ಶಿವಮೊಗ್ಗ: ಅತಿಯಾದ ಅಭಿವೃದ್ಧಿ ಯೋಜನೆ ಕಾಮಗಾರಿಗಳಿಂದ ಪ್ರಾಕೃತಿಕ ಸೊಬಗು ಕಣ್ಮರೆಯಾಗುತ್ತಿದ್ದು, ಇಂದಿನ ಯುಗದ ಮಕ್ಕಳಿಗೆ ನೈಸರ್ಗಿಕ ಪ್ರಕೃತಿಯ ಪರಿಚಯವೇ ಮಾಡಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ಇಕೋ ವಾಚ್ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಸುರೇಶ್ ಹೆಬ್ಳಿಕರ್ ಹೇಳಿದರು.
ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರೋಟರಿ ವಲಯ 11ರ ಎಲ್ಲ ಕ್ಲಬ್ಗಳ ಸಹಯೋಗದಲ್ಲಿ ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ವಸುಂಧರೆ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾನಗರ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಾಗೂ ಅನೇಕ ಕಾಮಗಾರಿಗಳ ಅನುಷ್ಠಾನದ ಮುಖಾಂತರ ಪರಿಸರ ನಾಶ ಕೂಡ ಅಧಿಕವಾಗಿದೆ. ಪರಿಸರ ಮಾಲಿನ್ಯ, ಕೆರಗಳ ನಾಶ, ಅರಣ್ಯ ನಾಶ ಸೇರಿದಂತೆ ಭೂಮಿ ಮೇಲೆ ಅಪಾರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಲೋಚನೆ ನಡೆಸುವ ಅವಶ್ಯಕತೆ ಇದೆ. ಪರಿಸರ ಸಂರಕ್ಷಣೆಯ ಪ್ರತಿಯೊಂದು ಅನುಷ್ಠಾನವನ್ನು ಸ್ಥಳೀಯ ಮಟ್ಟದಲ್ಲಿ ಅನುಷ್ಠಾನ ಮಾಡುವ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕಿದೆ. ಪ್ರಕೃತಿ ಸಂರಕ್ಷಣೆಯ ಮಹತ್ವ ಅರಿತುಕೊಳ್ಳಬೇಕಿದೆ ಎಂದರು.
ಮುನುಷ್ಯನ ಪ್ರಕೃತಿ ವಿರೋಧಿ ಚಟುವಟಿಕೆಗಳಿಂದ ಹವಮಾನ ಬದಲಾವಣೆಯಲ್ಲಿ ವೈಪರೀತ್ಯ ಕಾಣುತ್ತಿದ್ದೇವೆ. ಪರಿಸರ ನಾಶ ನಮಗೆ ಒಮ್ಮೆಲೇ ಕಾಣಿಸುವುದಿಲ್ಲ. ಮನುಷ್ಯರು ನಡೆಸುತ್ತಿರುವ ಆಧುನಿಕ ಜೀವನಶೈಲಿಯಿಂದ ಸೂಕ್ಷ್ಮ ರೀತಿಯಲ್ಲಿ ಪರಿಸರ ನಾಶ ಆಗುತ್ತಿದೆ. ಮುಂದಿನ ವರ್ಷಗಳಲ್ಲಿ ಎದುರಾಗಬಹುದಾದ ದೊಡ್ಡ ಸಮಸ್ಯೆಗೆ ಎಲ್ಲರೂ ಕಾರಣ ಆಗಿರುತ್ತೇವೆ ಎಂದು ಹೇಳಿದರು.
ಜಲ ಸಾಕ್ಷರತೆಗೆ ಚಿಂತನ ಬಿಂದುಗಳು ಪುಸ್ತಕ ಬಿಡುಗಡೆ ಮಾಡಿ ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ನೀರು, ಗಾಳಿ, ಆಹಾರ ಸೇರಿದಂತೆ ಪರಿಸರ ಕಲುಷಿತಗೊಳ್ಳುತ್ತಿದೆ. ನಾವೆಲ್ಲರೂ ಕಲುಷಿತ ಆಹಾರ ಪದಾರ್ಥವನ್ನೇ ಸೇವನೆ ಮಾಡುತ್ತಿದ್ದೇವೆ. ಒಂದು ಅಧ್ಯಯನದ ಪ್ರಕಾರ ಒಬ್ಬ ಮನುಷ್ಯ ಎಟಿಎಂ ಕಾರ್ಡ್ನಷ್ಟು ಪ್ಲಾಸ್ಟಿಕ್ಅನ್ನು ವರ್ಷಕ್ಕೆ ಸೇವನೆ ಮಾಡುತ್ತಿದ್ದಾನೆ ಎಂದು ಹೇಳಿದರು.
