- ವೈಜ್ಞಾನಿಕ ಮನೋಭಾವ ಮತ್ತು ಅಂತರ್ಜಲ ಹೆಚ್ಚಳಕ್ಕೆ ಒತ್ತು
ಬೆಂಗಳೂರು ಫೆಬ್ರವರಿ 16: ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್, ಸೈನ್ಸ್ ಸಿಟಿ ಸ್ಥಾಪನೆ, ನೀರಿನ ಸದ್ಬಳಕೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡುವಂತಹ ಮತ್ತು ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಧ್ವನಿಯಾಗುವಂತಹ ಕ್ರಾಂತಿಕಾರಿ ಆಯವ್ಯಯವನ್ನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದ್ದಾರೆ.
ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಡೆ ತಾಂಡವವಾಡಬೇಕು, ನಿಷ್ಪಕ್ಷಪಾತ ಮತ್ತು ನ್ಯಾಯಯತ ಸಮಾಜ ನಿರ್ಮಾಣಕ್ಕಾಗಿ ಸಂಪತ್ತಿನ ಮರುಹಂಚಿಕೆ ಮಾಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರೆಂಟಿ ಯೋಜನೆಗಳನ್ನ ಚಾಚೂ ತಪ್ಪದೆ ಅನುಷ್ಠಾನಗೊಳಿಸಿ ಇಡೀ ದೇಶದಲ್ಲಿ ಮಾದರಿ ರಾಜ್ಯವಾಗಿದ್ದೇವೆ. ಬಸವಣ್ಣವರ ಆಶಯದಂತೆ ನುಡಿದಂತೆ ನಡೆದ ಸರಕಾರ ನಮ್ಮದಾಗಿದೆ. ಈ ಬಾರಿ ಬಜೆಟ್ ನಲ್ಲಿ 52 ಸಾವಿರ ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ನೀಡಿದ್ದು, ಇಡೀ ದೇಶದಲ್ಲೆ ನಮ್ಮ ಸರಕಾರ ಮಾದರಿಯಾಗಿ ಹೊರಹೊಮ್ಮಿದೆ.
ನಮ್ಮದು ಮುಂದಿನ 10 ವರ್ಷಗಳ ದೂರದೃಷ್ಟಿಯನ್ನು ಹೊಂದಿರುವಂತಹ ಅಭಿವೃದ್ದಿ ಪೂರಕ ಬಜೆಟ್ ಆಗಿದೆ. ಗ್ಯಾರೆಂಟಿಗಳಿಗೆ ಅನುದಾನ ನೀಡಿದ ಮೇಲೂ ಆರ್ಥಿಕ ಸುಸ್ಥಿತಿಯನ್ನ ನಿಭಾಯಿಸಿ ಗ್ಯಾರೆಂಟಿಗಳ ಜೊತೆ ಅಗತ್ಯ ಅಭಿವೃದ್ದಿಗೆ ಯಾವುದೇ ಕೊರತೆ ಮಾಡದೇ ಇರುವಂತಹ ಪ್ರಗತಿಶೀಲ ಬಜೆಟನ್ನ ನಮ್ಮ ಮುಖ್ಯಮಂತ್ರಿಗಳೂ ಮಂಡಿಸಿದ್ದಾರೆ. ಈ ಮೂಲಕ ಇಡೀ ದೇಶಕ್ಕೇ ಕರ್ನಾಟಕ ಮಾದರಿ ಆಡಳಿತನ್ನ ಕೊಡುಗೆಯಾಗಿ ನೀಡಿದ್ದಾರೆ. ಅಭಿವೃದ್ದಿಯ ಜೊತೆ ಜನಕಲ್ಯಾಣದ ಬದ್ದತೆಯನ್ನು ಹೊಂದಿರುವುದೇ “ಕರ್ನಾಟಕ ಮಾಡೆಲ್” ಆಡಳಿತವಾಗಿದೆ.
