ವಾತಾವರಣದಲ್ಲಿನ ತಾಪಮಾನವು ದಿನ ಕಳೆದಂತೆ ಏರುಗತಿಯಲ್ಲಿ ಸಾಗುತ್ತಿದ್ದು ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ತಮ್ಮ ದೈನಂದಿನ ಸಮಯದಲ್ಲಿ ಕೆಲ ಸಮಯ ಮೀಸಲಿಟ್ಟು ಗಿಡ ನೆಡುವ ಕೆಲಸ ಮಾಡಬೇಕು ಎಂದು ಪರಿಸರ(ರಿ.) ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಹೇಳಿದರು.
ವಿಶ್ವ ಅರಣ್ಯ ದಿನದ ಮತ್ತು ವಿಶ್ವ ಜಲ ದಿನದ ಅಂಗವಾಗಿ ಶಿವಮೊಗ್ಗದ ಪರಿಸರ(ರಿ.) ಸಂಸ್ಥೆಯ ವತಿಯಿಂದ ನಗರದ ಎಲ್.ಬಿ.ಎಸ್ ನಗರದ ಸ್ವಾಮಿ ವಿವೇಕಾನಂದ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಗಂಧದ ಗಿಡಗಳನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಸಂಘ ಸಂಸ್ಥೆಗಳು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಕಟಿಬದ್ಧರಾದರೆ ಪರಿಸರ ಸಂರಕ್ಷಣೆ ಸಾಧ್ಯವಾಗುವುದಿಲ್ಲ, ಬದಲಾಗಿ ಸಾರ್ವಜನಿಕರು ಈ ಮಹತ್ಕಾರ್ಯದಲ್ಲಿ ಪಾಲುದಾರರಾಗಬೇಕು, ವಾರದಲ್ಲಿ ಒಮ್ಮೆಯಾದರೂ ತಮ್ಮ ಸ್ನೇಹಿತರೋಡಗೂಡಿ ಉಪಯುಕ್ತ ಗಿಡಗಳನ್ನು ನೆಡಬೇಕು ಎಂದು ಕರೆ ನೀಡಿದರು.
ಕೇವಲ ಎರಡು ವರ್ಷಗಳ ಹಿಂದೆ Covid-19 ಸಂದರ್ಭದಲ್ಲಿ Oxygen ಕೊರತೆಯಿಂದ ಸಾವಿರಾರು ಜನ ಪ್ರಾಣ ತೆತ್ತಿರುವುದನ್ನು ನಾವೆಲ್ಲರೂ ಮರೆಯಬಾರದು. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ದಿನ ನಿತ್ಯದ ಕರ್ತವ್ಯ ಆಗಬೇಕು, ಇಲ್ಲವಾದರೆ ಮುಂದಿನ ಪೀಳಿಗೆಗೆ ಅಗಾಧವಾದ ದುಷ್ಪರಿಣಾಮ ಎದುರಾಗುತ್ತದೆ ಎಂದು ಎಚ್ಚರಿಸಿದರು.
ಪರಿಸರ ತಜ್ಞರಾದ ಡಾ. ನಾಗರಾಜ್ ಪರಿಸರ ಅವರು ಮಾತನಾಡಿ, ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿಗಾಗಿ ಸ್ವಾಮಿ ವಿವೇಕಾನಂದ ಪಾರ್ಕ್ ನಲ್ಲಿ ಗಂಧದ ಗಿಡಗಳ ನೆಡುತೋಪು ಮಾಡುವ ಉದ್ದೇಶದಿಂದ , ಈ ಪಾರ್ಕ್ ನ ಒಂದು ಭಾಗ ಇದಕ್ಕೆ ಮೀಸಲಿಡಲಾಗಿದೆ ಎಂದರು.
ದೇಶದ ಸರಾಸರಿ ಅರಣ್ಯ ಪ್ರಮಾಣ ಶೇಕಡಾ 33% ಇರಬೇಕು, ಆದರೆ ಕೇವಲ ಶೇಕಡಾ 15% ರಿಂದ 20% ಅರಣ್ಯ ಪ್ರದೇಶ ಇರುವುದು ದುರದೃಷ್ಟಕರ, ಹಾಗಾಗಿ ಪ್ರತಿಯೊಬ್ಬರೂ ವನ್ಯಜೀವಿಗಳಿಗೆ ಹಾಗೂ ಮನುಷ್ಯರಿಗೆ ಉಪಯುಕ್ತವಾಗುವಂತ ಗಿಡಗಳನ್ನು ನೆಟ್ಟು ಇದರ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಇತ್ತಿಚಿನ ದಿನಗಳಲ್ಲಿ ಕಾಡಿಗೆ ಬೆಂಕಿ ಹಾಕುವ ವ್ಯಾಗ್ರ ಮನಸ್ಥಿತಿ ನಾವು ಕಾಣುತ್ತಿದ್ದೇವೇ, ಇದರ ಹಿಂದಿನ ಉದ್ದೇಶ ಬಹಳ ಕಠೋರವಾಗಿದ್ದು ಇದನ್ನು ತಡೆಯುವ ಕೆಲಸ ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಿದೆ ಜೊತೆಗೆ ಅರಣ್ಯ ಇಲಾಖೆಯೊಂದಿಗೆ ಸೂಕ್ತ ಸಹಕಾರ ನೀಡಿ ನಮ್ಮ ಅಪಾರ ಸಂಪತ್ತನ್ನು ರಕ್ಷಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ಸಂಸ್ಥೆಯ ಅಧ್ಯಕ್ಷರಾದ ಸುರೇಶಪ್ಪ, ನಿರ್ದೇಶಕರಾದ ಜಯಂತ್ ಬಾಬು, ಅರುಣ್, ಪೂಜಾ ನಾಗರಾಜ್ ಹಾಗೂ ಸಾರ್ವಜನಿಕರಾದ ತೇಜಸ್ವಿ, ಶ್ರೀನಿವಾಸ್, ಶ್ರೀಮತಿ ವೀಣಾ, ಹೇಮಾಂಗ್ ಪರಿಸರ ಮತ್ತು ಇತರ ಪುಟಾಣಿಗಳು ಪಾಲ್ಗೊಂಡಿದ್ದರು.