ಶಿವಮೊಗ್ಗ, ಮಾರ್ಚ್ 31 : ಸಕ್ಷಮ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದೆ ಸ್ಥಿರ ಅಥವಾ ಚಲಿಸುತ್ತಿರುವ ವಾಹನಗಳಿಗೆ ಅಳವಡಿಸಿರುವ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸಬಾರದು ಹಾಗೂ ಪಟಾಕಿಯನ್ನು ಸಿಡಿಸಬಾರದು. ಇದರ ಉಲ್ಲಂಘನೆ ಅಪರಾಧವಾಗಿದ್ದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.
ಸಭಾಂಗಣ, ಕಾನ್ಫರೆನ್ಸ್ ಕೊಠಡಿ, ಕಮ್ಯುನಿಟಿ ಸಭಾಂಗಣ ಅಥವಾ ಸಾರ್ವಜನಿಕ ತುರ್ತು ಹೊರತುಪಡಿಸಿ ರಾತ್ರಿ ವೇಳೆ ಧ್ವನಿವರ್ಧಕಗಳು, ಪಟಾಕಿಗಳು, ಶಬ್ದ ತರುವ ಸಾಧನಗಳು ಅಥವಾ ಸಂಗೀತ ಸಾಧನಗಳನ್ನು ಬಳಸುವಂತಿಲ್ಲ.
ಮೌನ ವಲಯ(ಸೈಲೆನ್ಸ್ ಝೋನ್) ಅಥವಾ ವಸತಿ ಪ್ರದೇಶಗಳಲ್ಲಿ ರಾತ್ರಿ ವೇಳೆ ವಾಹನಗಳ ಹಾರ್ನ್ ಶಬ್ದ ಮಾಡುವುದು ಅಥವಾ ಪಟಾಕಿ ಸಿಡಿಸುವುದು ಅಥವಾ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
ಮತದಾನ ಮುಕ್ತಾಯವಾಗುವ 48 ಗಂಟೆಗಳ ಹಿಂದೆ ಮತ್ತು ಮತ ಎಣಿಕೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳು/ಪೊಲೀಸ್ ಉಪಾಧೀಕ್ಷಕರ ಅನುಮತಿ ಇಲ್ಲದೆ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುಂತಿಲ್ಲ.
ಇದರ ಉಲ್ಲಂಘನೆ ಅಪರಾಧವಾಗಿದ್ದು, ಇದರಿಂದಾಗಿ ಯಾವುದೇ ರೀತಿಯ ಹಾನಿ, ತೊಂದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಕಾನೂನಿನ ರೀತ್ಯಾ ಕ್ರಮ ಜರುಗಿಸಲಾಗುವುದು. ಹಾಗೂ ಈ ಆದೇಶದ ಉಲ್ಲಂಘನೆಯಿಂದ ಯಾವುದೇ ವ್ಯಕ್ತಿ ಅಥವಾ ಮಾನವ ಜೀವನ, ಆರೋಗ್ಯ ಮತ್ತು ಸುರಕ್ಷತೆಗೆ ಹಾನಿ, ತೊಂದರೆ, ಅಡ್ಡಿ, ಗಾಯ ಉಂಟಾದಲ್ಲಿ ಅಥವಾ ಗಲಭೆ, ಗಲಾಟೆ ಉಂಟಾದಲ್ಲಿ ಐಪಿಸಿ ಸೆಕ್ಷನ್ 188 ರನ್ವಯ ಕ್ರಮ ಕೈಗೊಳ್ಳಲಾಗುವುದು.
ಈ ಆದೇಶವು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಇಡೀ ಜಿಲ್ಲೆಗೆ ಅನ್ವಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ.