ಶಿವಮೊಗ್ಗ, ಜ,26: :ವಿಶ್ವದ ಭೂಪಟದಲ್ಲಿ ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ ನಮ್ಮ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು ನಿಂತಿದೆ ಎಂದು‌ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು.
ಜಿಲ್ಲಾ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜ.26 ರಂದು ನಗರದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಡಾ| ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ. ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ದಿನದಿಂದ ನಮ್ಮ ಸಂವಿಧಾನ ಜಾರಿಗೆ ಬಂದಿದೆ. ಅದುವೇ ಗಣರಾಜ್ಯ ದಿನ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಹೇಳಿದಂತೆ ನ್ಯಾಯವೆಂದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆ, ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು.
ಭಾರತವನ್ನು ಬಲಾಡ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ನಮ್ಮ ಅನೇಕ ನಾಯಕರನ್ನು, ಯೋಧರು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ನವರ ನೇತೃತ್ವದ ನಮ್ಮ ಸರ್ಕಾರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನಂಬಿಕೆಯಿರಿಸಿದೆ. ಹಲವು ಹೊಸ ಜನಪರ ಯೋಜನೆಗಳ ಮೂಲಕ ಶಿಕ್ಷಣ,ಆರೋಗ್ಯ, ಕೃಷಿ ಗ್ರಾಮೀಣಾಭಿವೃದ್ಧಿ, ನೀರಾವರಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಗಮನಹರಿಸಿದೆ.
ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಮನೆಯ ಲಕ್ಷಾಂತರ ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ

  • ಶಕ್ತಿ ಯೋಜನೆಯಡಿ 3.85 ಕೋಟಿ ಮಹಿಳೆಯರು ಪ್ರಯಾಣಿಸಿ ಈ ಯೋಜನೆಯ ಸೌಲಭ್ಯ ಪಡೆದಿರುತ್ತಾರೆ.
  • ಗೃಹ ಜ್ಯೋತಿ ಯೋಜನೆಯಡಿ 4.84 ಲಕ್ಷ ಕುಟುಂಬಗಳು ರೂ.332 ಕೋಟಿ ಮೊತ್ತದ ಸಬ್ಸಿಡಿ ಪಡೆದಿದ್ದಾರೆ.
  • ಗೃಹ ಲಕ್ಷ್ಮೀ ಯೋಜನೆಯಡಿ 3.87 ಲಕ್ಷ ಫಲಾನುಭವಿ ಮಹಿಳೆಯರು ಈವರೆಗೆ ರೂ.773 ಕೋಟಿ ಮೊತ್ತದ ಪ್ರಯೋಜನವನ್ನು ಪಡೆದಿದ್ದಾರೆ.
  • ಅನ್ನ ಭಾಗ್ಯ ಯೋಜನೆಯಡಿ 3.60 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ ಉಚಿತ ಅಕ್ಕಿಯ ಜೊತೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ರೂ.170 ಗಳಂತೆ ರೂ.298 ಕೋಟಿಯಷ್ಟು ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.
  • ಯುವನಿಧಿ ಯೋಜನೆಯಡಿ 6273 ವಿದ್ಯಾರ್ಥಿಗಳಿಗೆ ರೂ.9.50 ಕೋಟಿ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ.
    ಜಿಲ್ಲೆಯ ಜನರಿಗೆ ಅನುಕೂಲವಾಗಲು ನಗರದ ಹೃದಯ ಭಾಗದಲ್ಲಿ ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗಳನ್ನು ಒಳಗೊಂಡ ನೂತನ ಜಿಲ್ಲಾಡಳಿತ ಭವನವನ್ನು ರೂ.200 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
    ನಗರದ ಹೊರವಲಯದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ಕುವೆಂಪು ವಿಮಾನ ನಿಲ್ದಾಣ ಸದಾ ಬಳಸಲು ಅನುಕೂಲವಾಗುವಂತೆ ಈಗಾಗಲೇ 10 ಕೋಟಿ ರೂ.ಗಳ ವೆಚ್ಚದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.
