ಅಡಿಕೆ ಬೆಳೆಯಲ್ಲಿ ಹಿಂಗಾರು ಒಣಗುವ ರೋಗ ಮತ್ತು ಹಿಂಗಾರ ತಿನ್ನುವ ಹುಳುವಿನ ಭಾದೆಯು ಜನವರಿಯಿಂದ ಪ್ರಾರಂಭವಾಗಿ ಏಪ್ರಿಲ್ ತಿಂಗಳವರೆಗೆ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಇವುಗಳ ಸಮಸ್ಯೆ ಹೆಚ್ಚಾಗುತ್ತಿದ್ದು ಇದರ ನಿರ್ವಾಹಣಾ ಕ್ರಮಗಳು ಅನಿವಾರ್ಯವಾಗಿದೆ. ಹಿಂಗಾರ ತಿನ್ನುವ ಹುಳುಗಳು ಹಿಂಗಾರದ ಒಳಹೊಕ್ಕು ಬಲೆಗಳನ್ನು ನೇಯ್ದುಕೊಂಡು ಗಂಡು ಮತ್ತು ಹೆಣ್ಣು ಹೂಗಳನ್ನು ತಿನ್ನುತ್ತವೆ. ಹೂ ಅರಳುವ ಮೊದಲೇ ಅವುಗಳನ್ನು ತಿನ್ನುವುದರಿಂದ ಹೊಂಬಾಳೆ ಮೇಲೆ ಒತ್ತಡ ಬರದೆ ಹಿಂಗಾರ ಬಿಚ್ಚಿಕೊಳ್ಳುವುದಿಲ್ಲ. ಹಿಂಗಾರದ ಎಸಳುಗಳನ್ನು ಸೇರಿಸಿಕೊಂಡು ಬಲೆ ನೇಯ್ದು, ಹೂಗಳನ್ನು ತಿಂದು ಹಿಕ್ಕಿ ಮತ್ತು ಮೂತ್ರವನ್ನು ಅಲ್ಲಿಯೇ ವಿಸರ್ಜಿಸುವುದರಿಂದ ಹಿಂಗಾರ ಕೊಳೆಯುವುದಲ್ಲದೇ ಹುಳು ಸುರಂಗ ಮಾಡಿದ ಜಾಗಗಳಿಂದ ಅಂಟುದ್ರವ ಹೊರಗೆ ಬರುತ್ತದೆ. ಹಿಂಗಾರು ಒಣಗುವ ರೋಗಕ್ಕೆ ಹಾನಿಗೀಡಾದ ಹಿಂಗಾರದಲ್ಲಿ ಎಸಳುಗಳು ತುದಿಯಿಂದ ಒಣಗಿ ಹಳದಿ ಬಣ್ಣಕ್ಕೆ ತಿರುಗಿ ಒಣಗುವುದು. ನಂತರ ರೋಗ ಇಡೀ ಹಿಂಗಾರಕ್ಕೆ ಹರಡಿ ಅಂತಹ ಹಿಂಗಾರುಗಳು ಸಾಯುತ್ತವೆ. ರೋಗ ಪೀಡಿತ ಹಿಂಗಾರಗಳಲ್ಲಿ ಪರಾಗಸ್ಪರ್ಶಕ್ರಿಯೆ ಕಡಿಮೆಯಾಗುವುದರಿಂದ ಹೆಣ್ಣು ಹೂಗಳು ಮತ್ತು ಎಳೆಕಾಯಿಗಳು ಉದುರುತ್ತವೆ.
ಕೀಟ ಮತ್ತುರೋಗ ನಿರ್ವಹಣಾ ಕ್ರಮಗಳು:
ರೋಗ ಮತ್ತು ಕೀಟಕ್ಕೆ ತುತ್ತಾದ ಹಿಂಗಾರಗಳನ್ನು ಗುರುತಿಸಿ ತೆಗೆಯಬೇಕು. ಮ್ಯಾಂಕೋಜೆಬ್ 2.5 ಗ್ರಾಂ (ಡೈಥೇನ್ಒ-45 ಅಥವಾ ಇಂಡೋಫಿಲ್ಒ-45) ಶಿಲೀಂಧ್ರನಾಶಕ ಮತ್ತು ಕ್ಲೋರೋಫೈರಿಫಾಸ್ 20 ಇ.ಸಿ. 2 ಮಿ.ಲೀ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಎರಡನ್ನೂ ಒಟ್ಟಿಗೆ ಮಿಶ್ರಣ ಮಾಡಿ ದ್ರಾವಣವನ್ನು ಸಿಂಪಡಿಸಬೇಕು.