ಶಿವಮೊಗ್ಗ, ಮೇ.6: ಭದ್ರಾವತಿಯಲ್ಲಿರುವ ಆಕ್ಸಿಜನ್ ಪ್ಲಾಂಟ್ ನಲ್ಲಿ ಆಕ್ಸಿಜನ್ ಉತ್ಪಾದನೆ ಪುನಾರಂಭಿಸಲಾಗಿದ್ದು, ಇದನ್ನು ಹೆಚ್ಚಿಸಲು ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಇಂದು ಬೆಳಗ್ಗೆ ವಿಐಎಸ್ ಎಲ್ ಭೇಟಿ ನೀಡಿ ಆಕ್ಸಿಜನ್ ಉತ್ಪಾದನಾ ಘಟಕ, ಬಾಟ್ಲಿಂಗ್ ಪ್ಲಾಂಟ್ ವೀಕ್ಷಣೆ ಮಾಡಿದರು. ಪ್ರಸ್ತುತ ಪ್ರತಿದಿನ 150 ಸಿಲಿಂಡರ್ ಆಕ್ಸಿಜನ್ ಉತ್ಪಾದನೆ ಆರಂಭಿಸಲಾಗಿದೆ. ಹೊಸ ಕಂಪ್ರೆಸ್ಸರ್ ಅಳವಡಿಸಿದರೆ ಉತ್ಪಾದನೆ ಯನ್ನು 400ರಿಂದ 500 ಸಿಲಿಂಡರ್ ಗಳಿಗೆ ಹೆಚ್ಚಿಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಯಂತ್ರೋಪಕರಣ ಖರೀದಿ ಸೇರಿದಂತೆ ಸರಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ.
ರಾಜ್ಯದ ಆಕ್ಸಿಜನ್ ಬೇಡಿಕೆಯನ್ನು ಈಡೇರಿಸಲು ಸರಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಬಳ್ಳಾರಿಯ ಜಿಂದಾಲ್ ಕಂಪೆನಿ ಪ್ರಸ್ತುತ 500 ಮೆ.ಟನ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಸರಕಾರದ ಮನವಿಯಂತೆ 1ಸಾವಿರ ಮೆ.ಟನ್ ಗೆ ಹೆಚ್ಚಿಸಲು ಒಪ್ಪಿಕೊಂಡೆದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ ಸಧ್ಯ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡಲಾಗುತ್ತಿದೆ. ವಿಐಎಸ್ ಎಲ್ ನಲ್ಲಿ ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಅಗತ್ಯವಿರುವ ಎಲ್ಲಾ ತಾಂತ್ರಿಕ ನೆರವು ಒದಗಿಸಲು ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದೇವೆ.ಎಂದು ತಿಳಿಸಿದರು. ಶಾಸಕ ಸಂಗಮೇಶ್, ರುದ್ರೇಗೌಡ, ಸಿಇಒ ವೈಶಾಲಿ, ವಿಐಎಸ್ ಎಲ್ ಸಂಸ್ಥೆಯ ಸುರ್ಜೀತ್ ಮಿಸ್ರಾ ಮತ್ತಿತರರು ಉಪಸ್ಥಿತರಿದ್ದರು