ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಣೆ ಮತ್ತು ಮಣ್ಣಿ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಹಾಗೂ ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವ ಸದುದ್ದೇಶದಿಂದಾಗಿ ಜಾರಿಗೆ ತರಲಾಗಿರುವ ಅಂತರ್ಜಲ ಚೇತನ ಯೋಜನೆಯನ್ನು ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ತಾಲೂಕು ಸೂಗೂರು ಸಮೀಪದ ಕ್ಯಾತಿನಕೊಪ್ಪ ಗ್ರಾಮದಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಈ ಎಲ್ಲಾ ಕಾಮಗಾರಿಗಳು ನಿರೀಕ್ಷೆಯಂತೆ ಪೂರ್ಣಗೊಳ್ಳಲು ಸಮುದಾಯದ ಸಹಭಾಗಿತ್ವ ಮಹತ್ವದ್ದಾಗಿದೆ ಎಂದ ಅವರು,. ಈ ಯೋಜನೆಯಿಂದ ಜಿಲ್ಲೆಯ ಎಲ್ಲಾ 271ಗ್ರಾಮ ಪಂಚಾಯಿತಿಗಳ ಸುಮಾರು 8.82ಲಕ್ಷ ಜನರಿಗೆ ಉಪಯೋಗಲಿದೆ. ಈ ಯೋಜನೆಯಡಿ ಬೋಲ್ಡರ್ ಚೆಕ್(ಕಲ್ಲುಗುಂಡು ತಡೆ) ನಿರ್ಮಾಣ, ಇಂಗುಬಾವಿ, ಇಂಗುಕೊಳವೆ, ಕೆರೆ ಹೊಂಡ ಸೇರಿದಂತೆ ಒಟ್ಟು 32,731ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಗೆ 252ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದವರು ನುಡಿದರು.
ಈ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ತಜ್ಞ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವರಲ್ಲದೆ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ ಆಯ್ದ 8-10ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಹಂತಹಂತವಾಗಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದರು.
ಮನುಷ್ಯ ಪ್ರಕೃತಿಗೆ ನೀಡಿದ್ದಕ್ಕಿಂತ ದ್ರೋಹವೆಸಗಿದ್ದೆ ಹೆಚ್ಚು. ಸಾಕಷ್ಟು ಮಳೆ ಆಗುತ್ತಿದ್ದರೂ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳದೆ ಅನಗತ್ಯವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ನೆಲದಿಂದ ನೀರನ್ನು ಮೇಲೆತ್ತಿ ಅಂತರ್ಜಲ ಖಾಲಿ ಮಾಡಿದ್ದಾನೆ. 2-3ದಶಕಗಳ ಹಿಂದೆ ಬಿದ್ದ ಮಳೆ ನೀರಿನ ಶೇ.40ರಷ್ಟು ನೀರು ಭೂಮಿಯಲ್ಲಿ ಇಂಗುತ್ತಿತ್ತು. ಆದರೆ ಇಂದು ಅದರ ಪ್ರಮಾಣ ಶೇ.5ಕ್ಕೆ ಬಂದು ನಿಂತಿದೆ. ಪ್ರಸ್ತುತ ಸಂದರ್ಭದಲ್ಲಿ ಮನುಷ್ಯ ಪ್ರಕೃತಿಯ ಋಣ ತೀರಿಸುವ ಕಾಲ ಇದಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಯೋಜನೆಯ ಅನುಷ್ಠಾನ ಕಾರ್ಯದಲ್ಲಿ ಆಸಕ್ತರೆಲ್ಲರಿಗೂ ಉದ್ಯೋಗಾವಕಾಶ ನೀಡಲಾಗುತ್ತಿದೆ. ಅಲ್ಲದೆ ಶ್ರಮಿಕರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶವೂ ದೊರೆಯಲಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹವಾಮಾನದ ವೈಪರೀತ್ಯಗಳ ಪರಿಣಾಮವಾಗಿ ಅತೀವೃಷ್ಠಿ, ಅನಾವೃಷ್ಠಿಗಳನ್ನು ನೋಡುವಂತಾಗಿದೆ. ಬರುವ ಮಳೆಯ ನೀರನ್ನು ಸದ್ಭಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಬದಲಾಗಿ ವ್ಯರ್ಥವಾಗಿ ಹೋಗುತ್ತಿದೆ. ಸಾರಯುಕ್ತ ಮಣ್ಣಿನ ಸವಕಳಿಯಾಗುತ್ತಿದೆ. ಈ ಯೋಜನೆಯ ಅನುಷ್ಠಾನದಲ್ಲಿ ರೈತರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸೂಚಿಸಿದರು.
2000ಮಿ.ಮೀ.ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಬರುತ್ತಿದ್ದರೂ ಬೇಸಿಗೆಯಲ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ. ಬರುವ ಮಳೆ ನೀರಿನ ಸದ್ಬಳಕೆಗೆ ಕ್ರಿಯಾ ಯೋಜನೆ ರೂಪಿಸುವ, ಬರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ, ನೀರಿನ ಹರಿವನ್ನು ನಿಯಂತ್ರಿಸಿ ಇಂಗಿಸುವ ಅಗತ್ಯವಿದೆ. ಅಂತರ್ಜಲ ಬ್ಯಾಂಕಿನಲ್ಲಿ ಇಟ್ಟ ನಿಧಿಯ ಹಾಗೆ. ನೀರಿನ ಮರುಪೂರಣ ಆಗಬೇಕು. ತೆಗೆಯುವ ನೀರನ್ನು ಮತ್ತೆ ತುಂಬುವ ಕೆಲಸ ಆಗಬೇಕು. ಅದು ಆಪತ್ಕಾಲದಲ್ಲಿ ಬಳಕೆಯಾಗಲಿದೆ ಎಂದವರು ನುಡಿದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ಸರಳವಾದ ವೈಜ್ಞಾನಿಕವಾದ ವಿಧಾನಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಸರ್ಕಾರದೊಂದಿಗೆ ಸಮುದಾಯ ಮುಂದಾಗಬೇಕು. ಮಳೆ ನೀರು ಸಂಗ್ರಹಕ್ಕೆ ಇದು ಸುವರ್ಣಾವಕಾಶ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆರ್ಟ್ ಆಫ್ ಲಿವಿಂಗ್ನ ಸಂಯೋಜಕ ನಾಗರಾಜ್ ಗಂಗೊಳ್ಳಿ ಅವರು ಮಾತನಾಡಿ, ಉಪಗ್ರಹಧಾರಿತ ಮಾಹಿತಿಯ ಆಧಾರದ ಮೇಲೆ ನೀರು ಇಂಗಿಸುವ ಸ್ಥಳಗಳನ್ನು ನಿಗಧಿಗೊಳಿಸಲಾಗಿದೆ. ವೈಜ್ಞಾನಿಕ ವಿಧಾನಗಳ ಮೂಲಕ ನೀರನ್ನು ಇಂಗಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದಾಗಿ ಬರಿದಾಗಿರುವ ಕೊಳವೆ ಬಾವಿಗಳಲ್ಲಿ ಪುನಃ ನೀರಿನ ಸೆಳವು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಉದ್ಯೋಗಖಾತ್ರಿ ಯೋಜನೆಯ ವ್ಯವಸ್ಥಾಪಕ ಅನಿರುಧ್ ಪಿ.ಶ್ರವಣ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.