ಶಿವಮೊಗ್ಗ, ಸೆ.28 : ನ್ಯಾನೋ ತಂತ್ರಜ್ಞಾನದಂತಹ ಆಧುನಿಕ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಲು ಸಾಧ್ಯವಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು

.

ಅವರು ಬುಧವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ನ್ಯಾನೊತಂತ್ರಜ್ಞಾನ, ಕೃಷಿಯಲ್ಲಿ ಡ್ರೋನ್‌ಗಳ ಬಳಕೆ, ನೀರಾವರಿಯಲ್ಲಿ ಯಾಂತ್ರೀಕರಣ, ಕೃಷಿ ಯಾಂತ್ರೀಕರಣ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸಂಪನ್ಮೂಲ ಬಳಕೆ ದಕ್ಷತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು, ರೈತ ಸ್ನೇಹಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ಹೊಸ ಸ್ಟಾರ್ಟ್ಅಪ್‌ಗಳನ್ನು ಉತ್ತೇಜಿಸುವ ಮತ್ತು ಜನಪ್ರಿಯಗೊಳಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಳದಿ ಶಿವಪ್ಪ ನಾಯ್ಕ ಅವರನ್ನು ಸಮರ್ಥ ಆಡಳಿತಗಾರ ಮತ್ತು ಸೈನಿಕ ಎಂದು ಸ್ಮರಿಸುತ್ತೇವೆ. ಕೃಷಿ ಕ್ಷೇತ್ರದಲ್ಲೂ ಶಿವಪ್ಪ ನಾಯ್ಕ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನೆನಪಿಗಾಗಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯವು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಿಗದಿತ ಗುರಿಗಳನ್ನು ಸಾಧಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಸ್ಥಳೀಯ ಅಗತ್ಯಗಳನ್ನು ಪರಿಗಣಿಸಿ, ವಿಶ್ವವಿದ್ಯಾನಿಲಯವು ಕೃಷಿ ಮತ್ತು ತೋಟಗಾರಿಕೆಗೆ ಸಂಬAಧಿಸಿದ ಹೊಸ ತಂತ್ರಜ್ಞಾನಗಳು ಮತ್ತು ತಂತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

ಪ್ರತಿ ಹನಿಗೆ ಹೆಚ್ಚಿನ ಬೆಳೆ ಪಡೆಯಲು, ಕೃಷಿಯಲ್ಲಿನ ಇತ್ತೀಚಿನ ತಂತ್ರಜ್ಞಾನ, ನೈಸರ್ಗಿಕ ಕೃಷಿ, ದೇಶೀಯ ಬೀಜಗಳ ಸಂರಕ್ಷಣೆ ಇತ್ಯಾದಿಗಳ ಕುರಿತು ಹೆಚ್ಚು ವಿವರವಾದ ಸಂಶೋಧನೆ ಮಾಡಬೇಕಾಗಿದೆ. ಇಸ್ರೇಲ್‌ನ ಹವಾಮಾನ ಮತ್ತು ಭೌಗೋಳಿಕತೆಯು ನೈಸರ್ಗಿಕವಾಗಿ ಕೃಷಿಗೆ ಸೂಕ್ತವಾಗಿರದಿದ್ದರೂ, ಕೃಷಿಯಲ್ಲಿ ಇಸ್ರೇಲ್ ವಿಕ್ರಮ ಸಾಧಿಸಿದೆ. ಇದನ್ನು ನಾವು ಮಾದರಿಯಾಗಿಸಬೇಕು. ಕೃಷಿ ವಲಯದಲ್ಲಿ ಸ್ವಾವಲಂಬಿಯಾಗಲು ಮತ್ತು ಜಾಗತಿಕ ಶಕ್ತಿಯಾಗಲು ಭಾರತವು ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆಯ ಆಧುನೀಕರಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ಡಾ.ಆರ್.ಕೆ. ಎಸ್.ಎಸ್. ಶ್ರೀ ಪರೋಡಾ, ಬಹು ಬೆಳೆ ಕೃಷಿ ಪದ್ಧತಿ ಅಳವಡಿಸಿ: ರೈತರು ಆರ್ಥಿಕವಾಗಿ ಸಬಲರಾಗಲು ಬಹು ಬೆಳೆ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಹೆಚ್ಚಿನ ಲಾಭ ಪಡೆಯುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ತಮ್ಮ ಆದಾಯವನ್ನು ದ್ವಿಗುಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಚಿನ್ನದ ಪದಕ ಮತ್ತು ಪದವಿ ಪ್ರದಾನ: ಸಮಾರಂಭದಲ್ಲಿ ರಾಜ್ಯಪಾಲರು 355 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 79 ಎಂ.ಎಸ್ಸಿ ಪದವಿ, 10 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 7ಬಿಸ್ಸಿ ಅಗ್ರಿ ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕ, 13 ಎಂ.ಎಸ್ಸಿ ಅಗ್ರಿ ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕ ಮತ್ತು 4 ಪಿಎಚ್‌ಡಿ ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕ ಸೇರಿ ಒಟ್ಟು 24 ವಿದ್ಯಾರ್ಥಿಗಳಿಗೆ 33 ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ಕುಲಪತಿ ಡಾ. ಆರ್.ಸಿ.ಜಗದೀಶ್ ಅವರು ಸ್ವಾಗತಿಸಿ, ವಿಶ್ವವಿದ್ಯಾಲಯದ ವರದಿಯನ್ನು ಮಂಡಿಸಿದರು. ಕುಲಸಚಿವ ಡಾ.ಆರ್.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!