News Next

ಶಿವಮೊಗ್ಗ: ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರ ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಜನ ಔಷಧಿ ಪರಿಯೋಜನಾ ಅಭಿಯಾನ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದರ ಅಂಗವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಮಾ.7ರ ಇಂದು ಜನ ಔಷಧಿ ದಿವಸ್ ಆಚರಿಸಲಾಗುತ್ತಿದೆ.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಈಶ್ವರಪ್ಪನವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಜಿಲ್ಲಾ ಜನೌಷಧಿ ಕೇಂದ್ರಗಳ ಮಾಲಿಕರ ಸಂಘದ ಅಧ್ಯಕ್ಷರಾದ ಗಿರೀಶ್ ಎಚ್.ಎನ್.ಉಪಸ್ಥಿತರಿರುತ್ತಾರೆ.
ಈ ದಿನ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರಮೋದಿಯವರು ಜನೌಷಧಿ ಫಲಾನುಭವಿಗಳೊಂದಿಗೆ ವೀಡಿಯೋ ಮೂಲಕ ನೇರ ಸಂವಾದ ನಡೆಸಲಿದ್ದಾರೆ. ನಂತರ ಸಚಿವರು ಹಾಗೂ ಸಂಸದರೊಂದಿಗೆ ಸಾರ್ವಜನಿಕರು, ಫಲಾನುಭವಿಗಳು ಸಂವಾದ ನಡೆಸಲಿದ್ದಾರೆ.
ಏನಿದು ಜನೌಷಧಿ ಪರಿಯೋಜನೆ…? ದೇಶದ ಕಡುಬಡವರಿಗೆ ಹಣದ ಕೊರತೆ ಕಾರಣಕ್ಕೆ ಗುಣಮಟ್ಟದ ಔಷಧಗಳು ಗಗನಕುಸುಮವಾಗಬಾರದೆಂಬ ಘನ ಉದ್ದೇಶದಿಂದ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಔಷಧಗಳು ಲಭ್ಯವಾಗುವಂತೆ ರೂಪಿಸಿದ ಪರಿಯೋಜನೆ ಇದಾಗಿದೆ. ಭಾರತದಾದ್ಯಂತ ಸುಮಾರು 6500ಕ್ಕೂ ಹೆಚ್ಚು ಜನೌಷಧಿ ಮಳಿಗೆಗಳಿವೆ. ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 750 ಜನೌಷಧಿ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ, ಸುಮಾರು 11 ಕೋಟಿಗೂ ಹೆಚ್ಚು ಮಂದಿ ನಾಗರಿಕರು ಈ ಜನೌಷಧಿಯ ಪ್ರಯೋಜನ ಪಡೆದು ಸಂತೃಪ್ತರಾಗಿದ್ದಾರೆ.
ಈ ಅಂಶವನ್ನು ಮನಗಂಡ ಪ್ರಧಾನಿ ನರೇಂದ್ರಮೋದಿಯವರು ಪ್ರತೀವರ್ಷ ಮಾ.7ನ್ನು ಜನೌಷಧಿ ದಿನವನ್ನಾಗಿ ಆಚರಣೆ ಮಾಡುವಂತೆ ಕರೆ ನೀಡಿದ್ದು, ಶಿವಮೊಗ್ಗದಲ್ಲಿ ಯಶಸ್ವೀ ಎರಡನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 9:30ಕ್ಕೆ ಹಳೇ ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ನಡೆಯಲಿದ್ದು, ಈ ಮಹತ್ವದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಜಿಲ್ಲಾ ಜನೌಷಧಿ ಕೇಂದ್ರಗಳ ಮಾಲಿಕರ ಸಂಘ ಮನವಿ ಮಾಡಿದೆ.

error: Content is protected !!