ಕತ್ತೆ ಹಾಲು ಅಮೃತಕ್ಕೆ ಸಮಾನ. ಇದನ್ನು ಕುಡಿದರೆ ಅನೇಕ ರೋಗಗಳು ಮಾಯ ಎಂಬಿತ್ಯಾದಿ ಪ್ರತೀತಿಗಳಿವೆ. ಕತ್ತೆ ಹಾಲಿನ ಕುತೂಹಲಕಾರಿ ಅಂಶಗಳು ….ಓದಿ..ಅಭಿಪ್ರಾಯ ವ್ಯಕ್ತಪಡಿಸಿ..
ಚುಮು ಚುಮು ಚಳಿಯ ಮುಂಜಾನೆ.. ನಿದ್ದೆಗಣ್ಣು, ಹೊರಗೆ ಯಾರದೋ ಕೂಗು. “ಕತ್ತೆ ಹಾಲಮ್ಮಾ…..ಕತ್ತೆ ಹಾಲು…. ಎಲ್ಲಾ ರೋಗಕ್ಕೂ ಮದ್ದು.. ಕತ್ತೆ ಹಾಲು….ಡಯಾಬಿಟೀಸ್, ಬಿಪಿ ಇದೆಯೇ….ಕತ್ತೆ ಹಾಲು…. ಕ್ಯಾನ್ಸರ್ ಇದೆಯೇ? ಕತ್ತೆ ಹಾಲು ಕುಡಿರಿ……. ನೂರು ಮಿಲಿಗೆ 200 ರೂಪಾಯಿ ಮಾತ್ರ. ಇನ್ಮೇಲ್ ಸಿಗಲ್ಲ. ಇನ್ಮುಂದೂ ಸಿಗಲ್ಲ. …. ಕತ್ತೆ ಹಾಲು….. ಹೀಗೆಯೇ ಸಾಗಿತ್ತು. ಕತ್ತೆ ಹಾಲಿನವಳ ಉದ್ಘೋಷಣೆ. ಕುತೂಹಲದಿಂದ ಹೊರಗೆ ನೋಡಿದೆ. ಎಣ್ಣೆಗಪ್ಪು ಬಣ್ಣದ, ಮಧ್ಯಮ ವಯಸ್ಸಿನ, ಬಡವರಂತೆ ವೇಷ ಭೂಷಣದಿಂದ ಅನಿಸುವ ಮಹಿಳೆಯೊಬ್ಬಳು, ಮಧ್ಯಮ ಗಾತ್ರದ ಕತ್ತೆಯೊಂದಿಗೆ ಹೊರಗೆ ನಿಂತಿದ್ದಳು.
ಕತ್ತೆ ಹಾಲು ಯಾರು ಕುಡಿದಾರು? ಅಂತ. ಸುತ್ತಮುತ್ತಲಿನ ಮನೆಗಳಿಂದ ಒಬ್ಬೊಬ್ಬರೇ ಬರತೊಡಗಿದರು. ಕತ್ತೆಯ ಯಜಮಾನಿ ಮಹಿಳೆ, ಸ್ಥಿತ ಪ್ರಜ್ಞೆಯಿಂದ ಅರ್ಧಕಣ್ಣು ಮುಚ್ಚಿ “ಧ್ಯಾನ” ಸ್ಥಿತಿಯಲ್ಲಿರುವ ಕತ್ತೆಯಿಂದ ಸಣ್ಣ ಕಾಫಿ ಲೋಟದಲ್ಲಿ ಅರ್ಧ ಲೋಟ ಹಾಲು ಕರೆದು ನೀಡಿದಳು. ಎದುರು ಮನೆಯ ಮಹಿಳೆಯ ಚಿಕ್ಕ ಮಗ ಯಾಕೋ ಪರೀಕ್ಷೆಗೆ ಚೆನ್ನಾಗಿ ಓದುತ್ತಿಲ್ಲವಂತೆ. ಅವನ ಮಂದಬುದ್ಧಿ ನಿವಾರಣೆಯಾಗಬೇಕಂತೆ. ಅದಕ್ಕೆ ಕತ್ತೆ ಹಾಲು ಪ್ರಾಶನ!! ಆತ ನಿದ್ರೆಗಣ್ಣಲ್ಲಿ ಮುಖ ಕಿವುಚಿಕೊಂಡು ಗಟಗಟ ಅಂತ ಕತ್ತೆ ಹಾಲು ಕುಡಿದ. ಕತ್ತೆ ಹಾಲಮ್ಮಾ ಕತ್ತೆ ಹಾಲು…ಉದ್ಘೋಷಣೆಯೊಂದಿಗೆ ಮುಂದೆ ಹೊರಟಿತು ಕತ್ತೆ ಹಾಲಿನ ಸವಾರಿ
