ಅಡಿಕೆ ಸಸಿ ಮಡಿಯಲ್ಲಿ ಹಾಗೂ ಪಾಲಿಥೀನ್ ಚೀಲಗಳಿಗೆ ಸಸಿಗಳನ್ನು ವರ್ಗಾವಣೆ ಮಾಡಿ ನಾಟಿಗೆ ಬಳಸುವವರೆಗೂ ಅನೇಕ ರೋಗಗಳು ಕಾಡುತ್ತವೆ. ಇವುಗಳನ್ನು ಗುರುತಿಸಿ ಸೂಕ್ತಸಮಯದಲ್ಲಿ ಚಿಕಿತ್ಸೆಗೊಳಪಡಿಸಿದರೆ ಆರೋಗ್ಯವಂತ ಸಸಿಗಳು ನಾಟಿಗೆ ದೊರಕುತ್ತವೆ. ಇಲ್ಲವಾದಲ್ಲಿ ರೋಗದ ಸೋಂಕು ಮುಖ್ಯ ಜಮೀನಿನಲ್ಲಿ ನಾಟಿ ಮಾಡಿದ ಮೇಲೂ ನಿರಂತರವಾಗಿ ಬಾಧಿಸಿ ಹಾನಿಯನ್ನುಂಟು ಮಾಡುತ್ತದೆ. ಒಂದರಿಂದ ಎರಡೂವರೆ ವರ್ಷ ಪ್ರಾಯದ ಗಿಡಗಳನ್ನು ಅನೇಕ ರೋಗಗಳು ಬಾಧಿಸುತ್ತವೆ. ಅವುಗಳನ್ನು ಗುರುತಿಸುವ ಬಗ್ಗೆ ಮತ್ತು ನಿರ್ವಹಣಾ ಕ್ರಮಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಹಳದಿ ಎಲೆ ಚುಕ್ಕೆ ರೋಗ : ಸಾಮಾನ್ಯವಾಗಿ ಎಳೆ ವಯಸ್ಸಿಗೆ ಅಡಿಕೆ ಗಿಡಗಳಿಗೆ ನೇರವಾಗಿ ಬೀಳುವ ಸೂರ್ಯನ ಬಿಸಿಲಿನ ಪರಿಣಾಮವಾಗಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಹಳದಿ ಎಲೆ ಚುಕ್ಕೆ ರೋಗವು ಬೇಸಿಗೆ ಕಾಲದ ಫೆಬ್ರವರಿ-ಏಪ್ರಿಲ್ ತಿಂಗಳುಗಳಲ್ಲಿ ಬಿರುಸಾಗಿ ಕಾಣಿಸಿಕೊಂಡು ಮಳೆ ಬೀಳುವವರೆವಿಗೂ ಗಿಡಗಳನ್ನು ಭಾದಿಸುತ್ತವೆ. ಎಲೆಗಳ ಮೇಲೆ 3 ರಿಂದ 10 ಮಿ.ಮೀ. ವ್ಯಾಸದ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುವುದರ ಮೂಲಕ ಕಂಡುಬರುತ್ತದೆ. ಈ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ದೊಡ್ಡ ಮಚ್ಚೆಗಳಾಗುತ್ತವೆ. ಇವುಗಳ ಸುತ್ತ ಹಳದಿ ಬಣ್ಣದ ವೃತ್ತಾಕೃತಿಗಳು ಇರುತ್ತವೆ. ಅತಿ ಸೂಕ್ಷ್ಮವಾದ ಕಂದು ಬಣ್ಣದ ಸೂಜಿಯ ತಲೆಯಂತಹ ಆಕಾರಗಳನ್ನು ಸೂಕ್ಷ್ಮ ದರ್ಶಕದಲ್ಲಿ ಪರೀಕ್ಷಿಸಿದಾಗ ಶಿಲೀಂಧ್ರ ಜಾತಿಯ ರೋಗಾಣುಗಳನ್ನು ಕಾಣಬಹುದು. ಈ ರೋಗದ ಸೋಂಕುವಿಕೆಯಿಂದ ಗಿಡದ ಬೆಳವಣಿಗೆಯು ಕುಂಠಿತವಾಗುವುದು ಹಾಗೂ ಈ ರೋಗ ಹಬ್ಬುವಿಕೆಯಿಂದ ಗಿಡಗಳು ಸಾಯುತ್ತವೆ. ಇಂತಹ ಮಚ್ಚೆಗಳಲ್ಲಿ ಕೊಲ್ಲೆಟೋಟ್ರೈಕಂ, ಆಲ್ಟರ್ನೇರಿಯ, ಪಿಲ್ಲೊಸ್ಟಿಕ್ಟ್, ಕರ್ವುಲೇರಿಯ ಮುಂತಾದ ಶಿಲೀಂಧ್ರಗಳನ್ನು ಗುರುತಿಸಲಾಗಿದೆ.