ರಾಸಾಯನಿಕದಿಂದ ಕಲುಷಿತ ಆಗುತ್ತಿರುವ ಪರಿಸರದಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಮಕ್ಕಳ ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ಸೃಜನಾಶೀಲ ಚಿಂತನಾ ಕ್ರಮ ಕಡಿಮೆ ಆಗುತ್ತಿದೆ. ಮಹಿಳೆಯರಿಗೆ ಅನೇಕ ರೀತಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ತಿಳಿಸಿದರು.
ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ ಮಹತ್ವ ಅರಿತುಕೊಳ್ಳದೇ ಮನುಷ್ಯರು ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿನ ಸೌಂದರ್ಯ ಅನುಭವಿಸುತ್ತಿರುವ ಜನರು ಅಲ್ಲಿನ ಪರಿಸರವನ್ನು ಮಾಲಿನ್ಯಗೊಳಿಸಿ ಹೋಗುತ್ತಾರೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಮನೋಭಾವ ಹೊಂದಿದ್ದಾರೆ ಎಂದು ಹೇಳಿದರು.
ಮನುಷ್ಯರು ನಮಗೆ ಇರುವುದು ಒಂದೇ ಭೂಮಿ ಎನ್ನುವುದನ್ನು ಅರಿತುಕೊಳ್ಳಬೇಕು. ಪ್ಲಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಆಲೋಚನೆ ನಡೆಸಬೇಕು. ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು.
ಪ್ರಿಸರ್ವ್ ಪ್ಲಾನೆಟ್ ಅರ್ಥ್ ಅಧ್ಯಕ್ಷ ವಸಂತ್ ಹೋಬಳಿದಾರ್ ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಆಶಯದಲ್ಲಿ ವಿಶೇಷ ಸಮಾವೇಶ ಹಮ್ಮಿಕೊಂಡಿದ್ದು, ಪ್ರಕೃತಿ ವಿರೋಧಿ ಕೃತ್ಯಗಳನ್ನು ಅರಿತುಕೊಳ್ಳಲು, ಅಂತರ್ಜಲ ಜಾಗೃತಿ, ಜಾಗತಿಕ ತಾಪಮಾನ ಏರಿಕೆ ಪರಿಣಾಮದಿಂದ ಆಗುತ್ತಿರುವ ಸಮಸ್ಯೆಗಳು ಮತ್ತು ಅದರ ಪರಿಹಾರದ ಬಗ್ಗೆ ಗಮನ ವಹಿಸಬೇಕಿದೆ ಎಂದು ಹೇಳಿದರು.
ಜಲ ಸಾಕ್ಷರತೆಗೆ ಚಿಂತನ ಬಿಂದುಗಳು ವಿಷಯ ಕುರಿತು ಡಾ. ನಾರಾಯಣ ಶೆಣೈ, ಜಾಗತಿಕ ತಾಪಮಾನ ಏರಿಕೆ ಪರಿಣಾಮ ಮತ್ತು ಪರಿಹಾರ ವಿಷಯ ಕುರಿತು ಅನಿಲ್ ಕುಮಾರ್ ನಾಡಿಗೇರ್ ಹಾಗೂ ವನ್ಯಜೀವಿ ಆವಾಸಸ್ಥಾನ ಮತ್ತು ಅದರ ಮಹತ್ವ ಕುರಿತು ಅಖಿಲೇಶ್ ಚಿಪ್ಪಳಿ ಮಾತನಾಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಸುನೀತಾ ಶ್ರೀಧರ, ಬಿ.ಸಿ.ಗೀತಾ, ದೇವ್ ಆನಂದ್, ಜಿ.ವಿಜಯಕುಮಾರ್, ಸುಮತಿ ಕುಮಾರಸ್ವಾಮಿ, ಸತೀಶ್ ಚಂದ್ರ, ಚಂದ್ರು, ಆದಿತ್ಯ, ಮನೋಜ್ಕುಮಾರ್, ಪುಟ್ಟಪ್ಪ, ಪ್ರಮೀಳಾ, ಮಂಜು ಉಪಸ್ಥಿತರಿದ್ದರು.