ಹೀಗೆಯೇ ಹತ್ತು ಹಲವಾರು ಕಾಯಿಲೆಗಳಿಗೆ ಕತ್ತೆ ಹಾಲು ಪ್ರಾಶನ ಸಾಗಿತು. …ಏಯ್ ಕತ್ತೆ ಕಾಯೋನೆ.. ಕತ್ತೆ ಕಾಯಲಿಕ್ಕೂ ನೀನು ನಾಲಾಯಕ್ಕು..”ಕತ್ತೆಗೇನು ಗೊತ್ತು ಕಸ್ತೂರಿಯ ಸುವಾಸನೆ” ಕತ್ತೆಯಂತೇ ಕಿರುಚಬೇಡ. “ಕಾರ್ಯವಾಸಿ ಕತ್ತೆಕಾಲು ಹಿಡಿಬೇಕಂತೆ” ಕತ್ತೆಗಾದಷ್ಟು ವಯಸ್ಸಾಗಿದೆ.ಇನ್ನೂ ಬುದ್ದಿ ಬಂದಿಲ್ಲ.. ಇತ್ಯಾದಿ ತರಹೆವಾರಿ ಗಾದೆ ಮಿಶ್ರಿತ ಬೈಗುಳಗಳ ಸಾಲುಗಳನ್ನೇ ಕತ್ತೆಗಳ ಮೇಲೆ ಹೊರೆಸಲಾಗಿದೆ. ಕತ್ತೆಯೊಂದು ಅತ್ಯಂತ ಅಪ್ರಯೋಜಕ ಪ್ರಾಣಿ ಎಂದು ನಿವಾಳಿಸಿ ಬಿಸಾಡಲಾಗಿದೆ. ಆದರೆ ಈ ಕತ್ತೆ ಹಾಲು ಔಷಧಿಯೆಂದು ತಿಳಿದಾಗಿನಿಂದ ಜನ ಅದಕ್ಕೆ ಮುಗಿ ಬೀಳುತ್ತಿದ್ದಾರೆ.. ಶರೀರದಿಂದ ಕಲ್ಮಷಗಳನ್ನೆಲ್ಲಾ ಹೊರತರುವ ಮೂತ್ರವನ್ನೇ “ಔಷಧಿ” ಅಂತ ಕುಡಿಯೋ ಈ ಕಾಲದಲ್ಲಿ ಕತ್ತೆ ಹಾಲಿನದೇನು ಲೆಕ್ಕ ಅಂತಿರಾ? ಅನ್ನಿ..ಪರವಾಗಿಲ್ಲ.
ನನಗೆ ಕುತೂಹಲವಾಗಿ ಏನಿದೆ ಈ ಕತ್ತೆ ಹಾಲಿನಲ್ಲಿ, ಏನಿದೆಲ್ಲಾ ಅಂತ ನೋಡಲು ಗ್ರಂಥಾಲಯ, ಅಂತರ್ಜಾಲ ಜಾಲಾಡಿದೆ. ಸಾಕಷ್ಟು ವಿಷಯಗಳಿದ್ದವು. ಕತ್ತೇಯೇ ಇತರ ಪ್ರಾಣಿಗಳಿಂತ ಭಿನ್ನ. ಕತ್ತೆಯ ಹಾಲು ಇತರ ಪ್ರಾಣಿಗಳ ಹಾಲಿಗಿಂತ ಸ್ವಲ್ಪ ಭಿನ್ನ. ಇದು ಕಡಿಮೆ ಕೊಬ್ಬು, ಹೆಚ್ಚಿನ ಖನಿಜಾಂಶ ಹೊಂದಿದೆ ಕತ್ತೆ ಹಾಲಿನಲ್ಲಿನ ಪೌಷ್ಟಿಕಾಂಶಗಳು ಮನುಷ್ಯನ ಹಾಲಿನ ಪೌಷ್ಟಿಕಾಂಶಗಳಿಗೆ ಸಮ. ಆಕಳ ಹಾಲಿಗೆ ಹೋಲಿಸಿದರೆ ಹೆಚ್ಚಿನ ಪ್ರೊಟೀನ್ ಮತ್ತು ಅವಶ್ಯಕ ಅಮೈನೋ ಆಮ್ಲಗಳು ಇದರಲ್ಲಿ ಇವೆ. ಒಂದು ಚಿಕ್ಕ ಕೋಷ್ಟಕ ಗಮನಿಸಿದರೆ ಅದರ ವ್ಯತ್ಯಾಸ ಗೊತ್ತಾಗುತ್ತದೆ.
