ಶಂಕರಘಟ್ಟ, ಜ. 26: ಇಡೀ ದೇಶ
ಇಂದುಗಣರಾಜ್ಯೋತ್ಸವಆಚರಿಸುತ್ತಿರುವ ಸಂದರ್ಭದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಬೃಹದಾಕಾರದ ಅಸಮಾನತೆಯನ್ನು ತೊಡೆದುಹಾಕಬೇಕಾದ ತುರ್ತು ನಮ್ಮ ಮುಂದಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

ಜ್ಞಾನಸಹ್ಯಾದ್ರಿಯ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ 76ನೇ ಗಣರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಶೇಕಡಾ 3ರಷ್ಟು ಮಂದಿ ಶ್ರೀಮಂತರ ಬಳಿ ಶೇ. 50ಕ್ಕೂ ಹೆಚ್ಚು ಸಂಪತ್ತು ಕ್ರೋಢೀಕೃತವಾಗಿದ್ದು, ಬಡವರು ಮತ್ತಷ್ಟು ಸಂಕಷ್ಟಗಳನ್ನು ಅನುಭವಿಸುಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ ಎಂದು ವಿಷಾದಿಸಿದರು.

ಭಾರತ ಇಂದು ಆಹಾರ ಸ್ವಾವಲಂಬಿಯಾಗಿದ್ದರೂ ದೇಶದ ಒಟ್ಟಾರೆ ಜನಸಂಖ್ಯೆಯ ಶೇ. 13.7ರಷ್ಟು ಜನ ಹಸಿವು ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 2024ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಒಟ್ಟು 127 ದೇಶಗಳ ಪೈಕಿ ಭಾರತ 105ನೇ ಶ್ರೇಣಿಯಲ್ಲಿದ್ದು, ‘ಗಂಭೀರ’ವಾದ ಗುಂಪಿಗೆ ಸೇರ್ಪಡೆಯಾಗಿರುವುದ್ಕೆ ಕಳವಳ ವ್ಯಕ್ತಪಡಿಸಿದ ಅವರು ಅತ್ಯಂತ ತುರ್ತಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಇದೇ ವೇಳೆ ಶಂಕರಘಟ್ಟದ ನಿವೃತ್ತ ಯೋಧರಾದ ಶಿವಾನಂದಮೂರ್ತಿ, ಕಾವೇರಪ್ಪ ಮತ್ತು ದಯಾನಂದ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಯ ನಿವೃತ್ತ ನೌಕರ ಮತ್ತು ಸೇವಾವಧಿಯಲ್ಲಿ ಒಂದು ರಜೆಯನ್ನು ತೆಗೆದುಕೊಳ್ಳದ ಸೋಮಶೇಖರ್ ಅವರನ್ನು ಕೂಡ ಸನ್ಮಾನಿಸಲಾಯಿತು.

ಬಳಿಕ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಪೆರೇಡ್ ಮತ್ತು ಸಾಹಸಮಯ ಡ್ರಿಲ್ ನ ಪ್ರದರ್ಶನ ನೀಡಿ ಗಮನ ಸೆಳೆದರು. ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಡಾ. ಎನ್. ಡಿ. ವಿರೂಪಾಕ್ಷ, ಡಾ. ಗಜಾನನ ಪ್ರಭು, ಡಾ. ರವೀಂದ್ರ ಗೌಡ, ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

error: Content is protected !!