಗೆ  ಕಟ್ಟಿಸುತ್ತಿದ್ದರು. ನಂತರದ ದಿನಗಳಲ್ಲಿ ಸಕಾ೯ರಗಳು  ಹಳೆ ಕೆರೆಗಳ ರಿಪೇರಿಗೇ ಹೊಸ ಬಜೆಟ್‍ಗಳಲ್ಲಿ ಹಣ ತೆಗೆದಿರಸುತ್ತಾ ಬಂದಿತು.  ಇತ್ತೀಚೆಗೆ ಹೊಸ ಕೆರೆಗಳನ್ನು ನರೇಗಾ ಮೂಲಕ ನಿರ್ಮಾಣ ಮಾಡಬೇಕು ಎನ್ನುವ ಯೋಜನೆ ಆರಂಭಗೊಂಡಿದೆ. ಸಾಗರ ತಾಲ್ಲೂಕಿನ ಖಂಡಿಕಾ ಗ್ರಾಮಪಂಚಾಯ್ತಿಯ ಕುಗ್ವೆ ಗ್ರಾಮದಲ್ಲಿ ಇಂತಹ ಪ್ರಯತ್ನದೊಂದು ಸದ್ದಿಲ್ಲದೇ ನಡೆದಿದೆ. ಗ್ರಾಮ ಸುಧಾರಣಾ ಸಮಿತಿ, ಗ್ರಾಪಂಚಾಯಿತಿ  ಒಟ್ಟಾಗಿ ಸೇರಿ ಮಾತುಕತೆ ನಡೆಸಿ ಬೆಟ್ಟಗುಡ್ಡಗಳ ಮಧ್ಯೆ ಇರುವ  ಭೂಮಿಯನ್ನು ಗುರುತಿಸಿ ಇಲ್ಲಿ ಹೊಸ ಕೆರೆ ನಿರ್ಮಾಣ ಮಾಡಲಾಗುತ್ತಿದೆ. 2018-19ನೇ ಸಾಲಿನಲ್ಲಿ ಕೆರೆ ನಿರ್ಮಾಣದ ಕಾಮಗಾರಿ ಆರಂಭವಾಗಿದ್ದು ಈಗ ಮುಕ್ತಾಯದ ಹಂತದಲ್ಲಿದೆ. ಶ್ರಮಜೀವಿಗಳು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಟೊಂಕ ಕಟ್ಟಿ ಕೆರೆ ನಿರ್ಮಾಣದಲ್ಲಿ ತೊಡಗಿರುವುದು ನರೇಗಾದ ಸಫಲತೆಗೆ ಸಾಕ್ಷಿಯಾಗಿದೆ.

ನರೇಗಾ ಖಾತ್ರಿಯಲ್ಲಿ  ಕುಗ್ವೆಯ ಹೆಣ್ಣುಮಕ್ಕಳು

                ಖಂಡಿಕಾ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕುಗ್ವೆಯ ಕೆರೆ ಕಾಯಕಕ್ಕೆ ಒಟ್ಟು 138 ಜನ ದಿನವೂ ತೊಡಗಿಕೊಳ್ಳುತ್ತಿದ್ದಾರೆ. ಇದರಲ್ಲಿ 124 ನಾರಿಯರಿದ್ದಾರೆ. ಅಚ್ಚರಿ ಎಂದರೆ ವಯೋವೃದ್ಧರೂ, ಪ್ರಾಣಾಪಾಯದ ಕಾಯಿಲೆಯಿಂದ ಗುಣಮುಖರಾಗಿ ಹೊರಬಂದವರೂ ಸಂತಸದಿಂದ ಕೆಲಸದಲ್ಲಿ ತೊಡಗಿದ್ದಾರೆ. ಮಣ್ಣಿನ ಮಧ್ಯೆ ಗುದ್ದಲಿ, ಪಿಕಾಸಿ ಹಿಡಿದು ಕೆತ್ತುವ ಅವರ ಶಕ್ತಿ ಎಂಥವರನ್ನೂ ನಾಚಿಸುತ್ತದೆ. ಈಗಾಗಲೇ ಈ ಕೆರೆ ನಿರ್ಮಾಣಕ್ಕೆ 9,727 ಮಾನವ ದಿನಗಳನ್ನು 24,76,736 ಹಣವನ್ನು ಬಳಸಲಾಗಿದೆ. ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ಮಾನವಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಸುತ್ತಿದೆ. ಖಂಡಿಕಾ ಗ್ರಾಪಂನ ವ್ಯಾಪ್ತಿಯಲ್ಲಿ ಕೆರೆ ನಿರ್ಮಾಣಕ್ಕೆ ಸಾಲು ಸಾಲು ಸರದಿ ಸರದಿಯಲ್ಲಿ ಕುಗ್ವೆಯ ಹೆಣ್ಣುಮಕ್ಕಳು ತೊಡಗಿರುವುದು ವಿಶೇಷ.