    ನಗರದ ಮಧ್ಯಭಾಗದಲ್ಲಿ 46 ಎಕರೆ ವಿಶಾಲ ಪ್ರದೇಶದಲ್ಲಿರುವ ಅಲ್ಲಮಪ್ರಭು ಉದ್ಯಾನವನದ ಅಭಿವೃದ್ಧಿಗೆ ಈಗಾಗಲೇ ಸರ್ಕಾರವು 5 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹಾಗೂ ಸಂವಿಧಾನದ ಮಹತ್ವವನ್ನು ಸಾರುವ ಕಾರ್ಯಕ್ರಮದ ಭಾಗವಾಗಿ ರಾಜ್ಯದ ಎಲ್ಲೆಡೆ ಸಂವಿಧಾನದ ಪೀಠಿಕೆ ವಾಚನ ನಡೆಯುತ್ತಿರುವುದು ತಮಗೆಲ್ಲ ತಿಳಿದ ಸಂಗತಿಯಾಗಿದೆ. ಇಂದು ನಗರದ ಅಲ್ಲಮಪ್ರಭು ಉದ್ಯಾನವನದಲ್ಲಿ ಸಂವಿಧಾನ ಪೀಠಿಕೆಯನ್ನು ಅನಾವರಣ ಗೊಳಿಸಲಾಗುತ್ತಿದೆ.
    ಸೊರಬ ತಾಲೂಕಿನ ವರದಾ ನದಿಗೆ ಅಡ್ಡಲಾಗಿ ಸರಣಿ ಬ್ಯಾರೇಜ್ ಗಳ ನಿರ್ಮಾಣಕ್ಕಾಗಿ 53 ಕೋಟಿಗಳ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯಿಂದ ನದಿ ಪಾತ್ರದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
    ರಾಜ್ಯಾದ್ಯಾಂತ ಸುಮಾರು 13,500 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಶಿಕ್ಷಕರ ಆಯ್ಕೆಪಟ್ಟಿಯಲ್ಲಿ 436 ಮಂದಿ ಆಯ್ಕೆಯಾಗಿದ್ದು, ಈಗಾಗಲೇ 398 ಅಭ್ಯರ್ಥಿಗಳು ನೇಮಕಾತಿ ಹೊಂದಿದ್ದಾರೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಒಂದೇ ಸೂರಿನಲ್ಲಿ ಎಲ್.ಕೆ.ಜಿ. ಯಿಂದ ಪಿ.ಯು.ಸಿ ವರೆಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ 10 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದೆ. ಈ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು 8.00ಕೋಟಿ ಹಣ ಬಿಡುಗಡೆಗೊಳಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 27 ಶಾಲೆಗಳನ್ನು ಆರಂಭಿಸಲು ಯೋಜಿಸಿದೆ.
    ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಸಕಾಲದಲ್ಲಿ ಮಳೆಯಾಗಿದ್ದರಿಂದಾಗಿ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆ – ಕಾಲುವೆ. ಜಲಾಶಯಗಳು ಭರ್ತಿಯಾಗಿವೆ. ಕೃಷಿ ಚಟುವಟಿಕೆಗಳು ನಿರಂತರವಾಗಿದ್ದು, ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದಿದೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಕಾಣುವಂತಾಗಿದೆ.
    ಅಂತೆಯೇ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಲಾಗಿದೆ. ಈಸಮಸ್ಯೆಗೆ ತ್ವರಿತಗತಿಯಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ಸುಪ್ರೀಂ‌ಕೋರ್ಟ್ ನಲ್ಲಿ ದಾಖಲಿಸಿರುವ ಮೊಕದ್ದಮೆಯನ್ನು ನಿಭಾಯಿಸಲು ರಾಜ್ಯ ಸರ್ಕಾರವು ಕಾನೂನು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿ, ಉತ್ತಮ ನ್ಯಾಯವಾದಿಯನ್ನು ನೇಮಿಸಿದೆ. ಶೀಘ್ರದಲ್ಲಿ ಜನಪರವಾದ ತೀರ್ಪು ಬರುವ ನಿರೀಕ್ಷೆ ನಮ್ಮದಾಗಿದೆ.
    ಸಹಸ್ರಾರು ಸಂಖ್ಯೆಯ ನವಜಾತ ಶಿಶುಗಳಿಗೆ ಅನುಕೂಲವಾಗುವಂತೆ ಸಿಮ್ಸ್ ಸಹಯೋಗದೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 75ಲಕ್ಷ ರೂ.ಗಳ ವೆಚ್ಚದಲ್ಲಿ ಎದೆಹಾಲು ಸಂಗ್ರಹ ಕೇಂದ್ರವನ್ನು ಆರಂಭಿಸಲಾಗಿದೆ. ಸುಮಾರು 600ಕ್ಕೂ ಹೆಚ್ಚಿನ ಮಕ್ಕಳು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
    ಕರ್ನಾಟಕ ಬೈನ್ ಹೆಲ್ತ್ ಇನಿಶಿಯೇಟಿವ್ ಯೋಜನೆಯಡಿ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಮೆದುಳಿನ ಆರೋಗ್ಯದ ಕುರಿತು ವಿಶೇಷ ಕಾರ್ಯಕ್ರಮ ಹಾಗೂ ತಪಾಸಣೆಗಳನ್ನು ನಡೆಸಲಾಗುತ್ತಿದೆ.