ಹತೋಟಿ ಕ್ರಮಗಳು :
ಗಿಡಗಳ ಮಡಿಯ ಸುತ್ತ ಹಾಗೂ ತೋಟದ ಸುತ್ತ ಬಸಿ ಕಾಲುವೆಗಳನ್ನು ಮಾಡಬೇಕು.
ನೇರವಾಗಿ ಅಡಿಕೆ ಸಸಿಗಳ ಎಲೆಗಳ ಮೇಲೆ ಬಿಸಿಲಿನ ಶಾಖ ಬೀಳದಂತೆ ಎಚ್ಚರವಹಿಸಬೇಕು.
ಗಿಡಗಳಿಗೆ ಹೆಚ್ಚಿನ ಪ್ರಮಾಣ ಗೊಬ್ಬರ ನೀಡಬೇಕು.
ರೋಗಕ್ಕೆ ತುತ್ತಾಗಿ ಸತ್ತ ಎಲೆಗಳನ್ನು ತೆಗೆದು ನಾಶಪಡಿಸಬೇಕು.
ಶಿಲೀಂಧ್ರ ನಾಶಕಗಳಾದ ಮ್ಯಾಂಕೊಜೆಬ್ 3 ಗ್ರಾಂ ಅಥವಾ ತಾಮ್ರದ ಆಕ್ಸಿಕ್ಲೋರೈಡ್ 2 ಗ್ರಾಂ ನಂತೆ ಪ್ರತಿ ಲೀ. ನೀರಿಗೆ ಮಿಶ್ರಮಾಡಿ ಸಿಂಪರಿಸುವುದರಿಂದ ಹಳದಿ ಎಲೆಚುಕ್ಕೆ ರೋಗವನ್ನು ಹತೋಟಿ ಮಾಡಬಹುದು.
ಎಲೆಗಳ ಅಂಗಮಾರಿ ರೋಗ : ತಳ ಭಾಗದ ಎಲೆಗಳಲ್ಲಿ ಈ ರೋಗವು ಹೆಚ್ಚಾಗಿ ಕಾಣುವುದು. ಫೆಬ್ರವರಿಯಿಂದ ಜೂನ್ ತಿಂಗಳ ತನಕ ಕಳೆ ಗುಂದಿದ ಕೆಂಪು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಾಣುತ್ತವೆ. ಮಣ್ಣು ಫಲವತ್ತಾಗಿಲ್ಲದಿದ್ದಲ್ಲಿ ರೋಗದ ಬಾಧೆ ಹೆಚ್ಚು. ಈ ರೋಗಕ್ಕೆ ಕಾರಣ ಪೆಸ್ಟಾಲೋಳಿಯ ಪಾಮಾರಮ್ ಮತ್ತು ಪೋಮಾಪ್ಸಿಸ್ ಪಾಮಿಕೊಲ ಎಂಬ ಜಾತಿಯ ಶಿಲೀಂಧ್ರ ರೋಗಾಣುಗಳು. ಇದರಿಂದ ಬೆಳೆವಣಿಗೆ ಕುಂಠಿತವಾಗುತ್ತದೆ.
ಹತೋಟಿ ಕ್ರಮಗಳು :
ಮಣ್ಣಿಗೆ ಸಾರಜನಕ ಮತ್ತು ರಂಜಕ ಸತ್ವಗಳನ್ನು ನೀಡಬೇಕು.
ಮ್ಯಾಂಕೊಜೆಬ್ ಶೇ. 0.2 ರಂತೆ ಸಿಂಪಡಿಸಬೇಕು.
ಗಿಡಗಳಿಗೆ ನೆರಳನ್ನು ಒದಗಿಸುವುದರಿಂದ ಹಾಗೂ ತಾಮ್ರದ ಸತ್ವವಿರುವ ಬೋರ್ಡೋ ದ್ರಾವಣ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ಶಿಲೀಂಧ್ರನಾಶಕಗಳು ಪರಿಣಾಮಕಾರಿಯಾಗಿವೆ.