ಖಾತ್ರಿ ಯೋಜನೆ ಯೋಜನೆಯಲ್ಲಿ ಊರಿಗೊಂದು ಕೆರೆ:

                ಸಾಗರ ತಾಲ್ಲೂಕಿನಲ್ಲಿ ಉದ್ಯೋಗಖಾತ್ರಿ ಯೋಜನೆಯಲ್ಲಿ 27,703 ಕಾರ್ಡ್‍ಗಳಿವೆ. ಈ ವರ್ಷ 3,88,386 ಮಾನವ ದಿನಗಳ ಬಳಕೆಯಾಗಿದ್ದು  15ಕೋಟಿಗೂ ಅಧಿಕ ಹಣವನ್ನು ಉದ್ಯೋಗ ಖಾತ್ರಿಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಪ್ರತಿ ಗ್ರಾಪಂನಲ್ಲಿ ಜಾಗ ಗುರುತಿಸಿ ‘ಊರಿಗೊಂದು ಕೆರೆ’ ಯೋಜನೆ ರೂಪಿಸಲಾಗುತ್ತಿದೆ. ಸಾಗರ ತಾಲ್ಲೂಕಿನ ಬಹುತೇಕ ಹಳೆ ಕೆರೆಗಳ ಹೂಳೆತ್ತುವ, ಬಂಡು ಕಟ್ಟುವ ಕೆಲಸವನ್ನು ಕಾಮಗಾರಿಗಳು ನರೇಗಾದಿಂದ ನಡೆದಿವೆ.

ನರೇಗಾ ಕಾಯಕ ವೀಕ್ಷಿಸಿದ ಅಧಿಕಾರಿಗಳು

ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ನರೇಗಾದ ಶಿವಮೊಗ್ಗ ಜಿಪಂನ ಸಹಾಯಕ ಯೋಜನಾಧಿಕಾರಿ ಕೆ.ಜಿ. ಶಶಿಧರ, ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕುಗ್ವೆಯಲ್ಲಿ ಸುಮಾರು ಮೂರು ಎಕರೆ ಜಾಗದಲ್ಲಿ ವಿಶಾಲವಾದ ಕೆರೆ ನಿರ್ಮಾಣವಾಗುತ್ತಿದೆ. ಇದು ಊರಿಗೂ ಒಂದು ಆಸ್ತಿ. ಹೊಲಗದ್ದೆಗಳಿಗೆ, ಪ್ರಾಣಿಪಕ್ಷಿಗಳಿಗೆ ನೀರಿನ ಆಸರೆಯಾಗುತ್ತದೆ. ಊರಿನ ಅಭಿವೃದ್ದಿಯ ಜೊತೆಯಲ್ಲಿ ಜನರ ಆರ್ಥಿಕ ಮಟ್ಟವೂ ಹೆಚ್ಚುತ್ತದೆ ಎಂದರು.

