ಶಿವಮೊಗ್ಗ, ಡಿಸೆಂಬರ್ 19 : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಲು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಡಿಸೆಂಬರ್ 26ರಿಂದ 28ರವರೆಗೆ ವಿಶೇಷ ಶಿಬಿರ ಆಯೋಜಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಜಿಲ್ಲೆಯ ಎಲ್ಲಾ ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯನ್ನು ಗುರುವಾರ ನಡೆಸಿದರು.

ಆಯುಷ್ಮಾನ್ ಯೋಜನೆಯಡಿ ಪ್ರಸ್ತುತ 4ಲಕ್ಷ ಜನರನ್ನು ನೋಂದಾಯಿಸಿ ಕಾರ್ಡ್ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14ಲಕ್ಷ ಫಲಾನುಭವಿಗಳನ್ನು ಈ ಯೋಜನೆಯಡಿ ನೋಂದಾಯಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ 116ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್ ನೀಡಲಾಗುತ್ತಿದ್ದು, ಇನ್ನೂ 21ಕೇಂದ್ರಗಳು ಎರಡು ದಿನಗಳಲ್ಲಿ ಸಿದ್ಧಗೊಳ್ಳಲಿವೆ. ಫಲಾನುಭವಿಗಳಿಂದ ನೋಂದಣಿಗೆ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯಬೇಕು. ಕಾರ್ಡ್ ನೀಡಲು ಸತಾಯಿಸುತ್ತಿರುವ ಬಗ್ಗೆ ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿರುವ ಎಲ್ಲಾ 106 ಪ್ರಾಥಮಿಕ ಆರೋಗ್ಯ ಕೇಂದ್ರ, 12 ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ  ಡಿಸೆಂಬರ್ 26, 27ಮತ್ತು 28ರಂದು ವಿಶೇಷ ನೋಂದಣಿ ಅಭಿಯಾನ ಆಯೋಜಿಸಲಾಗುವುದು. ಮೂರು ದಿನಗಳಲ್ಲಿ ಪ್ರತಿ ಕೇಂದ್ರಗಳಲ್ಲಿ ತಲಾ 500 ಮಂದಿಗೆ ಆರೋಗ್ಯ ಕಾರ್ಡ್ ವಿತರಿಸುವ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಮೂರು ಮಂದಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗುವುದು. ಬೆಳಿಗ್ಗೆ 8ರಿಂದ ರಾತ್ರಿ 8ಗಂಟೆವರೆಗೆ ನೋಂದಣಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಜನರು ನೋಂದಣಿಗೆ ಆಗಮಿಸುವ ಮೊದಲೇ ಅವರು ಬರಬೇಕಾದ ಸಮಯವನ್ನು ನಿಗದಿಪಡಿಸಿ ಮಾಹಿತಿ ನೀಡಬೇಕು. ತಾಂತ್ರಿಕ ತೊಂದರೆಗಳು ಎದುರಾಗದಂತೆ ಕ್ರಮ ವಹಿಸಲಾಗುವುದು. ಸ್ಥಳೀಯ ಪಂಚಾಯತ್‍ನಿಂದ ಹೆಚ್ಚುವರಿಯಾಗಿ ಸೇವಾ ಕೇಂದ್ರಗಳಿಗೆ ಡಾಟಾಎಂಟ್ರಿ ಆಪರೇಟರ್‍ಗಳನ್ನು ನೀಡಲಾಗುವುದು. ಎಲ್ಲಾ ಸೇವಾ ಕೇಂದ್ರಗಳ ಸಿಬ್ಬಂದಿ ಆಂದೋಲನದ ರೀತಿಯಲ್ಲಿ ನೋಂದಣಿ ಕಾರ್ಯವನ್ನು ಮಾಡಬೇಕು. ಮೂರು ದಿನಗಳಲ್ಲಿ 75ಸಾವಿರ ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಯೋಜನೆಯಡಿ 24,048 ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದು, 3.88ಕೋಟಿ ರೂ. ಪಾವತಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.

error: Content is protected !!