ಗ್ಯಾರೆಂಟಿಗಳ ಜೊತೆಯಲ್ಲೆ ಹಿಂದೆಂದೂ ನೀಡಿದಷ್ಟು ಅನುದಾನವನ್ನ ಅಭಿವೃದ್ದಿ ಕಾರ್ಯಗಳಿಗೆ ನೀಡುವ ಮೂಲಕ ಈ ಆಯವ್ಯಯವು ನಮ್ಮ ರಾಜ್ಯದ ಮುಂದಿನ ನಡೆಯನ್ನು ನಿರೂಪಿಸುತ್ತದೆ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ದಿ ಪರ್ವವನ್ನು ಒಳಗೊಂಡ ಕರ್ನಾಟಕದ ಅಭಿವೃದ್ದಿಯನ್ನು ಮುಂದಿನ ಒಂದು ದಶಕಕ್ಕೆ ನಿಚ್ಚಳಗೊಳಿಸಿದೆ.
ಮಳೆಯ ಕೊರತೆಯಿಂದಾಗಿ ಸಣ್ಣ ನೀರಾವರಿ ಕೆರೆಗಳ ವಿನ್ಯಾಸಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಸಮೀಪದ ಜೀವನದಿಗಳಿಂದ ತುಂಬಿಸಲು ಯೋಜನೆಗಳನ್ನು ಕೈಗೊಳ್ಳಲು ಗಣನೀಯ ಪ್ರಮಾಣದ ವೆಚ್ಚ ಮಾಡಲಾಗಿದೆ. ಈ ಯೋಜನೆಗಳಿಂದಾಗಿ ಸ್ಥಳೀಯ ಅಂತರ್ಜಲ ಮಟ್ಟದ ಮೇಲೆ ಆಗಿರುವ ಪರಿಣಾಮ, ಸುತ್ತಲಿನ ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಮೌಲ್ಯಮಾಪನ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಗತಿಯಲ್ಲಿರುವ 455 ಕೋಟಿ ರೂ. ಮೊತ್ತದ ಕೆ.ಸಿ ವ್ಯಾಲಿ 2ನೇ ಹಂತದ ಉದ್ದೇಶಿತ 272 ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲೂ ಘೋಷನೆ ಮಾಡಲಾಗಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೆರೆ ತುಂಬಿಸುವ ಕಾಮಗಾರಿಗಳಿಗೆ ಒತ್ತು ನೀಡಿರುವುದು ಸಂತಸದ ವಿಷಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ ಯುವ ಸಮುದಾಯ ಮತ್ತು ಸಾರ್ವಜನಿಕರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವನ್ನ ಹೆಚ್ಚಿಸುವ ನಿಟ್ಟಿನಲ್ಲಿ ಆದ್ಯತೆಯನ್ನ ನೀಡಿರುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಬ್ಯಾಹ್ಯಾಕಾಶದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಟೆಲಿಸ್ಕೋಪ್ ನೀಡುವ ಯೋಜನೆಯನ್ನ ಘೋಷಿಸಿದ್ದಾರೆ. ಮೊದಲ ಹಂತದಲ್ಲಿ 833 ವಸತಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ತಲಾ ಒಂದು ದೂರದರ್ಶಕವನ್ನು ನೀಡಲು 3 ಕೋಟಿ ಅನುದಾನ ನೀಡಿದ್ದಾರೆ. ಇದು ಇಲಾಖೆಯ ಮಹತ್ವದ ಯೋಜನೆಯಾಗಿದ್ದು ವೈಜ್ಞಾನಿಕ ಮನೋಭಾವ, ವೈಜ್ಞಾನಿಕತೆಯೆಡೆಗೆ ಹೆಚ್ಚಿನ ಒಲವು ಮೂಡಿಸುವ ಗುರಿಯನ್ನು ಹೊಂದಿದೆ.
