ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರಮಾಣ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಥಮಿಕವಾಗಿ 418 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ ಎಂದು ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೀಡಾಗಿರುವ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಪ್ರದೇಶಗಳಿಗೆ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಅರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾನಿಗೀಡಾದ ಕೃಷಿ ಭೂಮಿ, ಮನೆಗಳು, ಪ್ರಾಣ ಹಾನಿ, ಜಾನುವಾರು ಹಾನಿ ಸೇರಿದಂತೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಸರಕಾರದ ಮಾರ್ಗಸೂಚಿ ಹೊರತುಪಡಿಸಿ ಹೆಚ್ಚುವರಿ ಪರಿಹಾರ ಒದಗಿಸುವ ಕುರಿತು ಪ್ರಯತ್ನಿಸಲಾಗುವುದು ಎಂದರು.

ಅತಿವೃಷ್ಟಿ ನಷ್ಟ ಪರಿಹಾರ ಸಮೀಕ್ಷೆ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವರದಿ ಕೈ ಸೇರಿದ ಬಳಿಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚುವ ಅರಗ ಜ್ಞಾನೇಂದ್ರ ತಿಳಿಸಿದರು.

ಸಚಿವರು ಗುಡ್ಡ ಕುಸಿತದಿಂದ ಹಾನಿಗೀಡಾದ ಕೂಡಿಗೆ ಮಜಿರೆಯ ಹೆಗ್ಗಾರು ಬೆಟ್ಟ, ಭಾರತಿಪುರ ಬಳಿಯ ಹೆದ್ದಾರಿ ಕುಸಿತ, ಎಡೆಹಳ್ಳಿ ಕೆರೆ ಬಳಿಯ ಗುಡ್ಡ ಕುಸಿತ ಸ್ಥಳ, ಯೋಗಿ ನರಸೀಪುರ ಬಳಿಯ ಹುಲಿಬೆಟ್ಟ ಗುಡ್ಡ ಕುಸಿತ ಹಾಗೂ ಗೇರುವಳ್ಳಿ ಬಳಿ ರಸ್ತೆ ಕುಸಿದ ಸ್ಥಳ ಪರಿಶೀಲನೆ ನಡೆಸಿದರು.

error: Content is protected !!