ಶಿವಮೊಗ್ಗ ಮೇ.2 ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ವೀಪ್ ಸಮಿತಿ ವತಿಯಿಂದ ಗುರುವಾರ ಮತದಾನ ಜಾಗೃತಿ ಜಾಥಾವನ್ನು ವಿಶಿಷ್ಟವಾಗಿ ನಡೆಸಲಾಯಿತು.

ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಅತ್ಯಂತ ಉತ್ಸಾಹದಿಂದ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವ ಮೂಲಕ ಮತದಾರರಲ್ಲಿ ಪ್ರೋತ್ಸಾಹ, ಹೊಸ ಉತ್ಸಾಹ ತುಂಬಿ ಜನರಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣಾಯಲ್ಲಿ ಶೇ.100 ರಷ್ಟು ಮತದಾನ ಮಾಡುವ ಮೂಲಕ ದೇಶದ ಏಳಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಗಮನ ಸೆಳೆದ ಸಾಂಪ್ರದಾಯಿಕ ಉಡುಗೆ:
ಶಿವಮೊಗ್ಗ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಸಂಸ್ಕೃತಿ ಬಿಂಬಿಸುವ ಮಹಿಳೆಯರು ಸೀರೆ, ಪುರುಷರು ಪಂಚೆ ಶಲ್ಯ ಧರಿಸಿದ್ದರು.
ಕೆಲ ಮಹಿಳೆಯರು ಬಂಜಾರ ಸಮುದಾಯದ ಸಾಂಸ್ಕೃತಿಕ ಉಡುಗೆ ಮೂಲಕ ಗಮನ ಸೇಳೆದಿದ್ದು ಮಲೆನಾಡಿನ ಅಡಿಕೆ ಟೋಪಿ, ಗಾಂಧಿ ಟೋಪಿ, ಖಾದಿ ವಸ್ತ್ರ ,ಯಕ್ಷಗಾನ ಉಡುಗೆ ಅತ್ಯಂತ ವಿಶೇಷ ಹಾಗೂ ಆಕರ್ಷಣೀಯವಾಗಿತ್ತು.

ಮೆರವಣಿಗೆಯಲ್ಲಿ ಮೊಳಗಿದ ಮತದಾನ ಜಾಗೃತಿ ಘೋಷಣೆ:
ಅಲ್ಲಮಪ್ರಭು ಮೈದಾನದಿಂದ ಮತದಾನ ಜಾಗೃತಿ ಜಾಥಾಕ್ಕೆ ಕೆಎಸ್ ಆರ್ ಪಿ ಪೋಲಿಸ್ ಸಿಬ್ಬಂದಿಗಳು ಮತದಾನ ಜಾಗೃತಿ ಗೀತೆ ‘ನಾ ಭಾರತ ಭಾರತ ನನ್ನಲ್ಲಿ’ ಎಂಬ ಗೀತೆಯನ್ನು ಬ್ಯಾಂಡ್‌ ಬಾರಿಸುವ ಮೂಲಕ ಚಾಲನೆ ನೀಡಿ, ಲಕ್ಷ್ಮಿಚಿತ್ರಮಂದಿರ ಮಾರ್ಗವಾಗಿ ಜೈಲ್ ಸರ್ಕಲ್ , ಗೋಪಿ ವೃತ್ತ, ಮಹಾವೀರ ವೃತ್ತ, ಜಿಲ್ಲಾಧಿಕಾರಿಗಳ ಕಛೇರಿ,ನೆಹರು ಮೈದಾನ ಮೂಲಕ ಜಿಲ್ಲಾ ಪಂಚಾಯತ್ ಆವರಣದವರೆಗೆ ಜಾಗೃತಿ ಜಾಥಾ ಸಾಗಿ ಬಂದು, ಮೆರವಣಿಗೆಯಲ್ಲಿ ಚುನಾವಣಾ ಪರ್ವ ದೇಶದ ಗರ್ವ,ನೋಡಿ ನಾವು ಶಿವಮೊಗ್ಗದ ಜನ ಮಾಡೇ ಮಾಡ್ತೀವಿ ಮತದಾನ, ಮಲೆನಾಡ ಹೆಬ್ಬಾಗಿಲು ನಮ್ಮೂರು ಮತದಾನ ಮಾಡಲು ಮರೆಯದಿರು, ಮತದಾನ ನಮ್ಮ ಹಕ್ಕು, ನಾವೆಲ್ಲರೂ ಮತದಾನ ಮಾಡೋಣ.. ಎಂದು ಘೋಣೆಯೊಂದಿಗೆ ಜಾಗೃತಿ ಮೂಡಿಸಲಾಯಿತು.

ಭಾಗವಹಿಸಿದ ಇಲಾಖೆಗಳು:
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ,ಮಹಾನಗರಪಾಲಿಕೆ, ಜಿಲ್ಲಾ ಗೃಹ ರಕ್ಷಕ ದಳ, ಕೆಆರ್ ಸಿಆರ್ ಪಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಪಾಲನಾ ಇಲಾಖೆ ,ರೇಷ್ಮೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾಮಾಜಿಕ ಅರಣ್ಯ, ಜಿಲ್ಲಾ ವಿಕಲಾಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ,ಮೀನುಗಾರಿಕೆ ಇಲಾಖೆ, ಅಕ್ಷರಾ ದಾಸೋಹ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಜಾಗೃತಿ ಜಾಗದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಅವರು ಮತದಾನ ಪ್ರತಿಜ್ಞೆ ವಿಧಿ ಬೋಧಿಸಿ ಮಾತನಾಡಿ,
ಮೆರವಣಿಗೆಯಲ್ಲಿ ಆಗಮಿಸಿದ ಇಲಾಖೆಗಳ ತಂಡಗಳ ಸಾಂಪ್ರದಾಯಿಕ ಉಡುಪು, ಮೆರವಣಿಗೆಯಲ್ಲಿ ಸಾಗಿ ಬಂದ ಶಿಸ್ತು, ಘೋಷಣೆ ಕೂಗುವುದು ಹಾಗೂ ಇತರೆ ವಿಷಯಗಳನ್ನು ಗಮನಿಸಿ ಬಹುಮಾನ ನೀಡಲಾಗುವುದು. ತೀರ್ಪುಗಾರರಾಗಿ ಉಪನ್ಯಾಸಕಿ ಡಾ.ಶುಭ ಮರವಂತೆ,ಗೃಹ ರಕ್ಷಕ ದಳದ ಡಾ.ಚೇತನ್ ಅವರು ಅಂಕ ನೀಡಲಿದ್ದಾರೆ ಎಂದರು.

ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವಿಜ್ ಸ್ವೀಪ್ ಸಮಿತಿಯ ಮತದಾನ ಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಚೇತನ್ ಹೆಚ್ ಪಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರಂಗನಾಥ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಭಾಗಹಿಸಿದರು.

error: Content is protected !!