ಬೆಂಗಳೂರು ನಗರದಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಒಟ್ಟು 233 ಕೋಟಿ ವೆಚ್ಚದಲ್ಲಿ ವಿಜ್ಙಾನ ನಗರಿ (Science city) ಸ್ಥಾಪನೆಯ ಘೋಷಣೆ ಮತ್ತು ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ವಿಜ್ಞಾನ ಹಾಗೂ ತಾರಾಲಯ ಕೇಂದ್ರಗಳ ಸ್ಥಾಪನೆಗೆ 170 ಕೋಟಿ ಸೇರಿದಂತೆ ಹಲವು ಯೋಜನೆಗಳನ್ನ ಘೋಷಿಸಿರುವುದಕ್ಕೆ ಸಚಿವರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಯಚೂರು ನಗರದಲ್ಲಿ ಏಮ್ಸ್ ಸ್ಥಾಪನೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ಸಹಕಾರ ನೀಡುತ್ತಿದೆ. ನಮ್ಮ ರಾಯಚೂರು ಜಿಲ್ಲೆ ಮಹತ್ವಾಕಾಂಕ್ಷಿ ಜಿಲ್ಲೆಯಾಗಿ ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿದೆ. ಆದರೂ ಹಿಂದಿನ ಬಿಜೆಪಿ ಸರ್ಕಾರ ರಾಯಚೂರಿಗೆ ನಿರಂತರ ಅನ್ಯಾಯ ಎಸಗಿದೆ. ಈ ಎಲ್ಲಾ ಅನ್ಯಾಯಗಳಿಗೆ ಉತ್ತರ ಎಂಬಂತೆ ಇಂದಿನ ಬಜೆಟ್ ಭಾಷಣದಲ್ಲಿ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕಾಂಗ್ರೆಸ್ ಸರಕಾರ ಒತ್ತು ನೀಡಿದೆ. ಪ್ರಮುಖವಾಗಿ ಬಹುದಿನಗಳ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣ, ಜವಳಿ ಪಾರ್ಕ್, ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹಾಗೂ ಇತರ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ಅಂದಾಜು 990 ಕೋಟಿ ರೂ. ಮೊತ್ತದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ, ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರಾಯಚೂರು ಜಿಲ್ಲೆಯ ಚಿಕ್ಕಲಪರ್ವಿ ಹತ್ತಿರ ತುಂಗಭದ್ರಾ ನದಿಗೆ ಬಿ.ಸಿ.ಬಿ ನಿರ್ಮಾಣ, ಮಾನ್ವಿ ತಾಲ್ಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ. ಲೋಕೋಪಯೋಗಿ ಇಲಾಖೆ ವತಿಯಿಂದ ಮಂತ್ರಾಲಯ ಮತ್ತು ಪಂಚಮುಖಿ ಗಾಣಧಾಳಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜಿನ ಕಾಮಗಾರಿಗೆ 158 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದರಿಂದ ರಾಯಚೂರು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ರಾಯಚೂರಿನಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಸ್ಥಾಪನೆ.
ನನ್ನ ಉಸ್ತುವಾರಿ ಜಿಲ್ಲೆಯಾದ ಕೊಡಗು ಜಿಲ್ಲೆಗೂ ಹಲವು ಪ್ರಮುಖ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಮಡಿಕೇರಿಯಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಯನ್ನು ಚುರುಕುಗೊಳಿಸಲಾಗುವುದು. ಮಡಿಕೇರಿಯಲ್ಲಿ ಸಾರಿಗೆ ಇಲಾಖೆಯ ವತಿಯಿಂದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನ ಅಭವೃದ್ದಿಪಡಿಸಲಾಗುವುದು. ಅಲ್ಲದೇ ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಕೊಡುಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 5 ಕೋಟಿ ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡವನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಆದ್ಯತೆ ನೀಡಿದ್ದಾರೆ.
ಒಟ್ಟಾರೆಯಾಗಿ ಮುಖ್ಯಮಂತ್ರಿಗಳು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಆಶೋತ್ತರಗಳಿಗೆ ಹಾಗೂ ಈ ಪ್ರದೇಶದ ಜನಪ್ರತಿನಿಧಿಗಳ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಈ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ 5 ಸಾವಿರ ಕೋಟಿ ಮೀಸಲಿಟ್ಟಿರುವುದು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕಾಂಗ್ರೆಸ್ ಸರಕಾರ ಬದ್ದತೆಯನ್ನ ತೋರಿಸುತ್ತದೆ. ಒಟ್ಟಾರೆ. ಈ ಬಜೆಟ್ ದೂರದೃಷ್ಟಿ ಹೊಂದಿದ್ದು ಸರ್ವವರ್ಗಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಯೋಜನೆಗಳನ್ನ ನಾವು ನಿರೀಕ್ಷಿಸಬಹುದಾಗಿದೆ ಎನ್ನುವ ಆಶಾಭಾವನೆಯನ್ನ ಸಚಿವರು ವ್ಯಕ್ತಪಡಿಸಿದರು.