    ವಿಶೇಷವಾಗಿ ಶಿಕ್ಷಣ, ಸಂಪರ್ಕ, ಮಾರುಕಟ್ಟೆ ಪ್ರವಾಸೋದ್ಯಮ, ಕೈಗಾರಿಕೆ ಮತ್ತಿತರ ಕ್ಷೇತ್ರಗಳನ್ನು ಒಳಗೊಂಡು ಜಿಲ್ಲೆಯನ್ನು ಎಲ್ಲಾ ಆಯಾಮಗಳಲ್ಲೂ, ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ದೊರೆಯುವಂತೆ ಸವಾರ್ಂಗೀಣ ವಿಕಾಸಗೊಳಿಸುವ ಅಭಿಲಾಷೆ ನಮ್ಮದಾಗಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಸಾಧಿಸುತ್ತಿದೆ.
    ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಇತರರ ಹಕ್ಕುಗಳನ್ನು ಗೌರವಿಸುವ, ಶತಮಾನಗಳಿಂದ ನಾವು ಕಾಯ್ದುಕೊಂಡು ಬಂದಿರುವ ಬಹು ಸಂಸ್ಕೃತಿಯನ್ನು ಉಳಿಸಲು ನಾವು ಪಣತೊಡಬೇಕಾಗಿದೆ. ಅಂಬೇಡ್ಕರ ರವರ ಆಶಯಗಳನ್ನು ಅರಿತು ಅದರಂತೆ ನಡೆದುಕೊಳ್ಳುವುದು ಅಗತ್ಯವಾಗಿದೆ ಎಂದರು.
    ಪೆರೇಡ್ ಕಮಾಂಡರ್ ಪ್ರಶಾಂತ್ ಕೆ.
    ಎಸ್. ಕನ್ನಡದಲ್ಲಿ‌ ಆದೇಶ ನೀಡಿದರು.‌ ೨೮ ತಂಡಗಳು ಕವಾಯಿತಿನಲ್ಲಿ ಪಾಲ್ಗೊಂಡಿದ್ದವು.
    ಪ್ರಥಮ ಬಾರಿಗೆ ಪೌರ ಕಾರ್ಮಿಕರ ವಿಶೇಷ ತುಕಡಿ ಶಿಸ್ತುಬದ್ದ ಪಥ ಸಂಚಲನ ನಡೆಸಿ, ಎಲ್ಲರ ಗಮನ ಸೆಳೆಯಿತು.
    ಶಾಲಾ ವಿದ್ಯಾರ್ಥಿಗಳು ನೃತ್ಯ ರೂಪಕ ಪ್ರದರ್ಶನ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
    ಅತ್ಯುತ್ತಮ ಸೇವೆ ಸಲ್ಲಿಸಿದ ೧೧ ಜನ‌ ಸರ್ಕಾರಿ ನೌಕರರನ್ನು‌ ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
    ಶಿಸ್ತುಬದ್ದ ಮತ್ತು ಆರ್ಕಷಕ ಪಥಸಂಚಲನದಲ್ಲಿ ಎನ್ ಸಿ ಸಿ‌ ಬಾಲಕಿಯರು ಪ್ರಥಮ, ಸೇಕ್ರೆಡ್ ಹಾರ್ಟ್ ಶಾಲೆ ದ್ವಿತೀಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೃತೀಯ ಬಹುಮಾನ ಪಡೆದರು.
    ಸಾಧನೆ ಮಾಡಿದ ಅಧಿಕಾರಿಗಳು, ವಿದ್ಯಾರ್ಥಿಗಳ
    ಮುಖ್ಯ ಅತಿಥಿಗಳಾಗಿ, ಶಾಸಕರಾದ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿಗಳು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಹಾನಗರ ಪಾಲಿಕೆ ಆಯಕ್ತರು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

error: Content is protected !!