ಶಿವಮೊಗ್ಗ ಫೆಬ್ರವರಿ 24: ಸೊರಬ ತಾಲೂಕು ಆನವಟ್ಟಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಅವರು ಇಂದು ಸುಮಾರು 600ಕೋಟಿ ವೆಚ್ಚದ ಸೊರಬ ತಾಲೂಕಿನ ಮೂಡಿ-ಮೂಗೂರು ಏತ ನೀರಾವರಿ ಹಾಗೂ ವಿವಿಧ ಕಾಮಗಾರಿಗಳಿಗೆ  ಚಾಲನೆ ನೀಡಿ ಮಾತನಾಡುತ್ತಿದ್ದರು. ಇದೇ ಮಾದರಿಯಲ್ಲಿ ಬಹುತೇಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.ಅಧಿಕಾರ ಸ್ವೀಕರಿಸಿದ ಅತ್ಯಲ್ಪ ಅವಧಿಯಲ್ಲಿ ನಿರೀಕ್ಷೆಗೆ ಮೀರಿದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈಗಾಗಲೇ ಮೂಗೂರು ಮತ್ತು ಮೂಡಿ ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳು ಪೂರ್ಣಗೊಳ್ಳಲು ಎರಡು ವರ್ಷಗಳ ಕಾಲಾವಧಿ ಅಗತ್ಯವಿದ್ದರೂ ಅವುಗಳನ್ನು ಯಾವುದೆ ಅಡ್ಡಿ ಆತಂಕಗಳಿಲ್ಲದೆ ಸೀಮಿತ ಒಂದು ವರ್ಷದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯವಿರುವ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದ ಅವರು ಮೂಡಿ ಯೋಜನೆಯಡಿ 31ಕೆರೆ ಹಾಗೂ ಮೂಗೂರು ಯೋಜನೆಯಡಿ 66ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದವರು ನುಡಿದರು.
ನಡೆಯುವ ಎಲ್ಲಾ ಕಾಮಗಾರಿಗಳು ಗುಣಮಟ್ಟದ್ದಾಗಿರುವಂತೆ ಹಾಗೂ ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತೆ ಅಧಿಕಾರಿಗಳು ಗಮನಹರಿಸಬೇಕು. ಪೈಪ್ ಲೈನ್ ಕಾಮಗಾರಿಯು ಶಾಶ್ವತವಾಗಿರುವಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದರು.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಶಿಕಾರಿಪುರದಂತೆಯೆ ಸೊರಬ ತಾಲೂಕನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ ತಾಲೂಕಿನ ಸವಾರ್ಂಗೀಣ ವಿಕಾಸಕ್ಕೆ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದರು. 
error: Content is protected !!