ಯೋಗಾಭ್ಯಾಸ ಮಾನಸಿಕ ಆರೋಗ್ಯಕ್ಕೆ ಪೂರಕ: ಪ್ರೊ. ಶರತ್ ಅನಂತಮೂರ್ತಿ
ಶಂಕರಘಟ್ಟ, ಜೂನ್ 13: ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ ಹೀಗಾಗಿ ದಿನನಿತ್ಯ ಯೋಗ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಯ ವಿದ್ಯಾರ್ಥಿಗಳಿಗೆ ಎಂಟು ದಿನಗಳ (13-20 ಜೂನ್) ಕಾಲ ‘ಯೋಗ ಅರಿವು ಕಾರ್ಯಕ್ರಮ’ವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಕುಲಪತಿ ಮಾತನಾಡಿದರು. ಯೋಗಭ್ಯಾಸವನ್ನು ದಿನನಿತ್ಯದ ಚಟುವಟಿಕೆಯ ಭಾಗವಾಗಿ ಅಳವಡಿಸಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳು ಇರುವವೆಂದು ಅವರು ತಿಳಿಸಿದರು.
ಯೋಗಾಭ್ಯಾಸವು ಮಾನಸಿಕ ದೈಹಿಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಆಂತರಿಕ ಶಾಂತಿಯನ್ನು ವೃದ್ಧಿಸುತ್ತದೆ ಹಾಗೂ ನಮ್ಮ ಸಾಮರ್ಥ್ಯಗಳ ಹರಿಯವನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ ಮಂಜುನಾಥ್ ಎ ಎಲ್, ಪರೀಕ್ಷಾಂಗ ಕುಲಸಚಿವ ಪ್ರೊ. ಗೋಪಿನಾಥ್ ಎಸ್ ಎಂ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್ ಡಿ ವಿರೂಪಾಕ್ಷ, ಡಾ. ಎಸ್ ಎಂ ರವೀಂದ್ರ ಗೌಡ ಉಪಸ್ಥಿತರಿದ್ದರು. ಯೋಗ ಅರಿವು ಕಾರ್ಯಕ್ರಮದಲ್ಲಿ ವಿವಿಯ ವಿವಿಧ ವಿಭಾಗಗಳ ನೂರಕ್ಕೂ ಅಧಿಕ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.