ಗ್ರಾಪಂ ಸದಸ್ಯ ನಾರಾಯಣಪ್ಪ, ನಾನು ಕುಗ್ವೆ ಊರಿನವನು. ನರೇಗಾ ಯೋಜನೆಯಲ್ಲಿಯೇ ಕೆಲಸದಲ್ಲಿ ತೊಡಗಿಕೊಂಡು ಜನರ ವಿಶ್ವಾಸದಿಂದಲೇ ಗ್ರಾಪಂ ಸದಸ್ಯನಾಗಿದ್ದೇನೆ. ನಮ್ಮ ಪಂಚಾಯ್ತಿಯ 124ಕ್ಕೂ ಹೆಚ್ಚು ಮಹಿಳೆಯರು ಈ ಐತಿಹಾಸಿಕ ಕೆರೆ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಗಾಂಧಿಯವರ ಹೆಸರೇ ಇಡಬೇಕು ಎಂಬ ಆಲೋಚನೆ ನಮ್ಮ ಗ್ರಾಮಸ್ಥರದ್ದು ಎಂದು ತಿಳಿಸಿದರು.

ಯೋಜನೆಯಲ್ಲಿ ತೊಡಗಿಕೊಂಡಿರುವ ನೇತ್ರಾವತಿ, ಇದು ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಉಪಯುಕ್ತ ಯೋಜನೆಯಾಗಿದ್ದು ನಿಗದಿತ ಸಮಯದಲ್ಲಿ ನಮ್ಮ ಕೆಲಸ ಮುಗಿಸಿ ಬೇರೆ ಕೆಲಸಗಳಲ್ಲಿಯೂ ತೊಡಗಿಕೊಳ್ಳುತ್ತೇವೆ. ಗ್ರಾಮೀಣ ಹೆಣ್ಣುಮಕ್ಕಳಿಗೆ ದುಡಿಮೆಗೆ ವರದಾನವಾಗಿದೆ ಎನ್ನುತ್ತಾರೆ.

ಖಂಡಿಕಾ ಗ್ರಾಪಂ ಅಧ್ಯಕ್ಷೆ ನಿರ್ಮಲ ಗಣಪತಿ, ಕುಗ್ವೆ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣವಾಗುತ್ತಿರುವುದು ನನಗೆ ಅತ್ಯಂತ ಸಂತಸ ತಂದಿದೆ. ನಮ್ಮೂರಿನ ಶ್ರಮಜೀವಿ ಹೆಣ್ಣುಮಕ್ಕಳು ಎಲ್ಲಾ ಒಟ್ಟಾಗಿ ಕೆರೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಬರುವ ದಿನಗಳಲ್ಲಿ ಇದು ಐತಿಹಾಸಿಕ ದಾಖಲೆಯಾಗುತ್ತದೆ. ನಮ್ಮ ಜೀವಿತಾವಧಿಯಲ್ಲಿ ಮನೆ ಕಟ್ಟುತ್ತೇವೆ, ಹೊಸ ವಾಹನ ಖರೀದಿಸುತ್ತೇವೆ. ಆದರೆ ಹೊಸ ಕೆರೆ ನಿರ್ಮಾಣ ಮಾಡುವಲ್ಲಿ ನಾವೂ ದಾಖಲಾಗುತ್ತೇವೆ ಎನ್ನುವುದು ಅವಿಸ್ಮರಣೀಯವಾದುದು ಎನ್ನುತ್ತಾರೆ.

ನರೇಗಾದ ಸಹಾಯಕ ನಿರ್ದೇಶಕ ಬಾಲಸುಬ್ರಹ್ಮಣ್ಯ, ಖಂಡಿಕಾ ಗ್ರಾಪಂ ಅಧ್ಯಕ್ಷೆ ನಿರ್ಮಲ ಗಣಪತಿ, ಉಪಾಧ್ಯಕ್ಷ ಮೋಹನ್ ಸಿ.ಎಸ್., ಸದಸ್ಯರಾದ ಲೋಕೇಶ್ ಡಿ. ಇತರರು ಹಾಜರಿದ್ದರು.

error: Content is protected !!