ಆದರೆ ಕತ್ತೆಗಳು ಲೀಟರ್ ಗಟ್ಟಲೆ ಹಾಲು ಕೊಡಲ್ಲ. ಒಂದೊಂದು ಕತ್ತೆ ಕೇವಲ 250 ಎಂಎಲ್ನಷ್ಟು ಮಾತ್ರ ಹಾಲು ಕೊಡುತ್ತದೆ. ಇದರಲ್ಲಿ ಔಷಧಿ ಗುಣಗಳು ಸಾಕಷ್ಟಿವೆ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಕತ್ತೆ ಹಾಲನ್ನು ಖರೀದಿಸುತ್ತಾರೆ. ಇದೀಗ ನಗರ ಪ್ರದೇಶದಲ್ಲಿಯೂ ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆಂಧ್ರಪ್ರದೇಶದಲ್ಲಿಯಂತೂ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಒಂದು ಲೀಟರ್ ಕತ್ತೆ ಹಾಲಿನ ಬೆಲೆ ಸುಮಾರು ರೂ.1000ಕ್ಕೆ ಮಾರಾಟ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ ಕತ್ತೆ ಹಾಲನ್ನು ಆಕಳ ಹಾಲಂತೆ ಪ್ಯಾಕೆಟ್ ಮಾಡಿ ಮಾರುವ ಯೋಚನೆಯೂ ಇದೆಯಂತೆ..ಅದುದರಿಂದ ಕತ್ತೆ ಸಾಕುವುದೇ ಉತ್ತಮವೇನೋ ಅನಿಸಬಹುದು. ಅನೇಕ ದೇಶಗಳಲ್ಲಿ ಕತ್ತೆ ಹಾಲನ್ನು ಐಸ್ ಕ್ರೀಮ್, ತುಪ್ಪ, ಬೆಣ್ಣೆ ಇತ್ಯಾದಿ ರೂಪದಲ್ಲಿಯೂ ಮಾರುತ್ತಾರೆ.
ಸಾಮಾನ್ಯವಾಗಿ ಕತ್ತೆಗಳು 7-8 ತಿಂಗಳು ಮಾತ್ರ ಹಾಲು ಕೊಡುತ್ತವೆ. ಅದೂ ಒಂದೊಂದು ಕತ್ತೆ 250 ಎಂಎಲ್ ನಷ್ಟು ಮಾತ್ರ ಹಾಲು ನೀಡುತ್ತದೆ. ಆ ಸಮಯ ಮುಗಿಯಿತು ಎಂದರೆ ಕೆಲವೊಮ್ಮೆ 2-3 ವರ್ಷ ಕಾಯಬೇಕು. ಮತ್ತೆ ಮರಿ ಹಾಕಿದ ಬಳಿಕವಷ್ಟೇ ಕತ್ತೆ ಹಾಲು ಕೊಡುತ್ತದೆ.
ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ವಡ್ಡಿರಾಜುಲ ಸಮುದಾಯಕ್ಕೆ ಸೇರಿದವರು ಅಮರಾವತಿ ಸುತ್ತಮುತ್ತ ಗ್ರಾಮಗಳಲ್ಲಿ ಸುತ್ತುತ್ತಾ 50 ಮಿಲಿ ಲೀಟರ್ ಹಾಲನ್ನು ರೂ.50ಕ್ಕೆ ಮಾರುತ್ತಿದ್ದಾರೆ. ಕತ್ತೆಗಳನ್ನು ತಮ್ಮ ಜತೆ ಕರೆದೊಯ್ದು ಸ್ಥಳದಲ್ಲೇ ಹಾಲನ್ನು ಕರೆದು ಕೊಡುತ್ತಿದ್ದಾರೆ. ಸುಮಾರು 40 ಕತ್ತೆಗಳನ್ನು ಅಮರಾವತಿ ಹೊರವಲಯದಲ್ಲಿ ಬಿಟ್ಟು ಮುಂಜಾನೆ ಗ್ರಾಮಗಳಲ್ಲಿ ಕರೆದೊಯ್ಯುತ್ತಾರೆ.
ಅಂಕಿ ಅಂಶಗಳನ್ನು ಗಮನಿಸಿದರೆ ಖಚಿತವಾಗುವ ವಿಷಯವೆಂದರೆ ಮನುಷ್ಯನ ಹಾಲಿಗೆ ಸಮನಾಗಿ ಕತ್ತೆ ಹಾಲು ನಿಲ್ಲಬಲ್ಲದು. ಆಕಳ ಹಾಲನ್ನು ಕುಡಿದಾಗ ಅಲರ್ಜಿಯಾಗುವ ಜನರ ಒಂದು ದೊಡ್ಡ ಸಮೂಹವೇ ಇದೆ. ಅವರಿಗೆ ಕತ್ತೆ ಹಾಲು ಪರ್ಯಾಯವಾಗಬಹುದು. ಚಿಕ್ಕ ಮಕ್ಕಳಿಗೆ ತಾಯಿಯ ಎದೆಹಾಲು ಸಿಗದ ಸಂದರ್ಭಗಳು ಅನೇಕ. ಆಗ ಕತ್ತೆ ಹಾಲು ಕುಡಿಸಬಹುದು. ಕರುಳು ಸಂಬಂಧಿ ಕಾಯಿಲೆಗಳಿಗೆ, ಶ್ವಾಸಕೋಶದ ತೊಂದರೆಗಳಿಗೆ, ಪಿತ್ತಜನಕಾಂಗದ ತೊಂದರೆಗಳಿಗೆ ಕತ್ತೆ ಹಾಲನ್ನು ಬಳಸಬಹುದು ಎಂಬ ಪ್ರತೀತಿಗಳಿದ್ದು ಈ ಕುರಿತು ವೈಜ್ಞಾನಿಕ ಅಧ್ಯಯನದ ಅವಶ್ಯಕತೆ ಇದೆ.
ಕತ್ತೆಯ ಹಾಲಿನಲ್ಲಿ ಉತ್ತಮ ಪೋಷಕಾಂಶಗಳಿರುವುದು ನಿಜವಾದರೂ ಕೇವಲ ಒಂದು ದಿನ ಕತ್ತೆ ಹಾಲು ಕುಡಿದು ಕಾಯಿಲೆಗಳನ್ನು ಗುಣಪಡಿಸಿಕೊಳ್ಳುವುದು ಅತಿರಂಜಿತ ಮಾತು. ಈ ಕುರಿತು ಇನ್ನೂ ವೈಜ್ಞಾನಿಕ ಸಂಶೋಧನೆ ನಡೆಯುವುದು ಅವಶ್ಯವಾದರೂ ಸಹ ಮುಂಜಾನೆಯ “ಕತ್ತೆ ಹಾಲಮ್ಮ.. ಕತ್ತೆ ಹಾಲು” ಎಂಬ ಉದ್ಘೋಷ ಕೇಳುತ್ತಲೇ ಇರುತ್ತದೆ. ಪಾಪ.. ಬಡವರು ಕತ್ತೆ ಹಾಲು ಮಾರಿಕೊಂಡು ಒಂದೆರಡು ಕಾಸುಗಳಿಸಲಿ ಅಲ್ಲವೇ!!?
ಹೆಚ್ಚಿನ ಮಾಹಿತಿಗಾಗಿ : ಡಾ. ಎನ್.ಬಿ.ಶ್ರೀಧರ್
ಮೊಬೈಲ್ ಸಂಖ್ಯೆ: 9448059777