ಕೆಂಪು ಬಣ್ಣದ ತುಕ್ಕು ರೋಗ : ಈ ರೋಗ ‘ಪಾಚಿ’ ಎಂಬ ಪರೋಕ್ಷ ಜೀವಿಯಿಂದ ಕಾಂಡ ಮತ್ತು ಎಲೆಗಳ ಸಮೂಹವನ್ನು ಬಾಧಿಸುತ್ತದೆ. ವರ್ತುಲಾಕಾರದ ಅಥವಾ ಅಂಡಾಕಾರದ ಚುಕ್ಕೆಗಳು ಹಳದಿ ಬಣ್ಣದ ಪರಿಧಿಗಳೊಂದಿಗೆ ಎಲೆಗಳ ಮೇಲೆ ಕಂಡುಬರುತ್ತವೆ. ಮಚ್ಚೆಗಳು ಕಾಂಡದ ಮೇಲೆ ಅನಿಶ್ಚಿತ ಆಕಾರದಲ್ಲಿರುತ್ತವೆ. ಈ ರೋಗದ ಸೋಂಕುವಿಕೆಯ ಕಾಂಡದ ಹೊರಭಾಗವನ್ನು ನಾಶಪಡಿಸುವುದು.
ಹತೋಟಿ ಕ್ರಮಗಳು :ಈ ರೋಗ ಕಂಡುಬರುವ ಪ್ರದೇಶಗಳಲ್ಲಿ ಗಿಡಗಳಿಗೆ ನೆರಳನ್ನು ಒದಗಿಸಬೇಕು. ಶಿಲೀಂಧ್ರ ನಾಶಕವಾದ ಬೋರ್ಡೋ ದ್ರಾವಣವನ್ನು ಶೇ. 0.5ರ ಪ್ರಮಾಣದಲ್ಲಿ ಸಿಂಪರಿಸಬೇಕು.
ಬೇರು ಕೊಳೆ ರೋಗ : ಅಡಿಕೆ ಗಿಡದ ಬೇರು ಮತ್ತು ಮೇಲ್ಭಾಗದಲ್ಲಿರುವ ಬುಡ ಭಾಗ ಕೊಳೆಯುತ್ತದೆ. ಈ ರೋಗವು ಬಸಿಗಾಲುವೆ ವ್ಯವಸ್ಥೆ ಇಲ್ಲದ ಸಸಿಗಳ ಮಡಿಗಳಲ್ಲಿ ಕಂಡು ಬರುತ್ತದೆ. ಈ ರೋಗವು ಪ್ಯುಸೆರಿಯಂ ಮತ್ತು ರೈಜೋಕ್ಟೋನಿಯ ಎಂಬ ಶಿಲೀಂಧ್ರ ರೋಗಾಣುಗಳಿಂದ ಬರುತ್ತದೆ. ಶಿಲೀಂಧ್ರವು ಗಿಡದ ಬೇರುಗಳಿಗೆ ಸೊಂಕನ್ನು ಉಂಟುಮಾಡುವುದರಿಂದ ಗಿಡಗಳು ಸೊರಗುತ್ತವೆ. ಕೆಲವೊಮ್ಮೆ ಏಕಾಣುಜೀವಿಗಳು ಗಿಡದ ಬುಡಭಾಗವನ್ನು ಪ್ರವೇಶಿಸುತ್ತವೆ ಮತ್ತು ಬೇರನ್ನು ಕೊಳೆಯುವಂತೆ ಮಾಡುತ್ತವೆ. ಈ ರೋಗದ ತೀವ್ರತೆಯನ್ನು ಸರಿಯಾದ ಬಸಿಗಾಲುವೆಗಳನ್ನು ಮಡಿಯ ಸುತ್ತಲೂ ಮಾಡುವುದರಿಂದ ತಡೆಗಟ್ಟಬಹುದು. ಮಣ್ಣನ್ನು ಶೇ. 0.2ರ ತಾಮ್ರದ ಆಕ್ಸಿಕ್ಲೋರೈಡ್ನಿಂದ ತೋಯಿಸುವುದರಿಂದ ತಡೆಗಟ್ಟಬಹುದು.
ಲೇಖನ: ಜಹೀರ್ ಅಹಮದ್ ಬಿ. ಮೊಬೈಲ್ ಸಂಖ್ಯೆ: 98453 00326