ಶಿವಮೊಗ್ಗ: ಪ್ರತಿಯೊಂದು ಮಗುವಿಗೂ ಮೌಲ್ಯಾಧಾರಿತ ಶಿಕ್ಷಣ ಅತ್ಯಂತ ಅವಶ್ಯಕ. ಬಾಲ್ಯದಿಂದಲೇ ಮೌಲ್ಯಯುತ ಅಂಶಗಳನ್ನು ಒಳಗೊಂಡತೆ ಬದುಕಿನ ಮೌಲ್ಯಗಳನ್ನು ಕಲಿಸಬೇಕಿರುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಶಿವರಾಜ್ ಎಚ್.ಪಿ. ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ಅಕ್ಷರ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ ಅಕ್ಷರ ಕಾಲೇಜಿನಲ್ಲಿ ಆಯೋಜಿಸಿದ್ದ ಮೌಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣ ಹಂತದಲ್ಲಿಯೇ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಹಾಗೂ ಸದೃಢ ರಾಷ್ಟ್ರದ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಮೌಲ್ಯಾಧಾರಿತ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ರೋಟರಿ ಜಿಲ್ಲೆ 3182ರ ವಲಯ 11ರ ಸಹಾಯಕ ಗವರ್ನರ್ ರವಿ ಕೋಟೋಜಿ ಮಾತನಾಡಿ, ರೋಟರಿ ಸಂಸ್ಥೆಗಳು ವಿಶ್ವಾದ್ಯಂತ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದ್ದು, ಪೋಲಿಯೋ ನಿರ್ಮೂಲನೆ ಕಾರ್ಯದಲ್ಲಿ ರೋಟರಿ ಸೇವೆ ಅಪಾರ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ಆಯೋಜಿಸುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಡಾ. ಸುರೇಶ್ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣವನ್ನು ಮೈಗೂಡಿಸಬೇಕಾದರೆ ಶಿಕ್ಷಣದ ಅರಿವನ್ನು, ಶಾಲೆಯಲ್ಲಿ ಮಾಡಿದಂತಹ ಪಾಠಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡುವುದು ಹೇಗೆ ಎನ್ನುವುದನ್ನು ತಿಳವಳಿಕೆ ಮೂಡಿಸಬೇಕು. ಮೊಬೈಲ್ ನಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಕ್ಷರ ಕಾಲೇಜಿನ ಪ್ರಾಚಾರ್ಯ ಮೋಹನ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಕಿರಣ್ ಕುಮಾರ್ , ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಆನ್ಸ್ ಅಧ್ಯಕ್ಷೆ ಸೀಮಾ ಶಿವರಾಜ್, ವಲಯ ಸೇನಾನಿ ಧರ್ಮೇಂದ್ರ ಸಿಂಗ್ , ಚಂದ್ರು , ಜಿಲ್ಲಾ ಸಂಯೋಜಕ ರಮೇಶ್ ಎನ್. , ಅಕ್ಷರ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
